ಭಟ್ಕಳ ಡೈರಿ ವರದಿ

ಭಟ್ಕಳ: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಮಧ್ಯಾಹ್ನ ೨ ಗಂಟೆಗೆ ಸ್ಥಗಿತಗೊಳ್ಳುತ್ತಿದ್ದ ರಿಸರ್ವೇಶನ್ ಟಿಕೆಟ್ ಕೌಂಟರ್ ಸೇವೆ ಇದೀಗ ರಾತ್ರಿ ೮ ಗಂಟೆಯವರೆಗೆ ವಿಸ್ತರಣೆಯಾಗಲಿದೆ. ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ದೊರೆತಿದ್ದು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮಧ್ಯಸ್ಥಿಕೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ಈ ಹಿಂದೆ ಜನರಲ್ ಟಿಕೆಟ್ ಕೌಂಟರ್ ಹೊರತುಪಡಿಸಿ, ರಿಸರ್ವೇಶನ್ ಟಿಕೆಟ್ ಕೌಂಟರ್ ಬೆಳಿಗ್ಗೆ ೮ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಮಧ್ಯಾಹ್ನದ ನಂತರ ರೈಲು ಟಿಕೆಟ್ ಕಾಯ್ದಿರಿಸಲು ಬಯಸುವ ಪ್ರಯಾಣಿಕರು ಮರುದಿನದವರೆಗೆ ಕಾಯಬೇಕಾದ ಅನಿವಾರ್ಯತೆ ಇತ್ತು. ಇಲ್ಲವೇ ಖಾಸಗಿ ಆನ್‌ಲೈನ್ ಸೇವೆಗಳ ಮೂಲಕ ಹೆಚ್ಚುವರಿ ಹಣ ನೀಡಿ ಟಿಕೆಟ್ ಕಾಯ್ದಿರಿಸಬೇಕಾಗಿತ್ತು. ಈ ಸಮಸ್ಯೆಯನ್ನು ಸಾರ್ವಜನಿಕರು ಹಲವು ಬಾರಿ ಕೊಂಕಣ ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ, ಸಿಬ್ಬಂದಿ ಕೊರತೆ ಹಾಗೂ ಬುಕ್ಕಿಂಗ್ ಪ್ರಮಾಣ ಸೇರಿದಂತೆ ವಿವಿಧ ಕಾರಣಗಳನ್ನು ಮುಂದಿಟ್ಟು ಬೇಡಿಕೆಗೆ ಸ್ಪಂದನೆ ದೊರೆತಿರಲಿಲ್ಲ. ಇದರಿಂದ ಸ್ಥಳೀಯ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

ಸಂಸದರ ಮಧ್ಯಸ್ಥಿಕೆಯಲ್ಲಿ ಮಹತ್ವದ ನಿರ್ಧಾರ: ಶುಕ್ರವಾರ ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ಹವಾನಿಯಂತ್ರಿತ ವಿಶ್ರಾಂತಿ ಕೊಠಡಿಯ ಉದ್ಘಾಟನೆಗಾಗಿ ಆಗಮಿಸಿದ್ದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಗಮನಕ್ಕೆ ಈ ಸಮಸ್ಯೆಯನ್ನು ಸಾರ್ವಜನಿಕರು ತಂದರು. ಪ್ರಸ್ತುತ ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ದಿನಕ್ಕೆ ೪೦ಕ್ಕೂ ಅಧಿಕ ರೈಲುಗಳು ನಿಲುಗಡೆ ನೀಡುತ್ತಿದ್ದರೂ, ರಿಸರ್ವೇಶನ್ ಕೌಂಟರ್ ಮಾತ್ರ ಮಧ್ಯಾಹ್ನ ೨ ಗಂಟೆಗೆ ಮುಚ್ಚುತ್ತಿರುವುದರಿಂದ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಪ್ರಾದೇಶಿಕ ರೈಲ್ವೆ ಮ್ಯಾನೇಜರ್ ಸೇರಿದಂತೆ ಕೊಂಕಣ ರೈಲ್ವೆಯ ಆರ್‌ಆರ್‌ಎಂ ಮತ್ತು ಡಿವಿಜನಲ್ ಕಮರ್ಷಿಯಲ್ ಮ್ಯಾನೇಜರ್ ಅವರೊಂದಿಗೆ ಸಂಸದರು ಚರ್ಚೆ ನಡೆಸಿದರು. ಚರ್ಚೆಯ ಬಳಿಕ ರಿಸರ್ವೇಶನ್ ಟಿಕೆಟ್ ಕೌಂಟರ್ ಸಮಯವನ್ನು ಬೆಳಿಗ್ಗೆ ೮ರಿಂದ ರಾತ್ರಿ ೮ ಗಂಟೆಯವರೆಗೆ ವಿಸ್ತರಿಸಲು ಪ್ರಾಯೋಗಿಕವಾಗಿ ನಿರ್ಧರಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ತಿಳಿಸಿದ್ದಾರೆ.

ಪ್ರಯಾಣಿಕರಿಗೆ ಅನುಕೂಲವಾಗುವ ನಿರೀಕ್ಷೆ: ಕೌಂಟರ್ ಸಮಯ ವಿಸ್ತರಣೆಯಿಂದ ಉದ್ಯೋಗಿಗಳು, ವ್ಯಾಪಾರಸ್ಥರು ಹಾಗೂ ಮಧ್ಯಾಹ್ನದ ನಂತರ ಬಿಡುವು ಹೊಂದುವ ಪ್ರಯಾಣಿಕರಿಗೆ ರೈಲು ಟಿಕೆಟ್ ಕಾಯ್ದಿರಿಸುವುದು ಸುಲಭವಾಗಲಿದೆ. ಬಹುದಿನಗಳಿಂದ ಸಾರ್ವಜನಿಕರು ಮುಂದಿಟ್ಟಿದ್ದ ಬೇಡಿಕೆಗೆ ಸ್ಪಂದನೆ ದೊರೆತಿರುವುದು ಭಟ್ಕಳದ ರೈಲು ಪ್ರಯಾಣಿಕರಲ್ಲಿ ಸಂತಸ ಮೂಡಿಸಿದೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ :

ಹಳೇ ಬಸ್ ನಿಲ್ದಾಣದ ಬಳಿ ಮಟ್ಕಾ ಆಟ: ಪೊಲೀಸರ ದಾಳಿಯಲ್ಲಿ ವ್ಯಕ್ತಿ ಸಿಕ್ಕಿಬಿದ್ದ

ಅಮೀನಾ ಪ್ಯಾಲೇಸ್ ಎದುರು ಗಾಂಜಾ ಸೇವನೆ: ಭಟ್ಕಳದ ಇಬ್ಬರು ಸೇರಿ ನಾಲ್ವರ ವಿರುದ್ಧ ಕೇಸು