ಬೆಂಗಳೂರು : ಸಂಯುಕ್ತ ಕರ್ನಾಟಕ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಹಿರಿಯ ಪತ್ರಕರ್ತ ಎಂ.ಕೆ.ಭಾಸ್ಕರ್ ರಾವ್ ಇಂದು ನಿಧನರಾದರು. ಅವರು ಕೆಲ ಕಾಲದ ಅನಾರೋಗ್ಯದ ಬಳಿಕ ಇಂದು ಕೊನೆಯುಸಿರೆಳೆದರು.

ಇದನ್ನೂ ಓದಿ : ವೀರೇಶ್ವರ ಸ್ವಾಮೀಜಿ ಲೋಕಸಭೆ ಚುನಾವಣಾ ಕಣಕ್ಕೆ !

ಅವರ ನಿಧನಕ್ಕೆ ರಾಜ್ಯ ಬಿಜೆಪಿ ವಕ್ತಾರ, ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಹಿರಿಯ ಪತ್ರಕರ್ತರು, ನನ್ನ ಪಾಲಿನ ಹಿತೈಷಿಗಳು, ಮಾರ್ಗದರ್ಶಕರೂ ಆದ ಭಾಸ್ಕರ್ ರಾವ್ ಅವರು ಈ ತಲೆಮಾರಿನ ಅಪರೂಪದ ಪತ್ರಕರ್ತರಾಗಿದ್ದರು. ಕರ್ನಾಟಕ ರಾಜಕಾರಣದ ಎನ್ಸೈಕ್ಲೊಪೀಡಿಯಾ ದಂತಿದ್ದ ಭಾಸ್ಕರರಾವ್,
ಮೂಲತಃ ಶಿವಮೊಗ್ಗ ಜಿಲ್ಲೆ ಸಾಗರದವರು. ಇತ್ತೀಚಿನ ವರ್ಷಗಳಲ್ಲಿ ಉತ್ತರಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಚಿಪಗೇರಿ ಗ್ರಾಮದಲ್ಲಿ ಬಂದು ಅವರ ಕುಟುಂಬದವರು ನೆಲೆಸಿದ್ದರು. ಹೀಗಾಗಿ ಅವರು ಸಂಪೂರ್ಣವಾಗಿ ನನ್ನ ಜಿಲ್ಲೆಯವರೇ ಆಗಿದ್ದರು. ನನ್ನೊಂದಿಗೆ ಸುಧೀರ್ಘ ಕಾಲದ ಒಡನಾಟ ಹೊಂದಿದ್ದ ಭಾಸ್ಟರರಾವ್ ಅವರು ವರ್ತಮಾನದ ಅನೇಕ ಸಂಗತಿಗಳನ್ನು ಚರ್ಚಿಸುತ್ತಿದ್ದರು ಎಂದು ತಿಳಿಸಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ನಾನು ಸಂಪಾದಕನಾಗಿ ಕೆಲಸ ಮಾಡಿದ ಪತ್ರಿಕೆಗಳಿಗೆ ಅಂಕಣಕಾರರಾಗಿ, ಟಿವಿ ಪ್ಯಾನೆಲಿಸ್ಟ್ ಆಗಿ, ವಿಸ್ತಾರ ವೆಬ್ ನ ನಿರಂತರ ಅಂಕಣಕರಾಗಿ ಬೆನ್ನು ತಟ್ಟಿದ್ದರು. ಮಾತ್ರವಲ್ಲ, ನಾನು ರಾಜಕೀಯ ಕ್ಷೇತ್ರಕ್ಕೆ ಬಂದಾಗಲೂ ಪ್ರೋತ್ಸಾಹಿಸಿದ್ದರು. ಉತ್ತರ ಕನ್ನಡ ಜಿಲ್ಲೆಯ ಕುರಿತು ಅವರಿಗೆ ವಿಶೇಷ ಒಲವಿತ್ತು ಎಂದು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿದ್ದಾಗಲೂ ಎಲ್ಲವನ್ನೂ ಗಮನಿಸುತ್ತಾ, ನನ್ನ ಹಿತ ಬಯಸಿದ ಬಾಸ್ಕರರಾವ್ ಇಲ್ಲವಾಗಿದ್ದಾರೆ. ಪೂರ್ವಾಗ್ರಹವಿಲ್ಲದ, ಅಪಾರ ತಿಳುವಳಿಕೆಯಿದ್ದ, ಪತ್ರಿಕಾವೃತ್ತಿಗೆ ಘನತೆ ತಂದುಕೊಟ್ಟ ಹಿರಿಯ ಜೀವ ಭಾಸ್ಕರ ರಾವ್ ಇಲ್ಲವಾಗಿರುವುದು ನನಗೆ ಅಪಾರ ನೋವು ತಂದಿದೆ ಎಂದು ಕಂಬನಿ‌ ಮಿಡಿದಿರುವ ಹರಿಪ್ರಕಾಶ ಕೋಣೆಮನೆ, ಅಗಲಿದ ಹಿರಿಯ ಒಡನಾಡಿಯ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಮೃತರ ಕುಟುಂಬಕ್ಕೆ ಈ ಸಂಕಟ ಭರಿಸುವ ಶಕ್ತಿಯನ್ನು ಭಗವಂತ ಕೊಡಲೆಂದು ಪ್ರಾರ್ಥಿಸಿದ್ದಾರೆ.

ಕೆಯುಡಬ್ಲ್ಯುಜೆ ಸಂತಾಪ
ಕ್ರಿಯಾಶೀಲ ಪತ್ರಕರ್ತರಾಗಿದ್ದ ಭಾಸ್ಕರ ರಾವ್ ಅವರು ಅಂಕಣಕಾರರಾಗಿ ಮತ್ತು ಟಿವಿ ಡಿಬೇಟ್ ಗಳಲ್ಲಿ ರಾಜಕೀಯ ವಿಶ್ಲೇಷಣೆಗಾರರಾಗಿ ಗಮನಸೆಳೆದಿದ್ದರು. ಅವರ ನಿಧನದಿಂದ ಸುದ್ದಿ ಮನೆಯ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಶೋಕಿಸಿದೆ.
ಕಲಬುರಗಿಯಲ್ಲಿ ನಡೆದ ೩೬ ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಭಾಸ್ಕರ ರಾವ್ ಅವರಿಗೆ ಕೆಯುಡಬ್ಲ್ಯೂಜೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಮೂರು ತಿಂಗಳ ಹಿಂದೆ ಅವರ ಮನೆಗೆ ತೆರಳಿ ಮನೆಯಂಗಳದಲ್ಲಿ ನಮನ ಕಾರ್ಯಕ್ರಮದಲ್ಲಿ ಭಾಸ್ಕರ ರಾವ್‌ ದಂಪತಿಗಳನ್ನು ಕೆಯುಡಬ್ಲ್ಯೂಜೆ ಸನ್ಮಾನಿಸಿತ್ತು ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸ್ಮರಿಸಿದ್ದಾರೆ.
ಭಾಸ್ಕರ ರಾವ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ತಗಡೂರು ಪ್ರಾರ್ಥಿಸಿದ್ದಾರೆ.