ಭಟ್ಕಳ ಡೈರಿ ವರದಿ

ಭಟ್ಕಳ: ಚೆಸ್ ಅಂಗಳದಲ್ಲಿ ಗೆಲುವಿನ ನಗೆ ಬೀರಿದ ನಿನಾದ ಉಮೇಶ ನಾಯ್ಕ ಮುಂಡಳ್ಳಿ, ಸಾಹಿತ್ಯ ಮತ್ತು ಸೃಜನಶೀಲ ಬರವಣಿಗೆಯಲ್ಲೂ ತನ್ನ ಪ್ರತಿಭೆ ಮೆರೆದವಳು. ಒಂದರ ಹಿಂದೆ ಒಂದರಂತೆ ಸಾಧನೆಯ ಮೆಟ್ಟಿಲೇರುತ್ತಿರುವ ಚಿತ್ರಾಪುರ ಮಠದ ಶ್ರೀವಲ್ಲಿ ಪ್ರೌಢಶಾಲೆಯ ಈ ವಿದ್ಯಾರ್ಥಿನಿ ಇದೀಗ ಚೆಸ್ ಪಂದ್ಯಾವಳಿಯಲ್ಲಿ ವಿಜೇತಳಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಭಟ್ಕಳ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಉತ್ತರ ಕನ್ನಡ, ತಾಲೂಕು ಪಂಚಾಯತ ಭಟ್ಕಳ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ೨೦೨೬ನೇ ಸಾಲಿನ ತಾಲೂಕು ಮಟ್ಟದ ಚೆಸ್ ಪಂದ್ಯಾವಳಿ ನಡೆಯಿತು. ಇದರಲ್ಲಿ ಶ್ರೀವಲ್ಲಿ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ನಿನಾದ ವಿಜೇತಳಾಗಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡಿದ್ದಾಳೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ವೆಂಕಟೇಶ ನಾಯ್ಕ ಅವರು ವಿಜೇತಳಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು.

ಕಲಾಶ್ರೀ ಸ್ಪರ್ಧೆಯಲ್ಲೂ ರಾಜ್ಯಮಟ್ಟಕ್ಕೆ ಆಯ್ಕೆ: ನಿನಾದಳ ಸಾಧನೆ ಚೆಸ್‌ಗೆ ಮಾತ್ರ ಸೀಮಿತವಾಗಿಲ್ಲ. ಇತ್ತೀಚೆಗೆ ಕಾರವಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ನಡೆದ ಜಿಲ್ಲಾ ಮಟ್ಟದ ಕಲಾಶ್ರೀ ಆಯ್ಕೆ ಶಿಬಿರದ ಸೃಜನಶೀಲ ಬರವಣಿಗೆ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟದ ಸ್ಪರ್ಧೆಗೂ ಆಯ್ಕೆಯಾಗಿದ್ದಾಳೆ. ಸಾಹಿತ್ಯ, ಸಂಗೀತ ಹಾಗೂ ಕ್ರೀಡೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆ ಪ್ರದರ್ಶಿಸುತ್ತಿರುವ ನಿನಾದ, ಭಾವಗೀತೆ ಮತ್ತು ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ಹಾಗೂ ಶಿಕ್ಷಕಿ, ಕವಯಿತ್ರಿ ರೇಷ್ಮಾ ಉಮೇಶ ದಂಪತಿಯ ಪುತ್ರಿ.

ಒಂದೇ ಸಮಯದಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆಯ ಹಾದಿ ಹಿಡಿದಿರುವ ನಿನಾದಳ ಯಶಸ್ಸು ಚಿತ್ರಾಪುರ, ಮುಂಡಳ್ಳಿ ಗ್ರಾಮಗಳ ಜನತೆಗೆ ಹಾಗೂ ಶ್ರೀವಲ್ಲಿ ಪ್ರೌಢಶಾಲೆಗೆ ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿನಿಯ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಪೋಷಕರು, ಊರಿನ ನಾಗರಿಕರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದು, ಮುಂದಿನ ಹಂತಗಳಲ್ಲಿಯೂ ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಹಾರೈಸಿದ್ದಾರೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ :

ಚಿತ್ರಾಪುರದ ‘ಕಲಾಸಿರಿ’ಯಲ್ಲಿ ಸಾಹಿತ್ಯ ಸಂಭ್ರಮ; ಡಾ. ಆರ್. ನರಸಿಂಹ ಮೂರ್ತಿಗೆ ಕಲಾಸಿರಿ ಪ್ರಶಸ್ತಿ ಪ್ರದಾನ

ಜಿಲ್ಲಾ ಮಟ್ಟದ ಕಲಾಶ್ರೀ ಸ್ಪರ್ಧೆಯಲ್ಲಿ ನಿನಾದ ಮುಂಡಳ್ಳಿ ಪ್ರಥಮ: ರಾಜ್ಯಮಟ್ಟಕ್ಕೆ ಆಯ್ಕೆ