ಬೆಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿಎಸ್‌ವೈ, “ತಾಯಿ ಮಗಳು ತೊಂದರೆಯಲ್ಲಿದ್ದೇವೆ ಎಂದು ಹೇಳುತ್ತಾ ಕಣ್ಣೀರು ಹಾಕಿಕೊಂಡು ಬಂದಿದ್ದರು. ಅವರಿಗೆ ಸಹಾಯ ಮಾಡಿದ್ದೀನಿ. ಆದರೆ, ಈಗ ನನ್ನ ವಿರುದ್ಧವೇ ದೂರು ನೀಡಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ : ವಿವಿಧ ಮೋರ್ಚಾಗಳ ಅಧ್ಯಕ್ಷ-ಪ್ರ.ಕಾರ್ಯದರ್ಶಿಗಳ ನೇಮಕ

ಬೆಂಗಳೂರಿನ ಡಾಲರ್ಸ್‌ ಕಾಲನಿಯಲ್ಲಿರುವ ತಮ್ಮ ಮನೆಯ ಬಳಿ ತುರ್ತು ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಬಿಎಸ್‌ವೈ “ನನ್ನ ಮೇಲೆ ಯಾರೋ ಒಬ್ಬ ಹೆಣ್ಣು ಮಗಳು ಕಂಪ್ಲೇಟ್ ಕೊಟ್ಟಿದ್ದಾರೆ ಅಂತ ಗೊತ್ತಾಯ್ತು. ಯಾರೋ ತಾಯಿ ಮಗಳು ಒಂದು ತಿಂಗಳ ಹಿಂದೆ ನನ್ನ ಹತ್ತಿರ ಬಂದಿದ್ದರು. ನಮಗೆ ಅನ್ಯಾಯ ಆಗಿದೆ ಅಂತ ಹೇಳಿದ್ದರು. ಅವರು ಅನೇಕ ಬಾರಿ ನನ್ನ ಮನೆ ಬಳಿ ಬಂದು ಕಾಯುತ್ತಿದ್ದರು. ಒಮ್ಮೆ ಕಣ್ಣೀರು ಹಾಕುತ್ತಿದ್ದುದನ್ನು ನೋಡಿ, ಮನೆಯೊಳಗೆ ಕರೆದೊಯ್ದೆ. ಏನು ಸಮಸ್ಯೆ ಎಂದು ಆಲಿಸಿ ಬೆಂಗಳೂರು ಪೊಲೀಸ್ ಕಮಿಷನರ್‌ ದಯಾನಂದ್ ಅವರಿಗೆ ಫೋನ್ ಮಾಡಿ ಇವರ ಸಮಸ್ಯೆ ಬಗೆಹರಿಸಲು ಹೇಳಿದ್ದೆ. ಅಲ್ಲೇ, ನನ್ನ ವಿರುದ್ಧವೇ ಮಾತಾಡೋಕೆ ಶುರು ಮಾಡಿದ್ದರು” ಎಂದಿದ್ದಾರೆ.

ಈ ವಿಡಿಯೋ ನೋಡಿ : ಭಟ್ಕಳ ಮಂಡಲ ಅಧ್ಯಕ್ಷ-ಪ್ರ.ಕಾರ್ಯದರ್ಶಿಗಳ ಪದಗ್ರಹಣ  https://fb.watch/qPNWPCrzzd/?mibextid=Nif5oz

“ನನ್ನ ವಿರುದ್ಧವೇ ಮಾತಾಡೋಕೆ ಶುರು ಮಾಡಿದಾಗ ಏನೋ ಆರೋಗ್ಯ ಸಮಸ್ಯೆ ಇದೆ ಅಂತ ಅನಿಸ್ತು. ಹೆಚ್ಚು ಮಾತಾಡಿದರೆ ಆಗಲ್ಲ ಎಂದು ಪೊಲೀಸರ ಬಳಿಗೆ ಕಳಿಸಿಕೊಟ್ಟೆ. ಇದನ್ನು ಈಗ ಬೇರೆ ರೀತಿಯಲ್ಲಿ ತಿರುಗಿಸಿದ್ದಾರೆ. ತೊಂದರೆ ಇದೆ ಅಂದಿದ್ದಕ್ಕೆ ಹಣವನ್ನೂ ಕೊಟ್ಟು ಕಳಿಸಿದ್ದೆ. ಒಬ್ಬರಿಗೆ ಉಪಕಾರ ಮಾಡುವುದಕ್ಕೆ ಹೋಗಿ ಹೀಗಾಗಿದೆ” ಎಂದು ಯಡಿಯೂರಪ್ಪ ಹೇಳಿದ್ದಾರೆ.

ಈ ದೂರು ರಾಜಕೀಯ ಪ್ರೇರಿತವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಪ್ರಕರಣ ದಾಖಲಾಗಿದೆ, ರಾಜಕಾರಣ ಯಾರೂ ಮಾಡ್ತಿಲ್ಲ. ಇದನ್ನು ಹೇಗೆ ಎದುರಿಸಬೇಕೋ ಹಾಗೆಯೇ ಎದುರಿಸುವೆ. ಆದರೆ ಇದನ್ನೆಲ್ಲ ನಿರೀಕ್ಷೆ ಮಾಡಿರಲಿಲ್ಲ” ಎಂದಿದ್ದಾರೆ.

ಲೋಕಸಭೆ ಚುನಾವಣೆ ಸಂದರ್ಭ ಯಡಿಯೂರಪ್ಪ ವಿರುದ್ಧ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಬಂದಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.