ಭಟ್ಕಳ ಡೈರಿ ವರದಿ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ವಿದ್ಯುತ್ ಬಳಕೆ ಹಾಗೂ ಹೆಸ್ಕಾಂಗೆ ಆದಾಯ ನೀಡುವ ವಿಚಾರದಲ್ಲಿ ಭಟ್ಕಳ ತಾಲೂಕು ಮೊದಲ ಸ್ಥಾನದಲ್ಲಿದೆ. ಕಾರವಾರ ಅಲ್ಲಿನ ನೌಕಾನೆಲೆಯ ವಿದ್ಯುತ್ ಬೇಡಿಕೆಯಿಂದ ಎರಡನೇ ಸ್ಥಾನದಲ್ಲಿದೆ. ಆದರೆ ಹೆಚ್ಚಿನ ವಿದ್ಯುತ್ ಬಳಕೆ ಮತ್ತು ಆದಾಯ ನೀಡುವ ತಾಲೂಕಾಗಿದ್ದರೂ, ಭಟ್ಕಳದಲ್ಲಿ ಕಳೆದ ಸುಮಾರು ಎರಡು ದಶಕಗಳಿಂದ ನಿರಂತರ ವಿದ್ಯುತ್ ಪೂರೈಕೆಯ ಸಮಸ್ಯೆ ಮುಂದುವರಿದಿದೆ.

ಕುಮಟಾ ಅಥವಾ ಹೊನ್ನಾವರ ಭಾಗದ ಮುಖ್ಯ ವಿದ್ಯುತ್ ಪ್ರಸರಣ ಮಾರ್ಗದಲ್ಲಿ ಉಂಟಾಗುವ ತೊಂದರೆಯಿಂದ ಭಟ್ಕಳಕ್ಕೆ ವಿದ್ಯುತ್ ಪೂರೈಕೆ ವ್ಯತ್ಯಯವಾಗುತ್ತಿದೆ ಎಂಬುದು ಹೆಸ್ಕಾಂ ಅಧಿಕಾರಿಗಳು ನೀಡುತ್ತಿದ್ದ ಪ್ರಮುಖ ಸಮಜಾಯಿಷಿ. ಹಬ್ಬ-ಹರಿದಿನಗಳ ಸಂದರ್ಭದಲ್ಲಿಯೂ ವಿದ್ಯುತ್ ಕಡಿತವಾಗುತ್ತಿದ್ದುದರಿಂದ ಸಾರ್ವಜನಿಕರು ಹಲವು ಬಾರಿ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು.

ಭಟ್ಕಳದಲ್ಲಿ ೧೧೦ ಕೆವಿ ಉಪಕೇಂದ್ರ ಸ್ಥಾಪನೆಯಾದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳ ಮೇಲೂ ಈ ವಿಚಾರದಲ್ಲಿ ಒತ್ತಡ ಹೆಚ್ಚಾಗಿದ್ದು, ಶಾಸಕ ಮಂಕಾಳ ಎಸ್. ವೈದ್ಯ ಅವರು ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಪ್ರಯತ್ನಿಸುವುದಾಗಿ ಹಲವು ಬಾರಿ ಭರವಸೆ ನೀಡಿದ್ದರು.

ಹಿಂದೆ ಮಳೆ ಮತ್ತು ಬಿರುಗಾಳಿಯ ಸಂದರ್ಭದಲ್ಲಿ ಗಂಟೆಗಟ್ಟಲೆ, ಕೆಲವೊಮ್ಮೆ ಒಂದು ಅಥವಾ ಎರಡು ದಿನಗಳವರೆಗೂ ವಿದ್ಯುತ್ ವ್ಯತ್ಯಯ ಉಂಟಾಗುತ್ತಿತ್ತು. ಈ ವರ್ಷ ಮಳೆ ಪ್ರಮಾಣ ಕಡಿಮೆಯಿದ್ದರೂ ವಿದ್ಯುತ್ ಕಡಿತದ ಸಮಸ್ಯೆ ಮುಂದುವರಿದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ :

ಸೋಡಿಗದ್ದೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಗೋ ಪೂಜೆ ಸಂಪನ್ನ

ಹೂತ್ಕಳ ಕ್ರಾಸ್ ಬಳಿ ಕಾರು–ಬೈಕ್ ಡಿಕ್ಕಿ: ಸವಾರನಿಗೆ ಗಾಯ