ಕುಮಟಾ: ಇಲ್ಲಿನ ಬರಗದ್ದೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದಲ್ಲಿ ನಡೆದಿದೆ ಎನ್ನಲಾದ ೧.೧೫ ಕೋಟಿ ರೂ. ಅವ್ಯವಹಾರದ ಹಗರಣದಲ್ಲಿ ಕೆಡಿಸಿಸಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಸೇರಿ ಏಳು ಜನರ ವಿರುದ್ಧ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಆಟ ಆಡಲು ಹೋದವರು ಸಮುದ್ರ ಪಾಲು; ಬಾಲಕನ ಶವ ಪತ್ತೆ

ಬ್ಯಾಂಕಿನ ಎಂ.ಡಿ. ರಾಮ ಭಾಗ್ವತ್, ಸಹಾಯಕ ವ್ಯವಸ್ಥಾಪಕಿ ಶಾಲಿನಿ ಗಣಪತಿ ಭಟ್ಟ, ಹಿರಿಯ ವ್ಯವಸ್ಥಾಪಕಿ ದಿವ್ಯಾ ಶಾನಭಾಗ, ನಿವೃತ್ತ ಕಿರಿಯ ವ್ಯವಸ್ಥಾಪಕ ಮಂಜುನಾಥ ಪಟಗಾರ, ಕಿರಿಯ ವ್ಯವಸ್ಥಾಪಕಿ ಭಾರತಿ ನರಹರಿ ಶೇಟ, ಕಿರಿಯ ಗುಮಾಸ್ತ ಗೋವಿಂದ ಸುಬ್ರಾಯ ಭಟ್ಟ, ನಿವೃತ್ತ ಸಿಪಾಯಿ ಪುರುಷೋತ್ತಮ ರಾಮಾ ಗಾವಡಿ ವಿರುದ್ಧ ಪ್ರಕರಣ ದಾಖಲಾಗಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಬರಗದ್ದೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಗಣಪತಿ ಗೋಪಾಲಕೃಷ್ಣ ಹೆಗಡೆ ಈ ಬಗ್ಗೆ ನ್ಯಾಯಾಲಯದಲ್ಲಿ ದೂರು ನೀಡಿದ್ದಾರೆ. ನ್ಯಾಯಾಲಯದ ನಿರ್ದೇಶನದನ್ವಯ ಕುಮಟಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಏನು ಅವ್ಯವಹಾರ?
ರೈತರ ಉಳಿತಾಯ ಖಾತೆಗೆ ಜಮಾ ಮಾಡಬೇಕೆಂಬ ಸರ್ಕಾರದ ನಿರ್ದೇಶನ ಮತ್ತು ಆದೇಶವಿದ್ದರೂ, ಆ ಕಾನೂನನ್ನು ಮೀರಿ, ಬರಗದ್ದೆಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಸದಸ್ಯರಿಗೆ ೨೦೧೯-೨೦ನೇ ಸಾಲಿನಲ್ಲಿ ಮಂಜೂರಾದ ಬೆಳೆ ಸಾಲವನ್ನು ಕೆಡಿಸಿಸಿ ಬ್ಯಾಂಕ್‌ನಿಂದ ಸಂಘದ ಉಳಿತಾಯ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. ಆ ಹಣವು ಕೆಡಿಸಿಸಿ ಬ್ಯಾಂಕ್‌ನ ಅಂದಿನ ಮೇಲ್ವಿಚಾರಕರ ನಿರ್ಲಕ್ಷ್ಯತನದಿಂದ ಸಂಘದ ಉಳಿತಾಯ ಖಾತೆಯಿಂದ ಬೇರೆ ವ್ಯಕ್ತಿಗಳಿಗೆ ವರ್ಗಾವಣೆಗೊಂಡು ರೈತರಿಗೆ ಸಾಲ ವಿತರಣೆಯಾಗದೆ ಬೆಳೆ ಸಾಲದ ಹಣ ದುರುಪಯೋಗವಾಗಿದೆ. ಇದರಿಂದ ಸಾಲಮನ್ನಾ ಹೊರತುಪಡಿಸಿ, ಬ್ಯಾಂಕ್‌ಗೆ ಭರಣ ಮಾಡಬೇಕಾದ ೭೫ ಲಕ್ಷ ರೂ. ಬಾಕಿ ಆಗಿದೆ. ಹೀಗಿದ್ದೂ ಆರೋಪಿತ ರಾಮ ಭಾಗ್ವತ್ ಅವರು ಸಂಘದ ಅಂದಿನ ಕಾರ್ಯದರ್ಶಿ ಲಕ್ಷ್ಮಣ ಪಟಗಾರ ಅವರ ಜೊತೆಗೂಡಿ ೨೦೧೯ರ ಮೇ ೧೩ರಿಂದ ಜೂನ್ ನಡುವಿನ ಅವಧಿಯಲ್ಲಿ ಉಳಿದ ಆರೋಪಿತರನ್ನು ಬಳಸಿಕೊಂಡು ಸಂಘದಲ್ಲಿ ಹಣಕಾಸಿನ ಅವ್ಯವಹಾರ ಮಾಡಿರುವ ಬಗ್ಗೆ ದೂರು ದಾಖಲಾಗಿದೆ.