ಹೊನ್ನಾವರ: ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ನ ಗ್ಯಾರಂಟಿ ಕಾರ್ಡ ಬೋಗಸ್ ಕಾರ್ಡ ಯಾವುದೇ ಯೋಜನೆ ತರುವುದಿಲ್ಲ ಎಂದು ಬಿಜೆಪಿ ಜನರ ದಿಕ್ಕು ತಪ್ಪಿಸಲು ಯತ್ನಿಸಿದರು. ಈಗ ಲೋಕಸಭಾ ಚುನಾವಣೆಯ ಬಳಿಕ ಗ್ಯಾರಂಟಿ ಕೊಡುವುದಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ರಾಜ್ಯದ ಗ್ಯಾರಂಟಿ ಯೋಜನೆಯ ಜೊತೆ ಕೇಂದ್ರದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ದೇಶದೆಲ್ಲೆಡೆ ಮತ್ತೆ ೫ ಗ್ಯಾರಂಟಿ ಯಶ್ವಸಿಯಾಗಿ ಅನುಷ್ಠಾನ ಮಾಡುತ್ತೇವೆ ಎಂದು ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಹಾಗೂ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಇದನ್ನೂ ಓದಿ : ಗರ್ಭಗೃಹ ಶಿಖರ ನವೀಕರಣ, ಸ್ವರ್ಣ ಕಲಶ ಪ್ರತಿಷ್ಠೆ ನಾಳೆಯಿಂದ
ಲೋಕಸಭಾ ಚುನಾವಣೆಯ ನಿಮಿತ್ತ ಕಾಂಗ್ರೆಸ್ ಪಕ್ಷದ ವತಿಯಿಂದ ಹೊನ್ನಾವರ ತಾಲೂಕಿನ ಅರೇಅಂಗಡಿ ವ್ಯಾಪ್ತಿಯಲ್ಲಿ ಬಹಿರಂಗ ಪ್ರಚಾರ ಉದ್ದೇಶಿಸಿ ಅವರು ಮಾತನಾಡಿದರು. ನೆರೆಯ ಕೇರಳ, ಗೋವಾ ರಾಜ್ಯದಲ್ಲಿ ಇರದ ಸಿ.ಆರ್.ಝಡ್ ನಿಯಮ ನಮ್ಮ ರಾಜ್ಯದ ಕರಾವಳಿಯಲ್ಲಿದೆ. ಅದನ್ನು ತೆರವುಗೊಳಿಸುವ ಜೊತೆ, ಅತಿಕ್ರಮಣ ಸಮಸ್ಯೆ ನಿವಾರಿಸಲು ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರಬೇಕು. ನಮ್ಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವಂತೆ ಕರೆ ನೀಡಿದರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಕೆನರಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಮಾತನಾಡಿ, ಧರ್ಮ ಸಂಸ್ಕ್ರತಿ ಒಂದು ಕಡೆ, ರಾಜಕಾರಣ- ಸಮಾಜಸೇವೆ ಇನ್ನೊಂದು ಕಡೆ ಎನ್ನುವ ತತ್ವ ಕಾಂಗ್ರೆಸ್ ಪಕ್ಷದ್ದು. ಆದರೆ ಇವರು ಎಲ್ಲವನ್ನೂ ಮಿಶ್ರ ಮಾಡಿ ರಾಜಕಾರಣ ಕುಲಗೆಡಿಸುತ್ತಾರೆ. ಜಿಲ್ಲೆಯ ಸಮಸ್ಯೆ ಅಷ್ಟೆ ಅಲ್ಲದೆ, ರಾಜ್ಯದ ಸಮಸ್ಯೆಗೂ ಜಿಲ್ಲೆಯಲ್ಲಿ ಧ್ವನಿಯಾಗುತ್ತೇನೆ. ಕಳೆದ ೧೦ ವರ್ಷದಲ್ಲಿ ಯಾವುದೇ ಜನಪರ ಯೋಜನೆ ತರಲಿಲ್ಲ. ತಂದ ಕೆಲ ಯೋಜನೆಗಳ ಅನುಷ್ಠಾನ ಯಶ್ವಸಿಯಾಗಿಲ್ಲ. ಒಂದು ವಿಷಯವನ್ನು ರಾಜಕೀಯವಾಗಿ ಹೇಗೆ ಉಪಯೋಗ ಮಾಡಬೇಕು ಎನ್ನುವುದು ಬಿಜೆಪಿಯವರನ್ನು ನೋಡಿ ಕಲಿಯಬೇಕು. ಕೇವಲ ಭಾಷಣ ಮಾಡಿ ಕೋಮು ಗಲಭೆಯ ಮೂಲಕವೇ ಅಧಿಕಾರಕ್ಕೆ ಬರುವವರಿಗೆ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗಿದೆ. ಲೋಕಸಭಾ ಚುನಾವಣೆಯಲ್ಲಿಯೂ ಸರಿಯಾದ ಪಾಠ ಕಲಿಸಬೇಕು ಎಂದರು.
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮಾತನಾಡಿ, ಕೇಂದ್ರದ ನರೇಂದ್ರಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವ ನೀಡಿದ ಭರವಸೆ ಈಡೇರಿಸಲು ವಿಫಲರಾಗಿದ್ದಾರೆ. ನಿರುದ್ಯೋಗ ಇರೋದಿಲ್ಲ ಎಂದು ಹೇಳಿ ಉದ್ಯೋಗಸೃಷ್ಠಿಯ ಭರವಸೆಯಂತೆ ೨೦ ಕೋಟಿ ಉದ್ಯೋಗ ಸೃಷ್ಠಿಯಾಗಬೇಕಿತ್ತು. ಕಪ್ಪುಹಣ ತಂದು ಖಾತೆಗೆ ಹಾಕುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದು ಈಡೇರಿಸಲು ವಿಫಲರಾಗಿದ್ದಾರೆ. ಮಾತಿನಲ್ಲಿ ಮರಳು ಮಾಡುವ ಪ್ರಧಾನಿ ರಾಜ್ಯಕ್ಕೆ ಬರಗಾಲ ಬಂದಾಗ ಒಂದು ರೂಪಾಯಿ ನೀಡಿಲ್ಲ. ನಮ್ಮ ಹಕ್ಕು ನಾವು ಕೇಳುತ್ತಿದ್ದೇವೆ. ರಾಜ್ಯ ಸರ್ಕಾರ ನುಡಿದಂತೆ ನಡೆದಿದ್ದು, ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದು ರಾಜ್ಯ ಸರ್ಕಾರದ ಸಾಧನೆಯನ್ನು ತಿಳಿಸಿದರು.
ಮಾಜಿ ಶಾಸಕಿ ಶಾರದಾ ಶೆಟ್ಟಿ ಮಾತನಾಡಿ, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಘೋಷಣೆಯಂತೆ ಅನುಷ್ಠಾನ ಮಾಡಿದೆ. ಕುಮಟಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಶಾಸಕರಿದ್ದಾರೆ. ನಮ್ಮ ಕ್ಷೇತ್ರದ ಸಮಸ್ಯೆ ಬಗೆಹರಿಸಲು ಸಂಸದರನ್ನು ನಮ್ಮ ಪಕ್ಷದ ಅಭ್ಯರ್ಥಿಗೆ ಬೆಂಬಲಿಸಿ ಕ್ಷೇತ್ರದ ಸಮಸ್ಯೆ ಬಗೆಹರಿಸಿಕೊಳ್ಳೋಣ. ಕಾರ್ಯಕರ್ತರು ಒಗ್ಗಟ್ಟಾಗಿ ಜನರ ಮನೆ ಬಾಗಿಲಿಗೆ ತೆರಳಿ ರಾಜ್ಯ ಸರ್ಕಾರದ ಸಾಧನೆಯನ್ನು ತಿಳಿಸುವ ಕೆಲಸ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ತೆಂಗೇರಿ, ಕೆಪಿಸಿಸಿ ಕಾರ್ಯದರ್ಶಿ ನಿವೇದಿತ್ ಆಳ್ವ, ಪ್ರಚಾರ ಸಮಿತಿ ಅಧ್ಯಕ್ಷ ಹೊನ್ನಪ್ಪ ನಾಯಕ, ಕೆ.ಪಿ.ಸಿ.ಸಿ. ಸದಸ್ಯರಾದ ಎಂ.ಎನ್.ಸುಬ್ರಹ್ಮಣ್ಯ, ಅತಿಕ್ರಮಣ ಹೋರಾಟಗಾರ ರವೀಂದ್ರ ನಾಯ್ಕ, ಮಾಜಿ ಜಿ.ಪಂ. ಸದಸ್ಯ ರತ್ನಾಕರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.