ಭಟ್ಕಳ: ಸಂಸತ್ನಲ್ಲಿ ಜಿಲ್ಲೆಯ ಜನರ ಧ್ವನಿಯಾಗಲು, ಬಡವರಿಗೆ ನ್ಯಾಯ ಸಿಗಲು ನಮ್ಮ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಮತ ನೀಡಿ ಬೆಂಬಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮನವಿ ಮಾಡಿದರು.
ಇದನ್ನೂ ಓದಿ : ಸೋಡಿಗದ್ದೆ ಮಹಾಸತಿ ಅಭಯ ಪಡೆದ ಡಾ.ಅಂಜಲಿ
ಬೆಳಕೆ ಜಿಲ್ಲಾ ಪಂಚಾಯತ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ೪೧೦ ರೂ. ಸಿಲಿಂಡರ್ ದರವಿದ್ದಾಗ ರಸ್ತೆ ಮೇಲೆ ಅಡುಗೆ ಮಾಡಿ ಪ್ರತಿಭಟಿಸಿದ್ದ ಬಿಜೆಪಿಯ ಸ್ಮೃತಿ ಇರಾನಿ, ಸಿಲಿಂಡರ್ಗೆ ಸಾವಿರ ರೂಪಾಯಿ ದಾಟಿದರೂ ಈಗೆಲ್ಲಿದ್ದಾರೆಂಬುದು ಗೊತ್ತಾಗುತ್ತಿಲ್ಲ. ಎಲ್ಲಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನ ಮಾರಿ ದೇಶವನ್ನ ಅತಿ ಕೆಟ್ಟ ಪರಿಸ್ಥಿತಿಗೆ ತಂದಿಟ್ಟಿದ್ದಾರೆ. ದೇಶದಲ್ಲಿ ಬದಲಾವಣೆ ತರಬೇಕೆಂದರೆ, ಜಿಲ್ಲೆಯ ಜನರ ಧ್ವನಿಯಾಗಲು ಕಾಂಗ್ರೆಸ್ ಬರಬೇಕಿದೆ ಎಂದರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ಇದು ಕೇವಲ ಚುನಾವಣೆಯಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತೋರಿಸಿದ ದಾರಿಯಲ್ಲಿ ಸಂವಿಧಾನದ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟವಿದು. ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಪಂಚನ್ಯಾಯದ ಗ್ಯಾರಂಟಿಗಳನ್ನೂ ಜಾರಿಗೊಳಿಸುತ್ತೇವೆ. ನಮ್ಮದು ಚುನಾವಣೆಗಾಗಿ ಬಿಜೆಪಿಗರಂತೆ ಒಂದು ದಿನಕ್ಕೆ ಹಣ ನೀಡುವ ಪಕ್ಷವಲ್ಲ; ಬಡವರ ಹೊಟ್ಟೆ ತುಂಬಿಸಲು, ಜೀವನ ನಡೆಸಲು ಗ್ಯಾರಂಟಿ ಮೂಲಕ ವರ್ಷಪೂರ್ತಿ ನೆರವು ನೀಡುತ್ತಿರುವ ಪಕ್ಷ ಕಾಂಗ್ರೆಸ್. ನಮ್ಮಿಂದಲೇ ತೆರಿಗೆ ಪಡೆದು ಅಭಿವೃದ್ಧಿಗೆ ಅನುದಾನ ನೀಡದ ಬಿಜೆಪಿಗರಿಗೆ ಮತ ನೀಡಬೇಕೋ, ಬೇಡವೋ ಎನ್ನುವುದನ್ನ ನೀವು ತೀರ್ಮಾನಿಸಿ ಎಂದರು.
ಬಿಜೆಪಿಯವರು ಯುವಕರನ್ನ ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಬಿಜೆಪಿಗರ ವಾಟ್ಸಪ್ ಯೂನಿವರ್ಸಿಟಿ ಬಿಟ್ಟು ಯುವಕರು ಶಿಕ್ಷಣ ಪಡೆಯಬೇಕು. ಸಂವಿಧಾನ ತಿಳಿಯಬೇಕು. ೩೦ ವರ್ಷ ಬಿಜೆಪಿ ಸಂಸದರು ಏನು ಮಾಡಿದ್ದಾರೆಂಬುದನ್ನ ಜನ ನೋಡಿದ್ದಾರೆ. ಈ ಬಾರಿ ಒಂದು ಅವಕಾಶ ನನಗೆ ಕೊಡಿ, ನಿಮ್ಮ ಧ್ವನಿಯಾಗಿ ಸಂಸತ್ ನಲ್ಲಿ ಹೋರಾಡುವೆ ಎಂದರು.
ಕೆಪಿಸಿಸಿ ವಕ್ತಾರ ಸುಧೀರಕುಮಾರ್ ಮಾತನಾಡಿ, ಈ ದೇಶಕ್ಕೆ ಬೇಕಾದ ಅಗತ್ಯ ಮೂಲಸೌಕರ್ಯ ಎಲ್ಲವನ್ನೂ ಕೊಟ್ಟಿರುವುದು ಕಾಂಗ್ರೆಸ್. ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್, ಗ್ಯಾರಂಟಿಯ ಐದಕ್ಕೆ ಐದೂ ಯೋಜನೆ ಜಾರಿಯಾದರೆ ತಲೆಬೋಳಿಸಿಕೊಂಡು ಕಾಂಗ್ರೆಸ್ ಕಚೇರಿಯ ಜವಾನ್ ಆಗುತ್ತೇನೆ ಎಂದಿದ್ದರು. ಈಗ ಗ್ಯಾರಂಟಿಯ ಐದೂ ಯೋಜನೆ ಜಾರಿಯಾಗಿವೆ. ಹಾಗಂತ ಕಟೀಲ್ರಂಥ ಮೂರ್ಖರನ್ನ ಜವಾನರನ್ನಾಗಿ ನೇಮಿಸಿಕೊಳ್ಳುವವರು ನಾವಲ್ಲ. ಬಿಜೆಪಿಯವರಿಗೆ ತಾಕತ್ತು, ಧಮ್ಮು ಇದ್ದರೆ ಕಾಂಗ್ರೆಸ್ನ ಗ್ಯಾರಂಟಿ ಯೋಜನೆ ಸಿಕ್ಕಿದೆಯಾ ಎಂಬುದನ್ನ ಬಹಿರಂಗ ಸಭೆಯಲ್ಲಿ ಜನರಿಗೆ ಕೇಳಲಿ. ಪಕ್ಷ- ಭೇದವಿಲ್ಲದೆ ಗ್ಯಾರಂಟಿ ಯೋಜನೆಯನ್ನ ಬಡಜನರಿಗೆ ತಲುಪಿಸಿರುವ ಹಮ್ಮೆ ಕಾಂಗ್ರೆಸ್ನದ್ದು. ೧೦ ವರ್ಷಗಳ ಆಳ್ವಿಕೆಯಲ್ಲಿ ಜನರ ಖಾತೆಯನ್ನ ಮೈನಸ್ ಮಾಡಿರುವುದು ಬಿಜೆಪಿ, ಗೃಹಲಕ್ಷ್ಮೀಯ ೨ ಸಾವಿರ ನೀಡಿ ಮಹಿಳೆಯರ ಶೂನ್ಯ ಖಾತೆಗಳನ್ನ ಸಕ್ರಿಯಗೊಳಿಸಿರುವುದು ಕಾಂಗ್ರೆಸ್ ಎಂದರು.
ಹಿಂದಿದ್ದ ಸಂಸದರೊಬ್ಬರು ಆರು ತಿಂಗಳಿಗೊಮ್ಮೆ ಎಚ್ಚರ ಆಗುತ್ತಿದ್ದರು. ಸಂವಿಧಾನವನ್ನೇ ಬದಲಿಸಬೇಕೆಂದು ಬಾಯಿಬಿಟ್ಟು ಹೇಳುತ್ತಿದ್ದರು. ಈಗಿನ ಬಿಜೆಪಿ ಅಭ್ಯರ್ಥಿಗೆ ಸಂವಿಧಾನ ಬದಲಿಸಬೇಕೆಂಬುದು ಮನಸ್ಸಿನಲ್ಲೇ ಇದೆ. ರಾಜ್ಯದಲ್ಲಿ ಆರು ಮಹಿಳಾ ಅಭ್ಯರ್ಥಿಗಳಿಗೆ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟ ಮಾತೃ ಹೃದಯಿ ಪಕ್ಷ ಕಾಂಗ್ರೆಸ್. ಕಸ್ತೂರಿರಂಗನ್ ವರದಿ ಅನುಷ್ಠಾನಗೊಂಡರೆ ನಮ್ಮ ಜನರನ್ನೆಲ್ಲ ಎತ್ತಂಗಡಿ ಮಾಡಲಾಗುತ್ತದೆಂದು ಗೊತ್ತಿದ್ದೂ ಐದು ಉನ್ನತ ಮಟ್ಟದ ಸಭೆಗೂ ಗೈರಾದ ಮೂರ್ಖತನದ, ಜನವಿರೋಧಿ ಸಂಸದರು ಬಿಜೆಪಿಯವರು. ಜನಗಣತಿಯನ್ನೂ ನಿಲ್ಲಿಸಿರುವ ಮೂರ್ಖ ಆರ್ಥಿಕತೆಯ ಸರ್ಕಾರ ಬಿಜೆಪಿಯದ್ದು ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್, ಜಿಲ್ಲೆಯ ಸಮಸ್ಯೆಗಳಿಗೆ ಲೋಕಸಭೆಯಲ್ಲಿ ಧ್ವನಿಯಾಗಲು ಡಾ.ಅಂಜಲಿ ಅವರನ್ನು ಆಯ್ಕೆ ಮಾಡಲೇಬೇಕಿದೆ. ಕಾಂಗ್ರೆಸ್ನ್ನ ಯಾವುದೇ ಜಾತಿಗೆ ಸೀಮಿತಗೊಳಿಸಿ ಕಟ್ಟಿಲ್ಲ. ಜಾತ್ಯಾತೀತ ಕಾಂಗ್ರೆಸ್ ಪಕ್ಷವನ್ನ ಗೆಲ್ಲಿಸಲು ನಾವೆಲ್ಲ ಒಗ್ಗಟ್ಟಾಗಬೇಕಿದೆ. ವಿರಮಿಸದೆ ನಮ್ಮ ಅಭ್ಯರ್ಥಿಯ ಗೆಲ್ಲಿಸಿ, ಪಕ್ಷವನ್ನ ಬಲಪಡಿಸಲು ಶ್ರಮಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮಹಿಳೆಯರಿಂದ ಡಾ.ಅಂಜಲಿ ಅವರಿಗೆ ಉಡಿ ತುಂಬಿ ಗೌರವಿಸಲಾಯಿತು. ಕೆಪಿಸಿಸಿ ಸಂಯೋಜಕ ವಿಶ್ವಾಸ ಅಮೀನ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಾಮಾ ಮೊಗೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಮಹಿಳಾ ಘಟಕದ ಅಧ್ಯಕ್ಷೆ ನಯನಾ ನಾಯ್ಕ, ಯಲ್ವಡಿಕವೂರ್ ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ, ಜಿ.ಪಂ ಮಾಜಿ ಸದಸ್ಯ ಅಲ್ಬರ್ಟ್ ಡಿಕೋಸ್ತಾ, ಈರಪ್ಪ ಗರ್ಡೀಕರ್ ಮುಂತಾದವರಿದ್ದರು.