ಭಟ್ಕಳ: ಕಳೆದ ತಿಂಗಳು ಭಟ್ಕಳದಲ್ಲಿ ನಡೆದ ಸರಗಳ್ಳತನ ಪ್ರಕರಣ ಸಂಬಂಧಿಸಿದಂತೆ ಇಬ್ಬರು ಮಹಿಳಾ ಆರೋಪಿಗಳನ್ನು ಕಾರವಾರ ಜಿಲ್ಲಾ ಕಾರಾಗೃಹದಿಂದ ಇಂದು(ಮಾ.೫) ಭಟ್ಕಳ ನಗರ ಠಾಣೆಗೆ ವಿಚಾರಣೆಗಾಗಿ ಕೆರೆತರಲಾಗಿದೆ.
ವಿಡಿಯೋ ವರದಿ ನೋಡಿ : https://fb.watch/qCSIHjw_zz/?mibextid=Nif5oz
ತಮಿಳುನಾಡು ಕೋಯಿಮತ್ತೂರಿನವರಾದ ಸಂಧ್ಯಾ ಸಂಜಯ ಮತ್ತು ರಾಸಾತಿ ಮುರುಗೆ ಈ ಆರೋಪಿಗಳಾಗಿದ್ದಾರೆ. ಇವರು ಬುರ್ಖಾ ಧರಿಸಿ ಬಸ್ನಲ್ಲಿ ಪ್ರಯಾಣ ಮಾಡುತ್ತ ಇನ್ನಿತರ ಪ್ರಯಾಣಿಕರ ಆಭರಣ ಅಪಹರಿಸುವ, ಪಿಕ್ ಪಾಕೆಟ್ ಕೆಲಸವನ್ನು ಮಾಡುತ್ತಿದ್ದ ಬಗ್ಗೆ ಕುಮಟಾ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದರ ಬೆನ್ನಲ್ಲೇ ಪೋಲೀಸ್ ಇಲಾಖೆ ಈ ಬಗ್ಗೆ ಮಾಹಿತಿ ಸಂಗ್ರಹಿಸಿ, ಇವರು ಸಂಚರಿಸುವ ವಿಡಿಯೋವನ್ನು ಸಿಸಿಟಿವಿಯಿಂದ ಸಂಗ್ರಹಿಸಿತ್ತು. ಈಗಾಗಲೇ ಕುಮಟಾದಲ್ಲಿ ೨, ಹೊನ್ನಾವರ ೧, ಭಟ್ಕಳ ಹಾಗೂ ಬ್ರಹ್ಮಾವರದಲ್ಲಿ ತಲಾ ಒಂದೊಂದು ಸರಗಳ್ಳತನ ಪ್ರಕರಣ ವರದಿಯಾಗಿತ್ತು. ಸಿಸಿಟಿವಿ ವಿಡಿಯೋ ಆಧರಿಸಿ ಪೊಲೀಸರು ಶೋಧ ಕಾರ್ಯ ಪ್ರಾರಂಭಿಸಿದ್ದರು. ನಂತರ ಶಂಕಿತ ಮಹಿಳೆಯರನ್ನು ಕೆಲ ದಿನಗಳ ಹಿಂದಷ್ಟೇ ಕುಮಟಾ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ : ನಕಲಿ ಡ್ರೈವಿಂಗ್ ಲೈಸೆನ್ಸ್ ಪತ್ತೆ : ಭಟ್ಕಳದ ಇಬ್ಬರ ಬಂಧನ
ಇದನ್ನೂ ಓದಿ : ಕಂಟೇನರ್ ವಾಹನದಲ್ಲಿ ಸಾಗಿಸುತ್ತಿದ್ದ ೧೫ ಎತ್ತುಗಳ ರಕ್ಷಣೆ
ಬಂಧಿಸಿದ್ದು ಹೇಗೆ?
ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಈ ಇಬ್ಬರು ಬುರ್ಖಾಧಾರಿ ಹೆಂಗಸರು ಸೀಟು ಬಿಟ್ಟುಕೊಟ್ಟ ನೆಪವೊಡ್ಡಿ ಆ ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯ ಸರ ಕಳವು ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಇಬ್ಬರು ಮಹಿಳೆಯರನ್ನು ಕುಮಟಾ ಪೊಲೀಸರು ಬಂಧಿಸಿದ್ದರು.
ಹೊಲನಗದ್ದೆ ಗ್ರಾ.ಪಂ ವ್ಯಾಪ್ತಿಯ ಕಡ್ಲೆ ಗ್ರಾಮದ ವಿಮಲಾ ವಿಷ್ಣು ನಾಯ್ಕ ಅವರು ಕೆಲ ದಿನಗಳ ಹಿಂದೆ ಮಾಂಗಲ್ಯ ಸರ ಕಳೆದುಕೊಂಡು ವಂಚನೆಗೆ ಒಳಗಾಗಿದ್ದರು. ಇವರು ಹೊನ್ನಾವರದಿಂದ ಮಂಗಳೂರು-ಲಕ್ಷ್ಮೇಶ್ವರ ಕೆ.ಎಸ್.ಆರ್.ಟಿ.ಸಿ. ಬಸ್ನಲ್ಲಿ ಪ್ರಯಾಣಿಸಿಕೊಂಡು ಕುಮಟಾಕ್ಕೆ ಬರುತ್ತಿರುವಾಗ ಈ ಘಟನೆ ನಡೆದಿತ್ತು. ಈ ಕುರಿತು ವಿಮಲಾ ಅವರು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ತನಿಖೆ ಚುರುಕುಗೊಳಿಸಿದ ಪೊಲೀಸರು ಕುಮಟಾ ಬಸ್ ನಿಲ್ದಾಣ ಸೇರಿ ಹಲವೆಡೆ ಹದ್ದಿನ ಕಣ್ಣಿಟ್ಟಿದ್ದರು. ಈ ವೇಳೆ ಕುಮಟಾ ಬಸ್ ನಿಲ್ದಾಣದಲ್ಲಿ ಈ ಇಬ್ಬರು ಮಹಿಳೆಯರ ಚಲನವಲನ ಗಮನಿಸಿದ ಪೊಲೀಸರು ವಶಕ್ಕೆ ಪಡೆದು ಬಂಧಿಸಿ, ವಿಚಾರಣೆಗೊಳಪಡಿಸಿದ್ದರು. ಈ ಇಬ್ಬರೂ ಆಪಾದಿತೆಯರಿಗೆ ನ್ಯಾಯಾಲಯಕ್ಕೆ ಹಾಜರಪಡಿಸಿ, ಕಾರವಾರದ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.
ವಿವಿಧೆಡೆ ಕಳ್ಳತನದಲ್ಲಿ ಭಾಗಿ :
ಈ ಇಬ್ಬರು ಮಹಿಳೆಯರು ಕುಮಟಾ ಪೊಲೀಸ್ ಠಾಣೆಯ ಪ್ರಕರಣವಲ್ಲದೇ ಹೊನ್ನಾವರ ಪೊಲೀಸ ಠಾಣೆ ಮತ್ತು ಭಟ್ಕಳ ಶಹರ ಪೊಲೀಸ ಠಾಣೆಯಲ್ಲಿಯೂ ಕೂಡ ಅಪರಾಧ ಕೃತ್ಯವೆಸಗಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಅಲ್ಲದೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಮುಖಾಂತರ ಆಪಾದಿತೆಯರ ಫಿಂಗರ್ ಪ್ರಿಂಟ್ ಪಡೆದಾಗ ಆರೋಪಿತರಾದ ತಮಿಳುನಾಡು ಕೋಯಿಮತ್ತೂರಿನವರಾದ ಸಂದ್ಯಾ ಸಂಜಯ (೪೦) ಮತ್ತು ರಾಸಾತಿ ಮುರುಗೆ (೨೪) ವಿರುದ್ಧ ಹಾಸನ ಬಡಾವಣೆ ಪೊಲೀಸ ಠಾಣೆ, ಮಂಗಳೂರು ದಕ್ಷಿಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿರುವುದು ಗೊತ್ತಾಗಿದೆ. ಈ ಎರಡೂ ಪ್ರಕರಣಗಳು ವಿಚಾರಣೆಯಲ್ಲಿ ಬಾಕಿ ಇವೆ. ಇದರ ಬೆನ್ನಲ್ಲೆ ಭಟ್ಕಳ ಸರಗಳ್ಳತನ ಪ್ರಕರಣದ ಬಗ್ಗೆ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಇಂದು ಈ ಇಬ್ಬರು ಮಹಿಳಾ ಆರೋಪಿಗಳನ್ನು ಕಾರವಾರದಿಂದ ಭಟ್ಕಳಕ್ಕೆ ಬಸ್ ನಲ್ಲಿ ಕರೆತರಲಾಗಿದೆ. ನಗರ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.