ಭಟ್ಕಳ: ತಾಲೂಕಿನ ಮಾವಿನಕುರ್ವೆ ವ್ಯಾಪ್ತಿಯ ತಲಗೋಡ್ ಮತ್ತು ಬೆಳ್ನಿ ಗ್ರಾಮದ ಗುಡ್ಡಕ್ಕೆ ಕಾಡ್ಗಿಚ್ಚು ಹೊತ್ತಿಕೊಂಡು ಭಾಗಶಃ ಕಾಡು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ.
ಇದನ್ನೂ ಓದಿ : ಶ್ರೀ ರೇಣುಕಾಂಬ ದೇವಿಯ ಮಹಾರಥೋತ್ಸವ ಸಂಪನ್ನ
ಇಂದು(ಮಾ.೧೮) ಮಧ್ಯಾಹ್ನ ತಲಗೋಡಿನ ಗೊಂಡರಕೇರಿ ಗುಡ್ಡದ ಕಾಡಂಚಿನಲ್ಲಿ ಸಣ್ಣಗೆ ಬೆಂಕಿ ಹೊತ್ತಿಕೊಂಡಿತ್ತು. ಗಾಳಿ ಜೋರಾಗಿರುವ ಕಾರಣಕ್ಕೆ ಕ್ಷಣಮಾತ್ರದಲ್ಲಿ ಇಡೀ ಗುಡ್ಡವೆಲ್ಲ ಬೆಂಕಿ ವ್ಯಾಪಿಸಿಕೊಂಡಿತ್ತು. ಸ್ಥಳೀಯರು ಅಗ್ನಿಶಾಮಕ ಇಲಾಖೆಯನ್ನು ಸಂಪರ್ಕಿಸಿ ರಸ್ತೆಯ ಪಕ್ಕದ ಬೆಂಕಿಯನ್ನು ನಂದಿಸಿದರಾದರೂ ಅದಾಗಲೇ ಗುಡ್ಡದ ಮೇಲೆ ಬೆಂಕಿ ವ್ಯಾಪಿಸಿಕೊಂಡಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಹರಸಾಹಸ ಮಾಡಿ ಬೆಂಕಿಯನ್ನು ನಂದಿಸಿದ್ದಾರೆ. ಅಕೇಶಿ ಸೊಪ್ಪನ್ನು ಬಳಸಿ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಬೆಂಕಿ ನಂದಿಸಲು ಯಶಸ್ವಿಯಾಗಿದ್ದರು. ಆದರೆ ಬೂದಿ ಮುಚ್ಚಿದ ಕಿಡಿ ಮತ್ತೆ ಮೆಲೆದ್ದು ಸಂಜೆ ವೇಳೆಗಾಗಲೇ ಬೆಳ್ನಿ ಭಾಗದ ಗುಡ್ಡದ ತುಂಬೆಲ್ಲಾ ಆವರಿಸಿಕೊಂಡಿತು. ರಸ್ತೆಯುದ್ದಕ್ಕೂ ನೂರಾರು ಜನ ಧಗಧಗನೆ ಬೆಂಕಿಯ ಕೆನ್ನಾಲಿಗೆಗೆ ಭಾಗಶಃ ಕಾಡು ಆಹುತಿಯಾಗುತ್ತಿರುವ ದೃಶ್ಯವನ್ನು ಆತಂಕ ಮತ್ತು ಅಸಹಾಯಕತೆ ನೋಡುತ್ತಿದ್ದರು.
ಈ ವಿಡಿಯೋ ನೋಡಿ : https://fb.watch/qU6jkpKUtK/?mibextid=Nif5oz
ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿರುವ ಕಾಡು ಪ್ರದೇಶ ಸರೀಸೃಪಗಳು, ಕಾಡುಹಂದಿ, ನರಿ, ಮೊಲ, ಮುಳ್ಳುಹಂದಿ, ಕಾಡು ಬೆಕ್ಕು ಮುಂತಾದ ಸಣ್ಣಪುಟ್ಟ ಪ್ರಾಣಿಪಕ್ಷಿಗಳಿಗೆ ಆವಾಸ ಸ್ಥಾನವಾಗಿದೆ. ಮನುಷ್ಯನ ಸಣ್ಣತನ ಮತ್ತು ಬೆಜಾವಾಬ್ಧಾರಿ ವರ್ತನೆಯ ಫಲವಾಗಿ ಮೂಕಪ್ರಾಣಿಗಳು ರೋಧಿಸುವಂತಾಗಿದೆ.