ಭಟ್ಕಳ: ಇಲ್ಲಿನ ವಿ.ಕೆ.ಆರ್.ಟಿ.ಸಿ. ಬಸ್ ನಿಲ್ದಾಣದ ಶೌಚಾಲಯ ಸೊಳ್ಳೆ ಉತ್ಪತ್ತಿ ಕೇಂದ್ರವಾಗಿ ಮಾರ್ಪಟ್ಟಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಶೌಚಾಲಯದಿಂದ ಹೊರಬರುವ ಮಲಮೂತ್ರ ಮತ್ತು ಹೊಲಸು ಮಳೆ ನೀರಿನೊಂದಿಗೆ ವಿಲೀನಗೊಂಡು ಬಸ್ ನಿಲ್ದಾಣ ಮತ್ತು ಅದರ ಹಿಂದೆ ಇರುವ ಜನವಸತಿ ಪ್ರದೇಶಗಳಿಗೆ ಸೇರುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಹುಟ್ಟಲು ಕಾರಣವಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ರಾಜ್ಯದಲ್ಲಿ ದಿನೇ ದಿನೆ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿವೆ. ಭಾನುವಾರ ಒಂದೇ ದಿನದಲ್ಲಿ ೧೫೯ ಹೊಸ ಪ್ರಕರಣಗಳು ವರದಿಯಾಗಿವೆ. ಇವರಲ್ಲಿ ೩೫ ವ್ಯಕ್ತಿಗಳು ಆಸ್ಪತ್ರೆಗೆ ದಾಖಲಾಗಿದ್ದು, ಪರಿಸ್ಥಿತಿಯ ತೀವ್ರತೆಯನ್ನು ಎತ್ತಿ ತೋರಿಸುತ್ತದೆ.
ಇದನ್ನೂ ಓದಿ : ತುಂಬಿ ತುಳುಕುತ್ತಿದೆ ಭಟ್ಕಳದ ಭೀಮಾನದಿಯ ಕಡವಿನಕಟ್ಟೆ ಜಲಾಶಯ
ಭಟ್ಕಳ ತಾಲೂಕಿನಲ್ಲಿ ಜನವರಿ ೨೦೨೪ ರಿಂದ ಇಲ್ಲಿಯವರೆಗೆ ೧೦ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ ಎಂದು ಸರ್ಕಾರಿ ಆಸ್ಪತ್ರೆ ಮೂಲಗಳು ಬಹಿರಂಗಪಡಿಸಿವೆ. ಪ್ರಸ್ತುತ ಒಬ್ಬ ರೋಗಿಯು ರೋಗದ ವಿರುದ್ಧ ಹೋರಾಡುತ್ತಿದ್ದಾರೆ. ಹೆಚ್ಚುತ್ತಿರುವ ಈ ಪ್ರವೃತ್ತಿ ಭಟ್ಕಳ ಮತ್ತು ಸುತ್ತಮುತ್ತಲಿನ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ನಾರಾಯಣ ಗುರು ವಸತಿ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ
ಇಂಥ ಪರಿಸ್ಥಿತಿಯಲ್ಲಿ ಭಟ್ಕಳ ಬಸ್ ನಿಲ್ದಾಣದ ಶೌಚಾಲಯ ವ್ಯವಸ್ಥೆ ಡೆಂಗ್ಯೂ ಜ್ವರಕ್ಕೆ ಕಾರಣವಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಕೊಳಚೆಯಿಂದಾಗಿ ಬಸ್ ನಿಲ್ದಾಣದ ಶೌಚಾಲಯವು ಸೊಳ್ಳೆ ಉತ್ಪತ್ತಿ ಕೇಂದ್ರವಾಗಿ ಮಾರ್ಪಟ್ಟಿದೆ. ನಿತ್ಯ ನೂರಾರು ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬರುತ್ತಿದ್ದು, ಅನೈರ್ಮಲ್ಯದಿಂದ ಮಲೇರಿಯಾದಂತಹ ಇತರ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ.
ಇದನ್ನೂ ಓದಿ : ದೇವಸ್ಥಾನದಲ್ಲಿ ದೈವತ್ವಕ್ಕೆ ಹೆಚ್ಚಿನ ಮಹತ್ವ : ಪರ್ತಗಾಳಿ ಜೀವೋತ್ತಮ ಮಠಾಧೀಶ
ಸಾರಿಗೆ ಸಂಸ್ಥೆಯ ಅಧಿಕಾರಿಗಳು ಬಸ್ ನಿಲ್ದಾಣದ ಹದಗೆಟ್ಟ ಪರಿಸ್ಥಿತಿಯನ್ನು ನಿರ್ಲಕ್ಷಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶೌಚಾಲಯದ ಚೇಂಬರ್ ತುಂಬಿ ಹೋಗಿದೆ. ಅದನ್ನು ಸರಿಯಾಗಿ ಮುಚ್ಚದೆ ಮಲಮೂತ್ರ ಹೊರಗಡೆ ಹರಿಯುತ್ತಿದೆ. ಇದರಿಂದಾಗಿ ಡೆಂಗ್ಯೂ ಮತ್ತು ಮಲೇರಿಯಾ ರೋಗ ಹರಡುವ ಸಾಧ್ಯತೆ ಹೆಚ್ಚಿದೆ. ಅಧಿಕಾರಿಗಳು ಮನಸ್ಸು ಮಾಡಿದರೆ ಇದನ್ನು ತಡೆಗಟ್ಟಬಹುದು ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಿದ್ದಾರೆ.
ಅಧಿಕಾರಿಗಳು ಹೆಚ್ಚು ಜಾಗರೂಕರಾಗಿದ್ದರೆ, ಬಸ್ ನಿಲ್ದಾಣದಲ್ಲಿ ಇಂತಹ ವಿಷಮ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಇದು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಾಗಿದೆ’ ಎಂದು ಸಮೀಪದ ನಿವಾಸಿಯೊಬ್ಬರು ಟೀಕಿಸಿದ್ದಾರೆ.
ಇದನ್ನೂ ಓದಿ : ‘ನಮ್ಮ ಕ್ಲಿನಿಕ್’ ಜಾಲಿಯಲ್ಲಿ ಉದ್ಘಾಟಿಸಿದ ಸಚಿವ ಮಂಕಾಳ ವೈದ್ಯ
ಇನ್ನಾದರೂ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಸಚಿವರು ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಬಸ್ ನಿಲ್ದಾಣದಲ್ಲಿನ ನೈರ್ಮಲ್ಯ ಸಮಸ್ಯೆಗಳಿಗೆ ಸಮಗ್ರ ಪರಿಹಾರ ಮತ್ತು ಆರೋಗ್ಯದ ಅಪಾಯವನ್ನು ತಡೆಗಟ್ಟಲು ಅವರು ಒತ್ತಾಯಿಸಿದ್ದಾರೆ.