ಕಾರವಾರ : ನಗರದ ಹುಬ್ಬುವಾಡದಿಂದ ಹರಿದೇವ ನಗರದವರೆಗೆ  ಕಾರವಾರ – ಇಳಕಲ್ ರಾಜ್ಯ ಹೆದ್ದಾರಿಯ ಸಂಪೂರ್ಣ ಹಾಳಾಗಿದೆ. ವಾಹನ ಸವಾರರು, ಪ್ರಯಾಣಿಕರು ಈ ರಾಜ್ಯ ಹೆದ್ದಾರಿಯಲ್ಲಿ   ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಕೆಲವು ವರ್ಷಗಳ ಹಿಂದೆಯಷ್ಟೇ ಕೋಟ್ಯಂತರ ರೂ. ಹಣ ಹಾಕಿ ನಿರ್ಮಿಸಿದ ಹೆದ್ದಾರಿಯ ಕೆಲವು ಕಡೆಗಳಲ್ಲಿ ಗುಂಡಿಗಳು ಕಾಣಿಸಿಕೊಂಡಿವೆ. ಗುಣಮಟ್ಟದ ಕಾಮಗಾರಿ ಕೈಗೊಳ್ಳದಿರುವುದು ಈ ಸ್ಥಿತಿಗೆ  ಕಾರಣ ಎಂಬ  ಆರೋಪ ಕೇಳಿಬಂದಿದೆ. ಸಂಬಂಧಪಟ್ಟ ಇಲಾಖೆಯು ಎಚ್ಚೆತ್ತುಕೊಂಡು  ದುರಸ್ತಿ ಕೈಗೊಳ್ಳಬೇಕಿದೆ.

ಇದನ್ನೂ ಓದಿ : ಮುರುಡೇಶ್ವರ ಠಾಣೆಯಲ್ಲಿ ಅತ್ಯಾಚಾರ ದೂರು ದಾಖಲು

ಕಾರವಾರ  ಇಳಕಲ್ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಹಬ್ಬುವಾಡ – ಹರಿದೇವ ನಗರ  ರಸ್ತೆಯಲ್ಲಿ  ಸಂಚಾರ ತೀವ್ರ ಕಷ್ಟಕರವಾಗಿದೆ. ಅಪಾರ ಪ್ರಮಾಣದಲ್ಲಿ ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದಿವೆ.  ವಾಹನ ಸವಾರರು ರಾತ್ರಿ ವೇಳೆಯಲ್ಲಿ ಬೀಳುತ್ತಿದ್ದಾರೆ. ಹಗಲಿನಲ್ಲಿ ಹೊಂಡಗಳನ್ನು ತಪ್ಪಿಸಲು ಹೋಗಿ ಎದುರಿನ ವಾಹನಕ್ಕೆ ಬಡಿದು ಸ್ಕಿಡ್ ಆಗಿ ಬಿದ್ದು ಅಪಘಾತ ಸಂಭವಿಸುತ್ತಿವೆ.  ದಿನೇ ದಿನೇ ಈ ಹಬ್ಬುವಾಡ- ಹರಿದೇವನಗರ ರಸ್ತೆಯ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೂ  ಮೃತ್ಯುಕೂಪವಾಗಿ ಪರಿಣಮಿಸಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಕೈಗಾ ಹಾಗೂ  ರೈಲ್ವೆ ನಿಲ್ದಾಣ ಸಂಪರ್ಕಿಸುವ ಈ ಹೆದ್ದಾರಿಯಲ್ಲಿ ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಬೈಕ್, ಸ್ಕೂಟಿ, ರಿಕ್ಷಾ,  ಕಾರು ಮೊದಲಾದ ವಾಹನಗಳ ಬಿಡಿಭಾಗಗಳು  ಪ್ರತಿದಿನ ಕೆಟ್ಟು ಹೋಗುತ್ತಿವೆ. ತಮ್ಮ ವಾಹನಗಳು ದುರಸ್ತಿ ಮಾಡುವುದೇ ಜನರಿಗೆ  ದೊಡ್ಡ ಸವಾಲಿನ ಪ್ರಶ್ನೆಯಾಗಿದೆ.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು  ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರ ಸಾವು ನೋವುಗಾಗಿ ದಾರಿ ಕಾಯುತ್ತಿದ್ದಾರೆಯೇ  ಎಂಬ ಪ್ರಶ್ನೆ ಎದ್ದಿದೆ. ದುರಸ್ತಿ ಕಾರ್ಯ ಮಾಡದೆ  ಹಾಗೇ ಬಿಟ್ಟಿದ್ದರಿಂದ ಈ ರಸ್ತೆ ಮಾರ್ಗವಾಗಿ ಹೋಗುವ  ಶಾಲಾ- ಕಾಲೇಜು ವಿದ್ಯಾರ್ಥಿಗಳು, ವಯಸ್ಸಾದವರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.  ಒಂದು ವೇಳೆ ಇಲ್ಲಿ ಸಾವು ನೋವು ಸಂಭವಿಸಿದರೆ   ಸರ್ಕಾರ ಹಾಗೂ ಇಲಾಖೆಯ ಅಧಿಕಾರಿಗಳು ಹೊಣೆಯಾಗಲಿದ್ದಾರೆ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ರಾಜ್ಯ ಹೆದ್ದಾರಿಯ  ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ.
ರಾಜಾ ನಾಯ್ಕ ಕಡವಾಡ,   ಕಾರವಾರ ನಗರ ಘಟಕ ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ