ಭಟ್ಕಳ ಡೈರಿ ವರದಿ
ಭಟ್ಕಳ: ಪ್ರತಿಫಲದ ನಿರೀಕ್ಷೆಯಿಲ್ಲದೆ ಅನಾಥ ಶವಗಳಿಗೆ ಗೌರವಯುತ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಮಾನವೀಯ ಸೇವೆಯಲ್ಲಿ ವಿಶಿಷ್ಟ ಗುರುತಿಸಿಕೊಂಡಿರುವ ಭಟ್ಕಳದ ಸಮಾಜಸೇವಕ ಮಂಜು ನಾಯ್ಕ ಮುಠಳ್ಳಿ ಅವರನ್ನು ಗೌರವಿಸಲಾಯಿತು. ನಗರದ ಆಸರಕೇರಿಯ ಭುವನೇಶ್ವರಿ ಕನ್ನಡ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಮಂಜು ನಾಯ್ಕ ಮುಠಳ್ಳಿ ಅವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವ ಸಲ್ಲಿಸಲಾಯಿತು.
ನೂರಾರು ಅನಾಥ ಶವಗಳ ಅಂತ್ಯಕ್ರಿಯೆಯನ್ನು ನೆರವೇರಿಸಿರುವ ಮಂಜು ನಾಯ್ಕ ಅವರ ಸೇವೆ, ಸಂಕಷ್ಟದ ಸಂದರ್ಭದಲ್ಲೂ ಮಾನವೀಯತೆ ಮೆರೆಯುವ ಕಾರ್ಯಕ್ಕೆ ಸಾಕ್ಷಿಯಾಗಿದೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಅನಾಥ ಶವಗಳಿಗೆ ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸುತ್ತಿರುವ ಅವರ ಸೇವಾ ಮನೋಭಾವಕ್ಕೆ ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ.
ಕಾರ್ಯಕ್ರಮದಲ್ಲಿ ಶ್ರೀ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಅಣ್ಣಪ್ಪ ಎಸ್. ನಾಯ್ಕ, ಆಸರಕೇರಿಯ ಶ್ರೀ ನಿಚ್ಛಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ನಾಗೇಂದ್ರ ನಾಯ್ಕ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ :
ಕನ್ನಡ ರಾಜ್ಯೋತ್ಸವ: ರಂಗಭೂಮಿ ಕಲಾವಿದ ಭಾಸ್ಕರ ನಾಯ್ಕ ಹಡೀನ ಸರ್ಪನಕಟ್ಟೆಗೆ ತಾಲೂಕು ಆಡಳಿತದ ಸನ್ಮಾನ




