ಭಟ್ಕಳ ಡೈರಿ ವರದಿ
ಭಟ್ಕಳ: ಕನ್ನಡ ರಂಗಭೂಮಿಯಲ್ಲಿ ತನ್ನದೇ ಛಾಪು ಮೂಡಿಸಿರುವ ಭಾಸ್ಕರ ನಾಯ್ಕ ಹಡೀನ ಸರ್ಪನಕಟ್ಟೆ ಅವರಿಗೆ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ತಾಲೂಕು ಆಡಳಿತದಿಂದ ಗೌರವ ಸಲ್ಲಿಸಲಾಯಿತು. ಭಟ್ಕಳ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಖ್ಯಾತ ನಾಟಕಕಾರ, ನಿರ್ದೇಶಕ ಹಾಗೂ ರಂಗಭೂಮಿ ಕಲಾವಿದ ಭಾಸ್ಕರ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ರಂಗಭೂಮಿಯಲ್ಲಿ ಕಥೆ, ನಿರ್ದೇಶನ ಹಾಗೂ ಸಂಭಾಷಣೆಯ ಮೂಲಕ ಹಲವು ನಾಟಕಗಳಿಗೆ ಜೀವ ತುಂಬಿರುವ ಭಾಸ್ಕರ ನಾಯ್ಕ, ಇತ್ತೀಚೆಗೆ ರಚಿಸಿ ನಿರ್ದೇಶಿಸಿರುವ ‘ದೈವ ಸಂಕಲ್ಪ’ ನಾಟಕದ ಮೂಲಕ ಗಮನ ಸೆಳೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ವಿವಿಧೆಡೆ ಈ ನಾಟಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ನಾಟಕ ರಚನೆ ಮತ್ತು ನಿರ್ದೇಶನದ ಜೊತೆಗೆ ಹಲವು ನಾಟಕಗಳಲ್ಲಿ ಕಲಾವಿದರಾಗಿಯೂ ಅವರು ಅಭಿನಯಿಸಿದ್ದಾರೆ. ಸ್ಥಳೀಯ ಕಲಾವಿದರಿಗೆ ವೇದಿಕೆ ಕಲ್ಪಿಸುವುದು, ಕಲೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ ನೀಡುವುದು ಸೇರಿದಂತೆ ರಂಗಭೂಮಿ ಕ್ಷೇತ್ರದಲ್ಲಿ ಅವರು ನೀಡುತ್ತಿರುವ ಕೊಡುಗೆಯನ್ನು ಗುರುತಿಸಿ ತಾಲೂಕು ಆಡಳಿತ ಗೌರವಿಸಿದೆ.
ಕಾರ್ಯಕ್ರಮದಲ್ಲಿ ವಿಧಾನಸಭೆ ಉಪಾಧ್ಯಕ್ಷ ಹಾಗೂ ಸ್ಥಳೀಯ ಶಾಸಕ ಮಂಕಾಳ ವೈದ್ಯ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯರು ಭಾಸ್ಕರ ನಾಯ್ಕ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಸ್ಥಳೀಯ ಪ್ರತಿಭೆಗಳಿಗೆ ರಂಗವೇದಿಕೆ ಒದಗಿಸುತ್ತಾ, ಕನ್ನಡ ನಾಡಿನ ಕಲಾ ಪರಂಪರೆಯನ್ನು ಮುಂದುವರಿಸುವಲ್ಲಿ ಭಾಸ್ಕರ ನಾಯ್ಕ ಅವರಂತಹ ಕಲಾವಿದರ ಕೊಡುಗೆ ಮಹತ್ವದ್ದಾಗಿದೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ :
ಭಟ್ಕಳದಲ್ಲಿ ಕಳೆದ ವಾರ ಏನೇನಾಯಿತು? ಪ್ರಮುಖ ಸುದ್ದಿಗಳ ಸಂಪೂರ್ಣ ನೋಟ
ಭಟ್ಕಳದಲ್ಲಿ ಭೀಕರ ರಸ್ತೆ ಅಪಘಾತ: ಲಾರಿಯ ಅಡಿಗೆ ಸಿಲುಕಿ ಬೈಕ್ ಸವಾರ ಸಾವು




