ಭಟ್ಕಳ ಡೈರಿ ವರದಿ

ಭಟ್ಕಳ: ಮುರುಡೇಶ್ವರ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುವ ನಿರೀಕ್ಷೆಯೊಂದಿಗೆ ಮಂಗಳೂರು–ಕಾರವಾರ ಕರಾವಳಿ ಪ್ರಯಾಣಿಕರ ಫೆರಿ ಸೇವೆ ಆರಂಭಿಸುವ ಮಹತ್ವದ ಯೋಜನೆಗೆ ಕರ್ನಾಟಕ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯಡಿ ಮುರುಡೇಶ್ವರ ಕರಾವಳಿಯ ಪ್ರಮುಖ ಪ್ರಯಾಣಿಕರ ಸಂಪರ್ಕ ಕೇಂದ್ರವಾಗಿ ಗುರುತಿಸಿಕೊಂಡಿದ್ದು, ಕರಾವಳಿ ಪ್ರವಾಸೋದ್ಯಮ ಮತ್ತು ಜಲಸಾರಿಗೆ ಅಭಿವೃದ್ಧಿಗೆ ಹೊಸ ಅವಕಾಶಗಳು ತೆರೆದುಕೊಳ್ಳುವ ಸಾಧ್ಯತೆಯಿದೆ.

ಕರ್ನಾಟಕದ ಕರಾವಳಿ ಭಾಗದಲ್ಲಿ ಬಂದರು, ಹಡಗು ನಿರ್ಮಾಣ, ಜಲಸಾರಿಗೆ ಮತ್ತು ದ್ವೀಪ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಒಟ್ಟು ₹೮,೪೦೦ ಕೋಟಿಗೂ ಅಧಿಕ ಮೊತ್ತದ ವಿವಿಧ ಯೋಜನೆಗಳಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ನಾಲ್ಕು ಹಂತಗಳಲ್ಲಿ ಕರಾವಳಿ ಫೆರಿ ಸೇವೆ: ಮಂಗಳೂರು ಮತ್ತು ಕಾರವಾರ ನಡುವೆ ಕರಾವಳಿ ಪ್ರಯಾಣಿಕರ ಫೆರಿ ಸೇವೆ ಆರಂಭಿಸಲು ಸರ್ಕಾರ ಉದ್ದೇಶಿಸಿದೆ. ಈ ಮಾರ್ಗವನ್ನು ನಾಲ್ಕು ಹಂತಗಳಲ್ಲಿ ಮಂಗಳೂರು–ಮರವಂತೆ, ಮರವಂತೆ–ಮುರುಡೇಶ್ವರ, ಮುರುಡೇಶ್ವರ–ಗೋಕರ್ಣ ಮತ್ತು ಗೋಕರ್ಣ–ಕಾರವಾರ ಅಭಿವೃದ್ಧಿಪಡಿಸುವ ಪ್ರಸ್ತಾವನೆ ರೂಪಿಸಲಾಗಿದೆ.

ಈ ಯೋಜನೆ ಕಾರ್ಯರೂಪಕ್ಕೆ ಬಂದರೆ ಮುರುಡೇಶ್ವರದಿಂದ ಮರವಂತೆ, ಗೋಕರ್ಣ ಹಾಗೂ ಮಂಗಳೂರು ಸೇರಿದಂತೆ ಕರಾವಳಿಯ ಪ್ರಮುಖ ಪ್ರವಾಸಿ ತಾಣಗಳಿಗೆ ಸಮುದ್ರ ಮಾರ್ಗದ ಮೂಲಕ ಪ್ರಯಾಣಿಸುವ ಅವಕಾಶ ಸಿಗಲಿದೆ. ಯೋಜನೆಯ ಕಾರ್ಯಸಾಧ್ಯತೆ ಪರಿಶೀಲಿಸಲು ವಹಿವಾಟು ಸಲಹೆಗಾರರನ್ನು ನೇಮಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ತಾಂತ್ರಿಕ, ಆರ್ಥಿಕ ಮತ್ತು ಕಾರ್ಯಾಚರಣೆಯ ಸಾಧ್ಯತೆಗಳನ್ನು ಅಧ್ಯಯನ ಮಾಡಿದ ಬಳಿಕ ಮುಂದಿನ ಹಂತದ ನಿರ್ಧಾರ ಕೈಗೊಳ್ಳಲಾಗುತ್ತದೆ.

ಮುರುಡೇಶ್ವರಕ್ಕೆ ಲಾಭ: ಕರಾವಳಿ ಫೆರಿ ಸೇವೆಯ ಮರವಂತೆ–ಮುರುಡೇಶ್ವರ–ಗೋಕರ್ಣ ಸಂಪರ್ಕ ಜಾರಿಗೆ ಬಂದರೆ ಮುರುಡೇಶ್ವರದ ಪ್ರವಾಸೋದ್ಯಮಕ್ಕೆ ಅನುಕೂಲವಾಗುವ ನಿರೀಕ್ಷೆಯಿದೆ. ವಿಶೇಷವಾಗಿ ಮಂಗಳೂರು, ಮರವಂತೆ, ಗೋಕರ್ಣ ಮತ್ತು ಕಾರವಾರ ಭಾಗಗಳಿಂದ ಬರುವ ಪ್ರವಾಸಿಗರಿಗೆ ಪರ್ಯಾಯ ಜಲಸಾರಿಗೆ ವ್ಯವಸ್ಥೆ ಲಭ್ಯವಾಗಬಹುದು. ಪ್ರವಾಸಿಗರ ಸಂಚಾರ ಹೆಚ್ಚಳದೊಂದಿಗೆ ಸ್ಥಳೀಯ ಸಾರಿಗೆ, ಹೋಟೆಲ್, ರೆಸಾರ್ಟ್, ಪ್ರವಾಸಿ ಮಾರ್ಗದರ್ಶಕರು ಹಾಗೂ ಸಣ್ಣ ವ್ಯಾಪಾರಿಗಳಿಗೂ ಅವಕಾಶಗಳು ಸೃಷ್ಟಿಯಾಗುವ ಸಾಧ್ಯತೆಯಿದೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ : 

ಸರಾಬಿ ನದಿ ಉಳಿಸಲು ಇನ್ನೆಷ್ಟು ಕಾಯಬೇಕು? ನಗರಸಭೆಗೆ ಹೊಣೆಗಾರಿಕೆಯ ಸವಾಲು

ಮಾವಿನಕುರ್ವಾದಲ್ಲಿ ಅಕ್ರಮವಾಗಿ ಮದ್ಯಪಾನಕ್ಕೆ ಅವಕಾಶ: ಅಂಗಡಿ ವ್ಯಾಪಾರಿ ವಿರುದ್ಧ ಪ್ರಕರಣ ದಾಖಲು