ಭಟ್ಕಳ ಡೈರಿ ವರದಿ

ಭಟ್ಕಳ: ಸಂಪ್ರದಾಯದ ಹೆಸರಿನಲ್ಲಿ ಕೇವಲ ಆಚರಣೆಗಳಿಗೆ ಸೀಮಿತವಾಗದೆ, ಹಿರಿಯರಿಗೆ ಗೌರವ, ಕಿರಿಯರಿಗೆ ಪ್ರೀತಿ ಹಾಗೂ ಕಷ್ಟದಲ್ಲಿರುವವರಿಗೆ ನೆರವಾಗುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇವುಗಳೇ ನಿಜವಾದ ಸಂಸ್ಕಾರದ ಪ್ರತಿಬಿಂಬ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಕವಿ, ಸಾಹಿತಿ ಹಾಗೂ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ಹೇಳಿದರು.

ಭಟ್ಕಳದ ಚಿತ್ರಾಪುರ ಮಠದ ಆಡಳಿತಕ್ಕೆ ಒಳಪಟ್ಟ ಚಿತ್ರಾಪುರದ ಶ್ರೀವಲ್ಲಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಟ್ರೆಡಿಷನಲ್ ಡೇ (ಸಂಪ್ರದಾಯ ದಿನ) ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಕೃತಿ, ಸಂಸ್ಕಾರ, ಜನಪದ ಪರಂಪರೆ, ಜೀವನದರ್ಶನ, ತತ್ವಪದಗಳ ಮೌಲ್ಯ ಹಾಗೂ ಸಂಗೀತದ ಮಹತ್ವದ ಕುರಿತು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಮಾತನಾಡಿದ ಮುಂಡಳ್ಳಿ, ದೇಶಭಕ್ತಿ ಗೀತೆ, ಭಾವಗೀತೆ, ಜನಪದ ಗೀತೆ ಮತ್ತು ತತ್ವಪದಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು. ಅಲ್ಲದೆ, ಉತ್ತರ ಕನ್ನಡದ ವೈಭವವನ್ನು ಸಾರುವ ತಮ್ಮದೇ ರಚನೆಯ ಗೀತೆಯನ್ನು ಪ್ರಸ್ತುತಪಡಿಸಿ, ವಿದ್ಯಾರ್ಥಿಗಳಲ್ಲಿ ಸ್ಥಳೀಯ ನೆಲ, ಜಲ ಹಾಗೂ ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರವೀಂದ್ರ ಕಾಯ್ಕಿಣಿ ಮಾತನಾಡಿ, ಸಂಪ್ರದಾಯವೆಂದರೆ ಕೇವಲ ಸೀರೆ, ಪಂಚೆ, ಹೂವು ಹಾಗೂ ಬಳೆ ಧರಿಸುವುದಲ್ಲ. ಆಧುನಿಕತೆಯನ್ನು ಸ್ವೀಕರಿಸುವುದರ ಜೊತೆಗೆ ನಮ್ಮ ಮೂಲ ಸಂಸ್ಕೃತಿಯನ್ನು ಪ್ರೀತಿಸಿ ಗೌರವಿಸುವುದೇ ನಿಜವಾದ ಸಂಪ್ರದಾಯ ಎಂದರು.

ಶ್ರೀವಲ್ಲಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಮಮತಾ ಭಟ್ಕಳ ಮಾತನಾಡಿ, ಮಕ್ಕಳು ಬೆಳೆದು ದೊಡ್ಡವರಾದರೂ ಗುರುಹಿರಿಯರನ್ನು ಗೌರವಿಸುವ ಗುಣವನ್ನು ಮರೆಯಬಾರದು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ ಮತ್ತು ಪರಂಪರೆಯ ಅರಿವು ಮೂಡಿಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ವತಿಯಿಂದ ಉಮೇಶ ಮುಂಡಳ್ಳಿ ಅವರನ್ನು ಸನ್ಮಾನಿಸಲಾಯಿತು.

ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಚಿಂತನಾ ಮತ್ತು ಶರಣ್ಯ ಪ್ರಾರ್ಥಿಸಿದರು. ಚಿಂತನಾ ಸ್ವಾಗತಿಸಿದರು. ಅಕ್ಷತಾ ಸಂಪ್ರದಾಯ ದಿನದ ಮಹತ್ವದ ಕುರಿತು ಮಾತನಾಡಿದರು. ಸಂದೇಶ ಶೆಟ್ಟಿ ವಂದಿಸಿದರು. ರೇಷ್ಮಾ ಮತ್ತು ಶರಣ್ಯ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ಉಪನ್ಯಾಸಕರಾದ ಕುಲದೀಪ ನಾಯ್ಕ, ನಯನ ಖಾರ್ವಿ, ರಮ್ಯಾ ನಾಯ್ಕ, ರವಿ ಕುಂಬಾರ, ವಿನಾಯಕ ಚಿತ್ರಾಪುರ, ಅಜಿತ ಕಾಮತ, ರೇಖಾ ಮೊಗೇರ, ಪ್ರಿಯಾ ಬರವಣಿ, ಸಂತೋಷ ಚಿತ್ರಾಪುರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಸಾಂಪ್ರದಾಯಿಕ ಉಡುಗೆ ತೊಟ್ಟು ಜನಪದ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ವಿದ್ಯಾರ್ಥಿಗಳ ಸಂಭ್ರಮ, ಜನಪದ ಕಲೆಯ ವೈವಿಧ್ಯ ಮತ್ತು ಸಾಂಪ್ರದಾಯಿಕ ಉಡುಗೆಗಳೊಂದಿಗೆ ಇಡೀ ಕಾಲೇಜು ಆವರಣ ಸಂಸ್ಕೃತಿ ಹಾಗೂ ಪರಂಪರೆಯ ಸೊಬಗಿನಿಂದ ಕಂಗೊಳಿಸಿತು.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ