ಭಟ್ಕಳ: ಸರಕಾರ ಬಂದ ನಂತರ ಒಂದೂ ಅಭಿವೃದ್ಧಿ ಕಾರ್ಯವಾಗಿಲ್ಲ, ಈ ಹಿಂದೆ ಬಿ.ಜೆ.ಪಿ. ಸರಕಾರ ಮಂಜೂರಿ ಮಾಡಿದ ಕಾಮಗಾರಿಗಳ ಗುದ್ದಲಿ ಪೂಜೆ ಮಾಡುತ್ತಿರುವ ಉಸ್ತುವಾರಿ ಸಚಿವರು ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದೇನೆ ಎಂದು ಜನತೆಯ ಮುಂದೆ ಹೇಳಲಿ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಸವಾಲು ಹಾಕಿದ್ದಾರೆ.

ಇದನ್ನೂ ಓದಿ : ಉತ್ತರ ಕನ್ನಡ ಕ್ಷೇತ್ರದಿಂದ ಸ್ವಾಮೀಜಿ ಸ್ಪರ್ಧೆ : ದಿಢೀರ್ ನಿರ್ಧಾರ ಬದಲು

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗುದ್ದಲಿ ಪೂಜೆ ಬಿಟ್ಟು ಬೇರೇನೂ ಆಗುತ್ತಿಲ್ಲ. ಅದೂ ಹಿಂದಿನ ಬಿಜೆಪಿ ಸರ್ಕಾರದ ಅನುದಾನದಲ್ಲಿ. ರಾಜ್ಯದ ಕಾಂಗ್ರೆಸ್ ಸರಕಾರ ಎಲ್ಲ ರಂಗದಲ್ಲಿಯೂ ವಿಫಲವಾಗಿದೆ. ಚುನಾವಣಾ ಸಮಯದಲ್ಲಿ ನೀಡಿದ್ದ ಗ್ಯಾರೆಂಟಿ ಭರವಸೆಗಳು ಹಳಿತಪ್ಪಿವೆ. ಆದರೆ ಮತ್ತೆ ಗ್ಯಾರೆಂಟಿ ಕೊಡಲು ಹೊರಟಿದ್ದು ಹಾಸ್ಯಾಸ್ಪದ ಎಂದು ಟೀಕಿಸಿದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಹಿಂದೂ ಕಾರ್ಯಕರ್ತರ ಹಳೆಯ ಕೇಸುಗಳನ್ನು ಮತ್ತೆ ತೆರೆದು ಹಿಂದು ಕಾರ್ಯಕರ್ತರಿಗೆ ಕಿರುಕುಳ ಕೊಡುವ ಕಾಂಗ್ರೆಸ್ ಭಟ್ಕಳದಲ್ಲಿಯೂ ಕೂಡಾ ಶ್ರೀನಿವಾಸ ನಾಯ್ಕರಿಗೆ ಗಡಿಪಾರು ಮಾಡುವ ನೋಟೀಸ್ ನೀಡಿದೆ. ಅವರ ಪರವಾಗಿ ನಾವೆಲ್ಲರೂ ನಿಲ್ಲುತ್ತೇವೆ. ಯಾವುದೇ ಕಾರ್ಯಕರ್ತರಿಗೆ ತೊಂದರೆಯಾದರೆ ಅದನ್ನು ಬಗೆಹರಿಸುವ ಕಾರ್ಯಕ್ಷಮತೆ ನಮ್ಮಲ್ಲಿದೆ. ಕಾಂಗ್ರೆಸ್ ಕೇವಲ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ : ಹಿಟ್ ಅಂಡ್ ರನ್ ಅಪಘಾತ ಪ್ರಕರಣಗಳಿಗೂ ಪರಿಹಾರ

ಉತ್ತರ ಕನ್ನಡ ಜಿಲ್ಲೆ ಬಿ.ಜೆ.ಪಿ.ಯ ಗಂಡುಮೆಟ್ಟಿನ ಜಿಲ್ಲೆ. ಕಳೆದ ಆರು ಚುನಾವಣೆಯಲ್ಲಿ ಬಿ.ಜೆ.ಪಿ.ಯನ್ನು ಜನತೆ ಗೆಲ್ಲಿಸಿದ್ದಾರೆ. ಈ ಬಾರಿ ನನ್ನ ಗೆಲುವು ದಾಖಲೆಯ ಗೆಲುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಶಾಸಕನಾಗಿ, ಜಿಲ್ಲೆಯ ಉಸ್ತುವಾರಿ ಸಚಿವನಾಗಿ, ಕಳೆದ ಅವಧಿಯಲ್ಲಿ ವಿಧಾನ ಸಭಾ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಜನರ ನಾಡಿಮಿಡಿತವನ್ನು ಅರಿತಿದ್ದೇನೆ. ಕೆನರಾ ಕ್ಷೇತ್ರದ ಜನತೆಯ ಧ್ವನಿಯಾಗಿ ಲೋಕಸಭೆಯಲ್ಲಿ ಸಮರ್ಥವಾಗಿ ನಿರ್ವಹಿಸುವ ಭರವಸೆಯನ್ನು ಜನತೆಗೆ ನೀಡುತ್ತೇನೆ. ಜಿಲ್ಲೆಯ ಅತಿಕ್ರಮಣದಾರರ ಸಮಸ್ಯೆ, ಕೃಷಿಕರ ಸಮಸ್ಯೆ ಮೀನುಗಾರರ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಹೆದ್ದಾರಿ ಕಾಮಗಾರಿ ಹಾಗೂ ರೈಲ್ವೆ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು.