ಭಟ್ಕಳ: ಮಳೆಗಾಲ ಮತ್ತು ಈದ್ ಉಲ್-ಫಿತರ್ ಸಿದ್ಧತೆಗಾಗಿ ಭಟ್ಕಳದಲ್ಲಿ ತುರ್ತು ನೈರ್ಮಲ್ಯ ಕ್ರಮಗಳನ್ನು ಜರುಗಿಸುವಂತೆ ಭಟ್ಕಳ ಮಜ್ಜಿಸೆ ಇಸ್ಲಾಹ- ವ- ತಂಝೀಮ್ ವತಿಯಿಂದ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಇದನ್ನೂ ಓದಿ : ಇಫ್ತಾರ್ ಸೌಹಾರ್ದ ಕೂಟದಲ್ಲಿ ಸರ್ವಧರ್ಮೀಯರು ಭಾಗಿ

ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಭಟ್ಕಳ ಪುರಸಭೆಯಾದ್ಯಂತ ತುರ್ತು ನೈರ್ಮಲ್ಯ ಕ್ರಮಗಳು ಮತ್ತು ಒಳಚರಂಡಿ ದುರಸ್ತಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಮಳೆಯಿಂದಾಗಿ ಭಟ್ಕಳದಲ್ಲಿ ಸಂಭವಿಸಬಹುದಾದ ಅವಘಡಗಳಿಂದ ರಕ್ಷಿಸಿಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ನೈಜ ಮತ್ತು ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಈದ್ಗಾ ಪಾವಿತ್ರ್ಯತೆಗೆ ಧಕ್ಕೆ :
ಮುಸ್ಲಿಮರ ಪವಿತ್ರ ಹಬ್ಬವಾದ ಈದ್ ಉಲ್-ಫಿತರ್ (ರಮಝಾನ್ ಹಬ್ಬ) ಸಮೀಪಿಸುತ್ತಿದೆ. ಬಂದರ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾವಿರಾರು ಜನರು ಪ್ರಾರ್ಥನೆಗಾಗಿ ಸೇರುತ್ತಾರೆ. ಈದ್ಗಾ ಬಳಿ ಅನಧಿಕೃತ ಗೂಡಂಗಡಿಗಳು ತಲೆ ಎತ್ತಿಕೊಂಡಿವೆ. ಇದರಿಂದಾಗಿ ಈದ್ಗಾದ ಪಾವಿತ್ರ್ಯತೆಗೆ ಧಕ್ಕೆ ಉಂಟಾಗುತ್ತಿದೆ. ಈದ್ಗಾದ ಗೋಡೆಗೆ ತಾಗಿಕೊಂಡಂತೆ ನಿರ್ಮಾಣಗೊಂಡಿರುವ ಅನಧಿಕೃತ ಗೂಡಂಗಡಿಗಳಿಂದ ತ್ಯಾಜ್ಯ ವಸ್ತುಗಳು ಈದ್ಗಾ ಪಕ್ಕದಲ್ಲಿ ಬಿದ್ದುಕೊಂಡಿರುತ್ತವೆ. ಅಲ್ಲದೆ ಜನರು ಅಂಗಡಿಯ ಮರೆಯಲ್ಲಿ ನಿಂತುಕೊಂಡು ಈದ್ಗಾ ಬಳಿ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಹಬ್ಬಕ್ಕೂ ಮುನ್ನ ಈದ್ಗಾ ಬಳಿ ಸ್ವಚ್ಚತಾ ಅಭಿಯಾನ ನಡೆಸುವುದರ ಮೂಲಕ ಈದ್ಗಾ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬರಬೇಕು. ನೈರ್ಮಲ್ಯ ಸಂಹಿತೆ ಉಲ್ಲಂಘಿಸುವ ಅನಧಿಕೃತ ಅಂಗಡಿದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಭಟ್ಕಳವು ಸಾಮರಸ್ಯದ ಧಾರ್ಮಿಕ ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ಈ ಗೌರವವನ್ನು ಎತ್ತಿಹಿಡಿಯಲು, ಮಸೀದಿಗಳು, ದೇವಾಲಯಗಳು ಮತ್ತು ಚರ್ಚ್‌ಗಳ ಸುತ್ತಲೂ ಸರಿಯಾದ ನೈರ್ಮಲ್ಯ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಪುರಸಭೆ ಆಡಳಿತವನ್ನು ಒತ್ತಾಯಿಸಲಾಗಿದೆ.

ಮಳೆಗಾಲದಲ್ಲಿ ರೋಗಗಳು ಹರಡುವುದನ್ನು ತಡೆಯಲು ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿ ಜನರಿಗೆ ಉತ್ತಮ ಜೀವನ ನಡೆಸುವಂತೆ ಅವಕಾಶ ಮಾಡಿಕೊಡಬೇಕು. ಪುರಸಭೆ ವ್ಯಾಪ್ತಿಯ ಮುಖ್ಯರಸ್ತೆಯ ಎರಡೂ ಬದಿಯ ಚರಂಡಿಗಳು ಮಳೆಗಾಲದಲ್ಲಿ ತುಂಬಿ ಹರಿದು ಮಳೆ ನೀರು ರಸ್ತೆ ಬದಿ ಇರುವ ಅಂಗಡಿಗಳಿಗೆ ನುಗ್ಗುತ್ತದೆ. ಇದರಿಂದಾಗಿ ವ್ಯಾಪಾರಸ್ಥರಿಗೆ ಅಪಾರ ನಷ್ಟ ಉಂಟಾಗುತ್ತದೆ. ಅಲ್ಲದೆ ಮುಚ್ಚಿಹೋಗಿರುವ ಚರಂಡಿಗಳಿಂದ ರಸ್ತೆ ಮೇಲೆ ನೀರು ಹರಿಯುತ್ತಿದೆ. ಈ ನಿಟ್ಟಿನಲ್ಲಿ ಮುಖ್ಯ ರಸ್ತೆಯ ಎರಡೂ ಬದಿಯ ಚರಂಡಿಗಳನ್ನು ದುರಸ್ತಿಗೊಳಿಸುವ ಕೆಲಸವನ್ನು ಕೂಡಲೇ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ.
ಸುಲ್ತಾನ್ ಸ್ಟ್ರೀಟ್, ಬಂದರ್ ರಸ್ತೆ, ಅಸರಕೇರಿ, ನೂರ್ ಮಸೀದಿ ಡ್ರೈನ್, ಮಟನ್ ಮಾರ್ಕೆಟ್ ಪಕ್ಕದ ಓಣಿ, ಮೌಲಾನಾ ಅಜಾದ್ ರಸ್ತೆ, ಬಸ್ತಿ ರಸ್ತೆ, ಕಾರ್ ಸ್ಟ್ರೀಟ್, ನವಾಯತ್ ಕಾಲೋನಿ, ಅಮೀನುದ್ದೀನ್ ರಸ್ತೆ, ಶಂಸುದ್ದೀನ್ ರಸ್ತೆಯ ಪ್ರದೇಶಗಳಲ್ಲಿಯೂ ಚರಂಡಿ ಸ್ವಚ್ಚತೆಯ ಕಾರ್ಯವನ್ನು ಕೈಗೊಳ್ಳಬೇಕಾಗಿದೆ. ಈ ಸಮಯೋಚಿತ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಭಟ್ಕಳ ಪುರಸಭೆಯು ಮುಂಬರುವ ಮಳೆಗಾಲ ಮತ್ತು ಈದ್ ಉಲ್-ಫಿತರ್ ಆಚರಣೆಗಳಲ್ಲಿ ಎಲ್ಲಾ ನಿವಾಸಿಗಳಿಗೆ ಸ್ವಚ್ಛ ಮತ್ತು ನೈರ್ಮಲ್ಯದ ವಾತಾವರಣವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.