ಸೊರಬ : ದೊಡ್ಡಮನೆ ರಾಮಪ್ಪ ಶ್ರೀಧರ್ ಸೇವಾ ಟ್ರಸ್ಟ್ ವತಿಯಿಂದ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.ಆರ್.ಎಸ್. ಅಪ್ಪುವನ ಉದ್ಘಾಟನೆಗೊಂಡಿತು.

ಇದನ್ನೂ ಓದಿ : ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ: ಬಿ.ಎಸ್.ವೈ. ಹೇಳಿದ್ದೇನು?


ಜೂನಿಯರ್ ಚೇಂಬರ್ ಇಂಟರ್ನ್ಯಾಷನಲ್ ಜೆಸಿಐ ಭಾರತದ ಹವಾಮಾನ ಮತ್ತು ಪರಿಸರ ವಿಭಾಗದ ರಾಷ್ಟ್ರೀಯ ಸಂಯೋಜಕ ಪ್ರಶಾಂತ್ ದೊಡ್ಡಮನೆ ಇವರು ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರ್ ಇವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಸವಿ ನೆನಪಿಗೆ ಡಿ.ಆರ್.ಎಸ್. ಅಪ್ಪುವನ ಉದ್ಘಾಟಿಸಿದರು.

ಈ ವಿಡಿಯೋ ವರದಿ ನೋಡಿ : ಮನೆಗೆ ಆಕಸ್ಮಿಕ ಬೆಂಕಿ  https://fb.watch/qSl7OtSATz/?mibextid=Nif5oz

ನಂತರ ಮಾತನಾಡಿದ ಅವರು, ಯುವಕರಿಗೆ ಸ್ಪೂರ್ತಿ, ಗಾಯಕರೂ, ಉತ್ತಮ ನೃತ್ಯ ಕಲಾವಿದರು, ಚಲನಚಿತ್ರ ನಟ, ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜಕುಮಾರರವರು ಯುವಕರಿಗೆ ಮಾದರಿಯಾಗುವಂತೆ ಹಲವಾರು ಚಲನಚಿತ್ರದಲ್ಲಿ ನಟಿಸಿದ್ದಾರೆ. ಅವರು ತಮ್ಮ ಜೀವಿತ ಅವಧಿಯಲ್ಲಿ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ವ್ರದ್ಧಾಶ್ರಮ, ಕಣ್ಣಿಲ್ಲದವರಿಗೆ ಕಣ್ಣು, ಬಡಮಕ್ಕಳಿಗೆ ವಿದ್ಯಾಭ್ಯಾಸ ಹೀಗೆ ಇನ್ನು ಅನೇಕ ಸಮಾಜಮುಖಿ ಕೆಲಸಗಳು ಯುವಕರಿಗೆ ಮಾದರಿಯಾಗಿದೆ. ಅವರು ನಡೆದು ಬಂದ ದಾರಿ ಯುವಕರಿಗೆ ಸ್ಪೂರ್ತಿದಾಯಕ. ಹಾಗಾಗಿ “ಕೇಕ್ ಬಿಡು, ಗಿಡ ನೆಡು” ಎನ್ನುವ ಧ್ಯೇಯ ವಾಕ್ಯದೊಂದಿಗೆ ದೊಡ್ಡಮನೆ ರಾಮಪ್ಪ ಶ್ರೀಧರ್ (DRS)ಸೇವಾ ಟ್ರಸ್ಟ್ ಇಂದು ಅಪ್ಪು ಹುಟ್ಟುಹಬ್ಬವನ್ನು ಶಾಲೆಯಲ್ಲಿ ಗಿಡ ನೆಡುವುದರ ಮೂಲಕ ಯುವಕರಿಗೆ ಮಾದರಿಯಾಗುವಂತಹ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

ಜೆಸಿಐ ಭಾರತದ ಹವಾಮಾನ ಮತ್ತು ಪರಿಸರ ರಾಷ್ಟ್ರೀಯ ಸಂಯೋಜಕರಾಗಿ ಈ ವರ್ಷ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ 250ಕ್ಕೂ ಹೆಚ್ಚು ಪಾರ್ಕ್ ನ ನಿರ್ಮಾಣ ಮಾಡಲು ಪಣತೊಟ್ಟಿದ್ದೇವೆ ಎಂದು ಹೇಳಿದರು.

ಹಿರಿಯ ವಕೀಲರು, ಪರಿಸರ ಜಾಗೃತಿ ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್. ಪಾಟೀಲ್ ಮಾತನಾಡಿ, ಪ್ರಶಾಂತ್ ದೊಡ್ಡಮನೆ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ವಿಶೇಷವಾಗಿ ಹತ್ತಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನ ದತ್ತು ಪಡೆದು ಅಲ್ಲಿ ಕೈತೋಟ ಗಾರ್ಡನ್ ಮತ್ತು ಪಾರ್ಕ್ ನ ನಿರ್ಮಾಣ ಮಾಡುತ್ತಿರುವುದು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಇನ್ನೂ ಹೆಚ್ಚಿನ ಪರಿಸರ ಕಾಳಜಿ ಮೂಡಿಸಿದಂತಾಗಿದೆ. ಅವರ ಕೇಕ್ ಬಿಡು ಗಿಡ ನೆಡು ಕಾರ್ಯಕ್ರಮ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಯುವಕರಿಗೆ ಮಾದರಿಯಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ರೈತರು ಪರಿಸರ ಮತ್ತು ಕಾಡನ್ನು ಸಂರಕ್ಷಿಸುವಲ್ಲಿ ಇನ್ನೂ ಹೆಚ್ಚು ಕಾಳಜಿಯನ್ನ ವಹಿಸಬೇಕು ಎಂದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕುಮಾರ್ ಮಾತನಾಡಿ, ಪ್ರಶಾಂತ್ ದೊಡ್ಡಮನೆಯವರು ಯುವಕರಿಗೆ ಮಾದರಿ. ನಮ್ಮಂತಹ ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲೆಗಳನ್ನ ಗುರುತಿಸಿ, ಅಲ್ಲಿ ಇಂತಹ ಅಭಿವೃದ್ಧಿಯ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಪ್ರತಿ ವರ್ಷ ಒಂದು ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡಿ, ಆ ಶಾಲೆಯಲ್ಲಿ ಗಿಡಗಳನ್ನ ನೆಟ್ಟು,
ಕೈತೋಟ, ಗಾರ್ಡನ್ ಹಾಗೂ ಪಾರ್ಕನ್ನ ಮಾಡಿಕೊಟ್ಟಿದ್ದಾರೆ. ಈ ಹಿಂದಿನ ವರ್ಷಗಳಲ್ಲಿ ಸರ್ಕಾರಿ ಪ್ರೌಢಶಾಲೆ ಜಡೆ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕರಡಿಗೆರೆ, ಬಾಲಿಕಾ ಪ್ರೌಢಶಾಲೆ ಸೊರಬ, ಸರ್ಕಾರಿ ಟೌನ್ ಪ್ರೌಢಶಾಲೆ, ನಡಹಳ್ಳಿ ಪ್ರಾಥಮಿಕ ಶಾಲೆ,
ಪಿಡಬ್ಲ್ಯೂಡಿ ಪ್ರಾಥಮಿಕ ಶಾಲೆ, ಕಿರಿಯ ಪ್ರಾಥಮಿಕ ಶಾಲೆ ಚನ್ನಪುರ, ಸರ್ಕಾರಿ ಪ್ರೌಢಶಾಲೆ ಅಂಕರವಳ್ಳಿ ಗುಂಜನೂರು ಶಾಲೆಗಳಲ್ಲಿ ಹಸಿರೀಕರಣದ ಕೆಲಸಗಳನ್ನು ಮಾಡಿದ್ದಾರೆ ಎಂದರು.

ಎಸ್ ಡಿ ಎಂ ಸಿ ಅಧ್ಯಕ್ಷ ಶಿವಾನಂದ ಮಾತನಾಡಿ, ನಮ್ಮ ನಿಸರಾಣಿ ಶಾಲೆಗೆ ಅಪ್ಪುವನ ಮಾಡಲು ಅನೇಕ ಬಗೆಯ ಅಲಂಕಾರಿಕ ಗಿಡಗಳು, ಮಾವು, ತೆಂಗು, ಹಲಸು ಇನ್ನೂ ಹೆಚ್ಚಿನ ಗಿಡಗಳನ್ನು ಕೊಟ್ಟಿದ್ದಾರೆ. ಗಿಡಗಳಿಗೆ ನೀರಿನ ಪೈಪ್ಲೈನ್ ಅಳವಡಿಕೆ ಮಾಡಿ ಮತ್ತು ಸ್ಪ್ರಿಂಕ್ಲರ್ ಗಳ ಜೋಡಣೆ ಮಾಡಿಕೊಟ್ಟಿದ್ದಾರೆ. 25 ಸಾವಿರಕ್ಕೂ ಹೆಚ್ಚಿನ ಅನುದಾನದಲ್ಲಿ ಅಪ್ಪುವನ ಮಾಡಿಕೊಟ್ಟಿದ್ದಾರೆ ಎಂದು ಅಭಿನಂದಿಸಿದರು.

ಶಾಲಾ ಮುಖ್ಯ ಶಿಕ್ಷಕ ದೀಪಕ್ ಗೌಡ ಸ್ವಾಗತಿಸಿದರು. ಶಿಕ್ಷಕಿ ಶಾರದ ಕಾರ್ಯಕ್ರಮದ ನಿರೂಪಣೆ ಮಾಡಿದರು. ಎಸ್ ಡಿ ಎಂ ಸಿ ಉಪಾಧ್ಯಕ್ಷೆ ನಿಖಿಲ, ಸದಸ್ಯರಾದ ಪ್ರಕಾಶ್, ರಜನಿ, ರಾಜು, ಸಂಗೀತ, ಸಂಗೀತ ಜಟ್ಟೆಪ್ಪ, ಸಣ್ಣಪ್ಪ , ಜ್ಯೋತಿ , ಅಣ್ಣಪ್ಪ,ಗ್ರಾಮ ಪಂಚಾಯತಿ ಸದಸ್ಯೆ ರಶ್ಮಿ ,ಜೆಸಿಐ ಸೊರಬ ಸಿಂಧೂರ ಘಟಕದ ಸ್ಥಾಪಕ ಅಧ್ಯಕ್ಷೆ ಪೂಜಾ ಪ್ರಶಾಂತ್ ದೊಡ್ಡಮನೆ ,ಅಧ್ಯಕ್ಷ ಉಮೇಶ್ ನಾಯಕ್, ಉಪಾಧ್ಯಕ್ಷ ಮಹೇಶ್ ಖಾರ್ವಿ, ಹಿರಿಯ ವಕೀಲ ಎಂ.ಆರ್ .ಪಾಟೀಲ್, ಶಿಕ್ಷಕರಾದ ಜೋಶಿ , ಶಾರದಮ್ಮ, ಅನಿತಾ ಎಂ .ವೈ., ಸುಮಂಗಳ , ಅಕ್ಷತಾ ಮುಂತಾದವರು ಉಪಸ್ಥಿತರಿದ್ದರು,