ಬೆಳಗಾವಿ : ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಟಿಯು ಘಟಿಕೋತ್ಸವ ಎರಡನೇ ಭಾಗವನ್ನು ಮಾರ್ಚ್ ೭ರಂದು ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ.
ಇದನ್ನೂ ಓದಿ : “ಡಮಾಮಿ” ಸಿದ್ದಿ ಸಮುದಾಯ ಪ್ರವಾಸೋದ್ಯಮ ಮನೆ ಉದ್ಘಾಟನೆ
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿದ್ಯಾಶಂಕರ್ ಎಸ್. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಉದ್ಯೋಗಕ್ಕೆ ಸೇರಿಕೊಳ್ಳುವ ಸಮಯದಲ್ಲೇ ಪದವಿ ಪ್ರಮಾಣಪತ್ರಗಳನ್ನು ಸಲ್ಲಿಸಲು ಸೂಚಿಸುತ್ತಿರುವುದರಿಂದ ವಿಶ್ವವಿದ್ಯಾಲಯವು ಒಂದು ಶೈಕ್ಷಣಿಕ ವರ್ಷದಲ್ಲಿ ಎರಡು ಘಟಿಕೋತ್ಸವಗಳನ್ನು ನಡೆಸಲು ಯೋಜಿಸಲಾಗಿದೆ. ಇದರ ಅಂಗವಾಗಿ ವಿಟಿಯು ಘಟಿಕೋತ್ಸವ ಭಾಗ -೧ನ್ನು ಕಳೆದ ೨೦೨೩ರ ಆಗಸ್ಟ್ ೧ರಂದು ಹಮ್ಮಿಕೊಂಡು ಸ್ನಾತಕ (ಯು ಜಿ – ಪದವಿ)ಮತ್ತು ಸಂಶೋಧನಾ ಪದವಿಗಳನ್ನು ನೀಡಲಾಗಿದೆ.
ಅದರಂತೆ ಘಟಿಕೋತ್ಸವ ಭಾಗ -೨ನ್ನು ಸ್ನಾತಕೋತ್ತರ (ಪಿಜಿ) ಅಂದರೆ ಎಂ.ಬಿ.ಎ., ಎಂ.ಸಿ.ಎ., ಎಂ.ಟೆಕ್., ಎಂ.ಪ್ಲಾನ್. ಹಾಗೂ ಸಂಶೋಧನಾ ಪದವಿ (ಪಿ. ಎಚ್ ಡಿ., ಎಂ. ಸಿ. , ಇಂಟಿಗ್ರೇಟೆಡ್ ಡುಯಲ್ ಡಿಗ್ರಿ) ಗಳನ್ನು ನೀಡಲಾಗುತ್ತಿದೆ. ಮಾರ್ಚ್ ೭ರಂದು ಬೆಳಗ್ಗೆ ೧೧.೩೦ಕ್ಕೆ ವಿ.ತಾ.ವಿ.“ಜ್ಞಾನಸಂಗಮ” ಆವರಣದ ಡಾ. ಎ. ಪಿ. ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ಘಟಿಕೋತ್ಸವ ಆಯೋಜಿಸಲಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಉಪಸ್ಥಿತರಿರುವರು. ರಾಮನ್ ಮ್ಯಾಗ್ಸಸ್ಸೆ ಹಾಗೂ ರಾಜ್ಯ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಹರೀಶ್ ಹಂದೆ ಮುಖ್ಯ ಅತಿಥಿಗಳಾಗಿ ಘಟಿಕೋತ್ಸವ ಭಾಷಣ ಮಾಡುವರು ಎಂದು ವಿಟಿಯು ಕುಲಪತಿ ತಿಳಿಸಿದ್ದಾರೆ.
ಬಸ್ಗಳ ವ್ಯವಸ್ಥೆ :
ಘಟಿಕೋತ್ಸವಕ್ಕೆ ಆಗಮಿಸುವ ವಿದ್ಯಾರ್ಥಿಗಳು, ಪಾಲಕರು ಹಾಗೂ ಆಹ್ವಾನಿತರಿಗೆ ಗುರುವಾರ, ದಿನಾಂಕ 7 ರಂದು ಕೇಂದ್ರ ಬಸ್ ನಿಲ್ದಾಣ, ಬೆಳಗಾವಿಯಿಂದ ಬೆಳಗ್ಗೆ 7.39 ರಿಂದ 9.೦೦ ಘಂಟೆಯವರೆಗೆ ಬಸ್ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ೨೩ನೇ ಘಟಿಕೋತ್ಸವ (ಭಾಗ-೨) ಸಮಯದಲ್ಲಿ ಎಂ.ಬಿ.ಎ.೪೫೧೪, ಎಂ.ಸಿ.ಎ.೪೦೨೪, ಎಂ.ಟೆಕ್ ೯೨೦, ಎಂ.ಆರ್ಚ ೪೪, ಎಂ.ಪ್ಲಾನ್ ೨೭, ಹಾಗೂ ಸಂಶೋಧನಾ ಪದವಿಗಳಾದ ಪಿ.ಎಚ್.ಡಿ ೬೬೭, ಎಂ.ಎಸ್ಸಿ (ಎಂಜಿನಿಯರಿಂಗ್)-೦೨, ಹಾಗೂ ಇಂಟಿಗ್ರೇಟೆಡ್ ಡುಯಲ್ ಡಿಗ್ರಿ ಟು ರಿಸರ್ಚ ೨ ಪದವಿಗಳನ್ನು ನೀಡಲಾಗುತ್ತಿದೆ ಎಂದರು.
ಚಿನ್ನದ ಪದಕ ವಿಜೇತರು:
ಬೆಂಗಳೂರಿನ ಆಯ್.ಸಿ.ಎಂ.ಆರ್. ಇನ್ಸಟಿಟ್ಯೂಟ್ನ ತನು ಜಿ.-೪, ಹುಬ್ಬಳ್ಳಿಯ ಕೆ.ಎಲ್.ಇ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಅಕ್ಷತಾ ಎಸ್. ನಾಯ್ಕ-೩, ದಾವಣಗೆರೆಯ ಪೂಜಾ ಎಂ.-೩, ಬೆಳಗಾವಿ ಎಸ್.ಜಿ.ಬಾಳೇಕುಂದ್ರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಕ್ರಾಂತಿ ಉತ್ತಮ ಮೋರೆ-೨, ಚಿಕ್ಕಮಗಳೂರಿನ ಆದಿಚುಂಚನಗಿರಿ ಇನ್ಸಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಚೇತನ ಎಚ್.ಪಿ.-೨ ಹಾಗೂ ದಾವಣಗೆರೆಯ ಯು.ಬಿ.ಡಿ.ಟಿ. ಕಾಲೇಜಿನ ನಿತ್ಯಾ ಎ.ಎಸ್-೨ ಸೇರಿದಂತೆ ಒಟ್ಟು ೧೬ ಚಿನ್ನದ ಪದಕಗಳನ್ನು ವಿತರಿಸಲಾಗುವುದು ಎಂದು ಕುಲಪತಿ ವಿದ್ಯಾಶಂಕರ್ ತಿಳಿಸಿದರು.
ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ, ಮೌಲ್ಯಮಾಪನ ಕುಲಸಚಿವ ಪ್ರೊ. ಟಿ.ಎನ್. ಶ್ರೀನಿವಾಸ ಉಪಸ್ಥಿತರಿದ್ದರು.