ಬೈಂದೂರು : ದೇಶದ ಪ್ರಸಿದ್ಧ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಕೊಲ್ಲೂರು ದೇವಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಬೇಕು ಎಂಬ ಬಿಜೆಪಿ ಕಾರ್ಯಕರ್ತರ ಕೂಗು ಇದೀಗ ರಾಜಧಾನಿ ದೆಹಲಿಗೆ ತಲುಪಿದೆ.

ಇದನ್ನೂ ಓದಿ : ನಾಳೆ ದ್ವಿತೀಯ ಪಿಯು ಫಲಿತಾಂಶ ಪ್ರಕಟ

ಸ್ವತಃ ಪ್ರಧಾನಿ ಕಾರ್ಯಾಲಯ ಬೈಂದೂರು ಶಾಸಕರಿಗೆ ಕರೆ ಮಾಡಿ ಕೊಲ್ಲೂರು ಜನರ ಸಂಕಲ್ಪದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ ಬೈಂದೂರಲ್ಲಿ ಒಂದು ಲಕ್ಷ ಮತಗಳ ಮುನ್ನಡೆ ದೊರಕಿಸಿಕೊಟ್ಟರೆ ನರೇಂದ್ರ ಮೋದಿ ಅವರನ್ನು ಕರೆಸುವುದಾಗಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಭರವಸೆ ನೀಡಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಪ್ರಧಾನಿ ಕಾರ್ಯಾಲಯ ಕೊಲ್ಲೂರು ಸಂಕಲ್ಪದ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಕುರಿತು ಶಾಸಕ ಗುರುರಾಜ ಗಂಟಿಹೊಳೆ ಪ್ರತಿಕ್ರಿಯೆ ನೀಡಿ, ನಮೋ ಆಪ್ ಮೂಲಕ ಕೊಲ್ಲೂರು ಜನರ ಸಂಕಲ್ಪವನ್ನು ಪ್ರಸ್ತಾಪಿಸಲಾಗಿದೆ. ಪ್ರಧಾನಿ ಕಾರ್ಯಾಲಯ ಕರೆ ಮಾಡಿ ಮಾಹಿತಿ ಪಡೆದುಕೊಂಡಿದೆ. ಕಾಶಿ ಕಾರಿಡಾರ್ ನಂತೆ ಕೊಲ್ಲೂರು ಕಾರಿಡಾರ್ ರಚಿಸಿ ಅಭಿವೃದ್ಧಿ ಮಾಡಬೇಕು ಮತ್ತು ಕೊಲ್ಲೂರು ಪ್ರಾಧಿಕಾರ ರಚಿಸಬೇಕು ಎಂಬ ನಮ್ಮ ಬೇಡಿಕೆಯನ್ನು ಈ ಸಂದರ್ಭದಲ್ಲಿ ವಿವರಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಹುದೊಡ್ಡ ಕ್ಷೇತ್ರ ಇದು :
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ದಕ್ಷಿಣ ಭಾರತದಲ್ಲೇ ಅತ್ಯಂತ ಪ್ರಸಿದ್ಧಿ ಹೊಂದಿರುವ ಶಕ್ತಿ ತಾಣವಾಗಿದೆ. ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪನೆಗೊಂಡಿರುವ ಈ ದೇವಸ್ಥಾನಕ್ಕೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಸೇರಿದಂತೆ ದೇಶದ ಉದ್ದಗಲಕ್ಕೂ ಇರುವ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಬಹುದೊಡ್ಡ ಸಂಖ್ಯೆಯಲ್ಲಿ ಈ ದೇವಿಯನ್ನು ಭಕ್ತರು ಆರಾಧಿಸುತ್ತಾರೆ.

ಕೊಡಚಾದ್ರಿ ಶಿಖರದ ತಪ್ಪಲು ಪ್ರದೇಶದಲ್ಲಿ ಮೂಕಾಂಬಿಕಾ ದೇವಿಯ ದೇವಸ್ಥಾನವು ನೆಲೆಗೊಂಡಿದೆ. ಶಿವ ಮತ್ತು ಶಕ್ತಿ ಈ ಇಬ್ಬರನ್ನೂ ಸಂಯೋಜಿಸಿರುವ ಜ್ಯೋತಿರ್ಲಿಂಗದ ಸ್ವರೂಪದಲ್ಲಿ ಈ ದೇವತೆಯು ಕಂಡುಬರುತ್ತಾಳೆ. ಶ್ರೀಚಕ್ರದ ಮೇಲೆ ಸ್ಥಾಪಿಸಲಾಗಿರುವ ದೇವತೆಯ ಪಂಚಲೋಹ ದ (ಐದು ಧಾತುಗಳನ್ನು ಬೆರೆಸಿದ ಲೋಹದ) ವಿಗ್ರಹವನ್ನು ಆದಿ ಶಂಕರಾಚಾರ್ಯರು ಈ ಸ್ಥಳಕ್ಕೆ ತಾವು ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತದೆ. ದೇವತೆಯ ಮೂಲಸ್ಥಳವು ಕೊಡಚಾದ್ರಿ ಶಿಖರದ ತುದಿಯ (೩೮೮೦’) ಮೇಲಿದೆ ಎಂಬುದಾಗಿಯೂ ಮತ್ತು ಕೊಡಚಾದ್ರಿಯನ್ನು ಸಂಪೂರ್ಣವಾಗಿ ಚಾರಣ ಮಾಡಿಕೊಂಡು ಮೂಲಸ್ಥಳವನ್ನು ತಲುಪುವುದು ಸಾಮಾನ್ಯ ಜನರಿಗೆ ಅತ್ಯಂತ ಕಷ್ಟಕರವಾಗಿದ್ದರಿಂದ, ಶಂಕರಾಚಾರ್ಯರು ದೇವಸ್ಥಾನವನ್ನು ಕೊಲ್ಲೂರಿನಲ್ಲಿ ಪುನರ್‌‌-ಸ್ಥಾಪಿಸಿದರು ಎಂಬುದಾಗಿಯೂ ನಂಬಲಾಗಿದೆ. ಇಲ್ಲಿ ಪಂಚಮುಖಿ ಗಣೇಶನ ಒಂದು ಮನಮೋಹಕ ಶಿಲ್ಪವಿರುವುದನ್ನು ಕಾಣಬಹುದು. ಕರ್ನಾಟಕದಲ್ಲಿನ ಪರಶುರಾಮ ಕ್ಷೇತ್ರದ ಸಪ್ತ ಮುಕ್ತಿಸ್ಥಳದ ತೀರ್ಥಯಾತ್ರಾ ತಾಣಗಳ ಪೈಕಿ ಒಂದೆಂಬುದಾಗಿ ಕೊಲ್ಲೂರು ಪರಿಗಣಿಸಲ್ಪಟ್ಟಿದೆ.

ಆಧ್ಯಾತ್ಮಿಕ ವೈಭವ ಮರು ಸ್ಥಾಪಿಸುವ ಉದ್ದೇಶ:
ಕಾಶಿ ವಿಶ್ವನಾಥ ಕಾರಿಡಾರ್ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ. ಇದು ೫೦೦೦ ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಾಣವಾಗಿದೆ. ೮೦೦ ಕೋಟಿ ರೂ. ವೆಚ್ಚದಲ್ಲಿ ಪುರಾತನ ದೇವಸ್ಥಾನವನ್ನು ಗಂಗಾ ನದಿಯ ದಡಕ್ಕೆ ಸಂಪರ್ಕಿಸುತ್ತದೆ. ಆಧ್ಯಾತ್ಮಿಕ ಕೇಂದ್ರದ ಕಳೆದು ಹೋದ ವೈಭವವನ್ನು ಮರು ಸ್ಥಾಪಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಸದೀಯ ಕ್ಷೇತ್ರದಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದರು. ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ದೇವಾಲಯ ಕಾರಿಡಾರ್ ಯೋಜನೆ, ಕಾಶಿ ವಿಶ್ವನಾಥ ದೇವಾಲಯ ಮತ್ತು ಗಂಗಾ ನದಿಯ ಉದ್ದಕ್ಕೂ ಇರುವ ಘಾಟುಗಳನ್ನು ಸಂಪರ್ಕಿಸುತ್ತದೆ. ಈ ಯೋಜನೆ ಯಾತ್ರಾರ್ಥಿಗಳು ಮತ್ತು ಭಕ್ತರ ಸುಗಮ ಸಂಚಾರವನ್ನು ಖಾತ್ರಿಪಡಿಸುವ ಗುರಿ ಹೊಂದಿದೆ. ಕಾಶಿ ವಿಶ್ವನಾಥ ಕಾರಿಡಾರ್ ರಚನೆ ನಂತರ ಕಾಶಿ ಅಭಿವೃದ್ಧಿ ವೇಗದಲ್ಲಿ ಭಾರೀ ಮುನ್ನಡೆ ಸಾಧಿಸಿದೆ.

ಅದೇ ರೀತಿ ಪುರಿಯ ಪ್ರಸಿದ್ಧ ಶ್ರೀ ಜಗನ್ನಾಥ ಹೆರಿಟೇಜ್ ಕಾರಿಡಾರ್ ಸಹ 800 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಪುರಿಯನ್ನು ವಿಶ್ವ ಪಾರಂಪರಿಕ ನಗರವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆಯ ಪ್ರಮುಖ ಭಾಗವಾಗಿದೆ. ಉಜ್ಜಯಿನಿಯ ಮಹಾಕಾಲ ಕಾರಿಡಾರ್ ಮಧ್ಯಪ್ರದೇಶದ ಪ್ರವಾಸೋದ್ಯಮ ಉದ್ದೇಶದಿಂದ ನಿರ್ಮಾಣಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ೮೫೦ ಕೋಟಿ ರೂ.ವೆಚ್ಚದಲ್ಲಿ ಮಹಾಕಾಲೇಶ್ವರ ದೇವಸ್ಥಾನ ಕಾರಿಡಾರ್ ಅಭಿವೃದ್ಧಿ ಯೋಜನೆ ಉದ್ಘಾಟಿಸಿದ್ದಾರೆ.

ಇದೀಗ ಕರ್ನಾಟಕ ಕರಾವಳಿಯ ಕೊಲ್ಲೂರಿನಲ್ಲಿ ಹಿಂದೂ ಧರ್ಮಕ್ಕೆ ಪುನರುತ್ಥಾನ ನೀಡಿದ ಆದಿ ಶಂಕರಾಚಾರ್ಯ ಅವರಿಂದ ಸ್ಥಾಪನೆಗೊಂಡಿರುವ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನವನ್ನು ಸಹ ಪುರಾತನ ದೇವಾಲಯಗಳ ಕಾರಿಡಾರ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕೆನ್ನುವುದು ಈ ಭಾಗದ ಭಕ್ತರ ಬಹುದೊಡ್ಡ ಬೇಡಿಕೆಯಾಗಿದೆ. ದಕ್ಷಿಣ ಭಾರತದಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಕೊಲ್ಲೂರು ಕಾರಿಡಾರ್ ರಚನೆ ಮಾಡಬೇಕು ಎಂಬ ಬೇಡಿಕೆ ಈಡೇರಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲೂರು ಪುಣ್ಯಕ್ಷೇತ್ರಕ್ಕೆ ಕರೆಸಬೇಕು. ಹೀಗಾಗಿ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರನ್ನು ಲಕ್ಷಾಂತರ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಪ್ರಧಾನಿ ಅವರನ್ನು ಇಲ್ಲಿಗೆ ಕರೆಸಬೇಕು ಎನ್ನುವುದು ಜನರ ಒತ್ತಾಯವಾಗಿದೆ.

ಲೋಕಸಭಾ ಚುನಾವಣೆ ನಂತರ ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೊಲ್ಲೂರಿಗೆ ಆಗಮಿಸಿ ಕೊಲ್ಲೂರನ್ನು ಧಾರ್ಮಿಕ ಕಾರಿಡಾರ್ ಎಂದು ಘೋಷಣೆ ಮಾಡುವುದರಲ್ಲಿ ಯಾವ ಸಂದೇಹವು ಇಲ್ಲ.