ಭಟ್ಕಳ ಡೈರಿ ವರದಿ
ಭಟ್ಕಳ: ತಾಲೂಕಿನ ಕೋಣಾರ ಸಮೀಪದ ಹೂತ್ಕಳ ಕ್ರಾಸ್ ಬಳಿ ರಾಜ್ಯ ಹೆದ್ದಾರಿ-೫೦ರಲ್ಲಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸಾಗರ ತಾಲೂಕಿನ ಬೈಕ್ ಸವಾರ ಗಾಯಗೊಂಡ ಘಟನೆ ನವೆಂಬರ್ ೯ರಂದು ಬೆಳಿಗ್ಗೆ ನಡೆದಿದೆ.
ಹಿರೇಬೀಳು ನಿವಾಸಿ ಈಶ್ವರ ನಾಗೇಶ ನಾಯ್ಕ ಎಂಬವರು ಕೆಎ-೪೭/೬೧೬೦ ನೋಂದಣಿ ಸಂಖ್ಯೆಯ ಕಾರನ್ನು ಕುಂಟವಾಣಿ ಕಡೆಯಿಂದ ಭಟ್ಕಳದತ್ತ ಚಲಾಯಿಸಿಕೊಂಡು ಬರುತ್ತಿದ್ದರು. ಬೆಳಿಗ್ಗೆ ಸುಮಾರು ೯.೩೦ರ ವೇಳೆಗೆ ಹೂತ್ಕಳ ಕ್ರಾಸ್ ಸಮೀಪ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ಬಲಭಾಗದಲ್ಲಿ ಚಲಾಯಿಸಿಕೊಂಡು ಬಂದು ಎದುರಿನಿಂದ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಸಾಗರ ತಾಲೂಕಿನ ಅರ್ಕಳ ನಿವಾಸಿ ಮಂಜುನಾಥ ಮಾಸ್ತಿ ಗೊಂಡ ಅವರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದಾರೆ. ಪರಿಣಾಮ ಅವರ ಬಲಗಾಲಿನ ಮೊಣಕಾಲಿನ ಬಳಿ ಹಾಗೂ ಬಲಭುಜದ ಭಾಗದಲ್ಲಿ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಗಾಯಾಳುವಿನ ಪರವಾಗಿ ಹಿರೇಬೀಳು, ಹಲ್ಯಾಣಿ ನಿವಾಸಿ ದೇವರಾಜ ದುರ್ಗಯ್ಯ ಗೊಂಡ (೪೬) ಅವರು ನವೆಂಬರ್ ೯ರಂದು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ




