ಭಟ್ಕಳ ಡೈರಿ ವರದಿ

ಭಟ್ಕಳ: ವಿಜ್ಞಾನ ನಾಟಕದ ಮೂಲಕ ಜಲಸಂರಕ್ಷಣೆಯ ಮಹತ್ವ ಸಾರಿದ ಭಟ್ಕಳ ತಾಲೂಕಿನ ತೆರ್ನಮಕ್ಕಿ ಕೆಪಿಎಸ್ ಶಾಲೆಯ ವಿದ್ಯಾರ್ಥಿಗಳು ಬೆಳಗಾವಿ ವಿಭಾಗ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಶಾಲಾ ಶಿಕ್ಷಣ ಇಲಾಖೆಯ ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ, ಆಯುಕ್ತರ ಕಚೇರಿ ಬೆಂಗಳೂರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಬೆಳಗಾವಿ ಹಾಗೂ ಶ್ರೀಮತಿ ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ ೧೨ರಂದು ಬೆಳಗಾವಿಯಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿತ್ತು.

ಸ್ಪರ್ಧೆಯಲ್ಲಿ ಕೆಪಿಎಸ್ ತೆರ್ನಮಕ್ಕಿ ಶಾಲೆಯ ವಿದ್ಯಾರ್ಥಿಗಳು ಶ್ರೀಕಾಂತ ಕುಮಟಾ ಅವರ ರಚನೆ ಮತ್ತು ನಿರ್ದೇಶನದ ‘ಜಲವೇ ಜಗದ ಉಸಿರು’ ಎಂಬ ವಿಜ್ಞಾನ ನಾಟಕವನ್ನು ಪ್ರದರ್ಶಿಸಿ ಪ್ರಥಮ ಬಹುಮಾನ ತಮ್ಮದಾಗಿಸಿಕೊಂಡರು. ಇದರೊಂದಿಗೆ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ಸಾಧನೆಯನ್ನೂ ಮಾಡಿದ್ದಾರೆ.

ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟಿ ಪ್ರಶಸ್ತಿಯೂ ತೆರ್ನಮಕ್ಕಿ ಶಾಲೆಯ ಪಾಲು: 

ವೈಯಕ್ತಿಕ ಪ್ರಶಸ್ತಿಗಳಲ್ಲೂ ಶಾಲೆಯ ವಿದ್ಯಾರ್ಥಿಗಳು ಹಾಗೂ ನಿರ್ದೇಶಕರು ಗಮನಾರ್ಹ ಸಾಧನೆ ಮಾಡಿದ್ದಾರೆ. ನಾಟಕದ ನಿರ್ದೇಶಕ ಶ್ರೀಕಾಂತ ಕುಮಟಾ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರೆ, ವಿದ್ಯಾರ್ಥಿನಿ ಮಾನ್ವಿ ಕುಮಾರ ಗೌಡ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನಾಟಕದಲ್ಲಿ ವಿದ್ಯಾರ್ಥಿಗಳಾದ ಅಮೂಲ್ಯ ಆರ್. ನಾಯ್ಕ, ಮಾನ್ವಿ ಕುಮಾರ ಗೌಡ, ಸೌಜನ್ಯ ಎಸ್. ನಾಯ್ಕ, ಸಹನಾ ವಿ. ನಾಯ್ಕ, ನಿಧಿ ಎಸ್. ನಾಯ್ಕ, ದಿಶಾಂತ ದುರ್ಗ ಹರಿಕಾಂತ, ಭರತ ಎಂ. ಬಾಕಡ, ಮನೋಹರ ಎಂ. ನಾಯ್ಕ, ವಿಶಾಂತ ದುರ್ಗ ಹರಿಕಾಂತ ಹಾಗೂ ತೇಜಸ್ ವಿ. ನಾಯ್ಕ ಅಭಿನಯಿಸಿದ್ದರು. ಈ ತಂಡ ಕಾರವಾರದಲ್ಲಿ ನಡೆದ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿತ್ತು.

ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಉಪಪ್ರಾಂಶುಪಾಲರು, ಶಿಕ್ಷಕರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ, ರಾಜ್ಯಮಟ್ಟದ ಸ್ಪರ್ಧೆಯಲ್ಲೂ ಯಶಸ್ಸು ಸಾಧಿಸುವಂತೆ ಶುಭ ಹಾರೈಸಿದ್ದಾರೆ. ಭಟ್ಕಳದ ತೆರ್ನಮಕ್ಕಿ ಶಾಲೆಯ ಈ ಸಾಧನೆ ಸ್ಥಳೀಯ ಶೈಕ್ಷಣಿಕ ವಲಯದಲ್ಲಿ ಸಂತಸ ಮೂಡಿಸಿದೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಮುರ್ಡೇಶ್ವರದಲ್ಲಿ ನವೆಂಬರ್ ೧೪ರಂದು ಸಮುದ್ರ ಆರತಿ, ಸಂಜೆ ೬ಕ್ಕೆ ವಿಶೇಷ ಪೂಜೆ

ಮುರುಡೇಶ್ವರ ರೈಲ್ವೆ ನಿಲ್ದಾಣಕ್ಕೆ ವಂದೇ ಭಾರತ್ ಆಗಮನ: ಸ್ವಾಗತಕ್ಕೆ ಸಜ್ಜಾದ ಬಿಜೆಪಿ