ಭಟ್ಕಳ ಡೈರಿ ವರದಿ

ಭಟ್ಕಳ: ಪದೇಪದೇ ವಿದ್ಯುತ್ ಕಡಿತ, ಗಂಟೆಗಟ್ಟಲೆ ವಿದ್ಯುತ್ ವ್ಯತ್ಯಯ, ಹಬ್ಬ-ಹರಿದಿನಗಳಲ್ಲೂ ಕಾಡುವ ವಿದ್ಯುತ್ ಸಮಸ್ಯೆ… ಇಂತಹ ಸಂಕಷ್ಟಗಳಿಂದ ಬೇಸತ್ತಿರುವ ಭಟ್ಕಳದ ಜನತೆಗೆ ಇದೀಗ ಕೊಂಚ ನಿರಾಳತೆಯ ನಿರೀಕ್ಷೆ ಮೂಡಿದೆ. ಪಟ್ಟಣದ ಎರಡನೇ ೧೧೦ ಕೆವಿ ವಿದ್ಯುತ್ ಉಪಕೇಂದ್ರದ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಡಿಸೆಂಬರ್ ವೇಳೆಗೆ ಯೋಜನೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಆದರೆ ಈ ಉಪಕೇಂದ್ರ ಆರಂಭವಾದ ಬಳಿಕವಾದರೂ ಭಟ್ಕಳದಲ್ಲಿ ನಿರಂತರ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆಯೇ ಎಂಬುದು ಸಾರ್ವಜನಿಕರ ಪ್ರಮುಖ ಪ್ರಶ್ನೆಯಾಗಿದೆ.

ಡಿಸೆಂಬರ್ ೨೦೨೩ರಲ್ಲಿ ಆರಂಭವಾದ ಯೋಜನೆ: ಭಟ್ಕಳದ ಸರ್ಕಾರಿ ಬಸ್ ನಿಲ್ದಾಣದ ಸಮೀಪ ಸಾಗರ ರಸ್ತೆಯಲ್ಲಿ ಎರಡನೇ ೧೧೦ ಕೆವಿ ವಿದ್ಯುತ್ ಉಪಕೇಂದ್ರ ನಿರ್ಮಾಣ ಕಾಮಗಾರಿ ೨೦೨೩ರ ಡಿಸೆಂಬರ್‌ನಲ್ಲಿ ಆರಂಭವಾಗಿತ್ತು. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಕೈಗೆತ್ತಿಕೊಂಡಿರುವ ಈ ಯೋಜನೆಯನ್ನು ೨೦೨೬ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಉಪಕೇಂದ್ರದ ಮುಖ್ಯ ಕಟ್ಟಡದ ಬಹುತೇಕ ಕಾಮಗಾರಿ ೨೦೨೪ರ ಡಿಸೆಂಬರ್ ವೇಳೆಗೆ ಪೂರ್ಣಗೊಂಡಿದ್ದರೂ, ವಿದ್ಯುತ್ ಪ್ರಸರಣ ಗೋಪುರಗಳು ಮತ್ತು ಹೈಟೆನ್ಷನ್ ಮಾರ್ಗ ಅಳವಡಿಕೆ ಕಾರ್ಯದಲ್ಲಿ ಹಲವು ಅಡೆತಡೆಗಳು ಎದುರಾಗಿವೆ.

೧೬ ಕಿ.ಮೀ. ಮಾರ್ಗದಲ್ಲಿ ಇನ್ನೂ ೪ ಕಿ.ಮೀ. ಬಾಕಿ: ಉಪಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಒಟ್ಟು ೧೬ ಕಿ.ಮೀ. ಉದ್ದದ ೧೧೦ ಕೆವಿ ವಿದ್ಯುತ್ ಪ್ರಸರಣ ಮಾರ್ಗದಲ್ಲಿ ಈವರೆಗೆ ೧೨ ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಯೋಜನೆಯಡಿ ಅಳವಡಿಸಬೇಕಿದ್ದ ೭೩ ವಿದ್ಯುತ್ ಗೋಪುರಗಳ ಪೈಕಿ ೬೬ ಗೋಪುರಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಇನ್ನೂ ಏಳು ಗೋಪುರಗಳ ಅಳವಡಿಕೆ ಹಾಗೂ ಉಳಿದ ಮಾರ್ಗದ ಕಾಮಗಾರಿ ಬಾಕಿಯಿದೆ.

ವೆಂಕಟಾಪುರ ಮತ್ತು ಮುರುಡೇಶ್ವರ ಭಾಗದ ಕೆಲವರು ಯೋಜನೆಯ ಕೆಲವು ಕಾಮಗಾರಿಗಳನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಸಂಬಂಧ ಮೂರು ಪ್ರಕರಣಗಳು ವಿಚಾರಣೆಯಲ್ಲಿದ್ದು, ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲೂ ಒಂದು ಪ್ರಕರಣ ಬಾಕಿಯಿದೆ ಎಂದು ಮೂಲಗಳು ತಿಳಿಸಿವೆ. ಇದರ ಜೊತೆಗೆ ಕೈಕಿಣಿಯಲ್ಲಿ ಎರಡು ಹಾಗೂ ಬೈಲೂರಿನಲ್ಲಿ ಮೂರು ಕಡೆ ಕಾಮಗಾರಿಗೆ ಸ್ಥಳೀಯ ವಿರೋಧ ಎದುರಾಗಿದೆ. ನ್ಯಾಯಾಲಯದ ತಡೆಯಾಜ್ಞೆಗೆ ಒಳಪಡದ ಪ್ರದೇಶಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಪೊಲೀಸ್ ಸಹಕಾರ ಪಡೆಯುವ ಬಗ್ಗೆಯೂ ಕೆಪಿಟಿಸಿಎಲ್ ಚಿಂತನೆ ನಡೆಸಿದೆ.

ಬೈಂದೂರಿನೊಂದಿಗೆ ವಿದ್ಯುತ್ ಸಂಪರ್ಕದ ಪ್ರಸ್ತಾವನೆ: ಭಟ್ಕಳದ ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಉಡುಪಿ ಜಿಲ್ಲೆಯ ಮೆಸ್ಕಾಂ ವ್ಯಾಪ್ತಿಯ ಬೈಂದೂರು ತಾಲೂಕಿನೊಂದಿಗೆ ೧೧೦ ಕೆವಿ ವಿದ್ಯುತ್ ಸಂಪರ್ಕ ಕಲ್ಪಿಸುವ ಮತ್ತೊಂದು ಯೋಜನೆಯನ್ನೂ ರೂಪಿಸಲಾಗಿದೆ. ಈ ಸಂಪರ್ಕದಿಂದ ಭಟ್ಕಳದ ವಿದ್ಯುತ್ ಜಾಲಕ್ಕೆ ಪರ್ಯಾಯ ವ್ಯವಸ್ಥೆ ದೊರೆತು ನಿರಂತರ ವಿದ್ಯುತ್ ಪೂರೈಕೆಗೆ ನೆರವಾಗುವ ನಿರೀಕ್ಷೆಯಿದೆ. ಆದರೆ ಈ ಯೋಜನೆಗೆ ಸಂಬಂಧಿಸಿದಂತೆ ಸದ್ಯ ಸಮೀಕ್ಷೆ ಮಾತ್ರ ಪೂರ್ಣಗೊಂಡಿದ್ದು, ಅನುಷ್ಠಾನಕ್ಕೆ ಇನ್ನಷ್ಟು ಸಮಯ ಬೇಕಾಗುವ ಸಾಧ್ಯತೆಯಿದೆ.

ಒಂದೆರಡು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ:

೧೧೦ ಕೆವಿ ವಿದ್ಯುತ್ ಸಂಪರ್ಕ ಯೋಜನೆಯನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಲು ಕೆಪಿಟಿಸಿಎಲ್ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ಸಾಮಾನ್ಯವಾಗಿ ಬಹುತೇಕ ತಾಲೂಕುಗಳಲ್ಲಿ ಒಂದೇ ೧೧೦ ಕೆವಿ ಉಪಕೇಂದ್ರವಿರುತ್ತದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡನೇ ೧೧೦ ಕೆವಿ ಉಪಕೇಂದ್ರ ಹೊಂದಲಿರುವ ಏಕೈಕ ತಾಲೂಕು ಭಟ್ಕಳವಾಗಿದೆ. ಮುರುಡೇಶ್ವರದ ಬಳಿಕ ಮೊದಲ ಉಪ ಕೇಂದ್ರವಿದೆ.

ಜನರ ನಿರೀಕ್ಷೆ ಈಡೇರಲಿದೆಯೇ?: ಭಟ್ಕಳದಲ್ಲಿ ಎರಡನೇ ೧೧೦ ಕೆವಿ ಉಪಕೇಂದ್ರ ಸ್ಥಾಪನೆಯಾಗುತ್ತಿರುವುದು ವಿದ್ಯುತ್ ವ್ಯವಸ್ಥೆಯ ಸುಧಾರಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಆದರೆ, ಪ್ರಸರಣ ಮಾರ್ಗದ ಸಾಮರ್ಥ್ಯ, ಪರ್ಯಾಯ ವಿದ್ಯುತ್ ಸಂಪರ್ಕ, ನಿರ್ವಹಣಾ ವ್ಯವಸ್ಥೆ ಹಾಗೂ ಹೆಸ್ಕಾಂನ ಕಾರ್ಯಕ್ಷಮತೆ ಕೂಡ ನಿರಂತರ ವಿದ್ಯುತ್ ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಹೀಗಾಗಿ ಮೂರು ವರ್ಷಗಳ ಕಾಯುವಿಕೆಯ ಬಳಿಕ ಸಿದ್ಧಗೊಳ್ಳುತ್ತಿರುವ ಈ ಯೋಜನೆ ಭಟ್ಕಳದ ಜನರ ಬಹುದಿನಗಳ ನಿರೀಕ್ಷೆಯನ್ನು ನಿಜವಾಗಿಯೂ ಈಡೇರಿಸಲಿದೆಯೇ ಎಂಬುದಕ್ಕೆ ಮುಂದಿನ ದಿನಗಳೇ ಉತ್ತರ ನೀಡಬೇಕಿದೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ:

ಭಟ್ಕಳದಲ್ಲಿ ವಿದ್ಯುತ್ ಸಮಸ್ಯೆಗೆ ದಶಕಗಳ ಇತಿಹಾಸ: ಮಳೆ ಕಡಿಮೆಯಾದರೂ ವಿದ್ಯುತ್ ಕಣ್ಣಾಮುಚ್ಚಾಲೆ, ಅಸಮಾಧಾನ

ಕರ್ನಾಟಕ ವಿಶ್ವವಿದ್ಯಾಲಯದ ಚೆಸ್ ತಂಡಕ್ಕೆ ಭಟ್ಕಳದ ಇಬ್ಬರು ವಿದ್ಯಾರ್ಥಿನಿಯರ ಆಯ್ಕೆ