ಭಟ್ಕಳ: ಮೋದಿ ಪ್ಯಾನ್ಸಿ ಡ್ರೆಸ್ ಮಾಡುತ್ತಿದ್ದಾರೆ. ಇದಕ್ಕಾಗಿ ಸರ್ಕಾರದ ಹಣ ಪೋಲ್ ಮಾಡುತ್ತಿದ್ದಾರೆ. ಮೋದಿಯ ವರ್ಚಸ್ಸು ಕಳೆಗುಂದಿದೆ. ಅವರ ಭಾಷಣದಲ್ಲಿ ಮೊದಲಿನಂತೆ ಶಕ್ತಿ ಇಲ್ಲ. ಅವರು ಸುಳ್ಳುಗಳನ್ನೇ ಹೇಳುತ್ತಾರೆ. ಜನರಿಗೆ ಮೋಡಿ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಟೀಕಿಸಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಅವರು ಭಟ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೆನರಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ ಪರವಾಗಿ ಆಯೋಜಿಸಿದ್ದ ಚುನಾವಣಾ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಶಿರಾಲಿ ಸಾರದಹೊಳೆಯ ಹಳೆಕೋಟೆ ಹನುಮಂತ ದೇವಸ್ಥಾನ ಸಭಾಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇದನ್ನೂ ಓದಿ : ಹೆಂಡತಿ ಹೆರಿಗೆಯಾದ ಆಸ್ಪತ್ರೆಗೆ ೧೫ ಸೀಲಿಂಗ್ ಫ್ಯಾನ್ ಉಡುಗೊರೆ

ಮುಂದುವರಿದು ಮಾತನಾಡಿದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮೋದಿಯವರು ಚುನಾವಣೆಯ ಪ್ರಚಾರದ ವೇಳೆ ಮಾತನಾಡುವುದು ನೋಡಿದರೆ ಅವರ ಮುಖದಲ್ಲಿ ಸೋಲಿನ ಹತಾಶ ಭಾವನೆ ಕಾಣುತ್ತಿದೆ. ಅದಕ್ಕಾಗಿ ಅವರು ಏನೇನೋ ಮಾತನಾಡುತ್ತಿದ್ದಾರೆ. ಮೋದಿ ಪ್ರಧಾನಿ ಆದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿದ ದೇವೇಗೌಡರು ಈಗ ಮೋದಿ ಭಕ್ತರಾಗಿದ್ದಾರೆ. ಮೋದಿಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ಆದರೆ ಇದು ಬಿಜೆಪಿಗೆ ಮತ್ತು ಜೆಡಿಎಸ್ಸಿಗೆ ಋಣಾತ್ಮಕವಾಗಲಿದೆ. ಮೋದಿ ಇರುವ ವೇದಿಕೆಯಲ್ಲಿ ಯಡಿಯೂರಪ್ಪ ಇರಬಾರದು ಎಂದು 2019ರ ಚುನಾವಣೆ ವೇಳೆಗೆ ಸ್ವತಃ ಮೋದಿ ಹೇಳಿದ್ದರು. ಆದರೆ ಈಗ ಎಲ್ಲ ವೇದಿಕೆಯಲ್ಲೂ ಮೋದಿಯ ಬಲಗಡೆಯಲ್ಲಿ ಯಡಿಯೂರಪ್ಪ ಹಾಗೂ ದೇವೇಗೌಡ ಇರುತ್ತಾರೆ ಎಂದು ಹೇಳಿದರು.

ಬಿಜೆಪಿಯ ಅನಂತಕುಮಾರ ಹೆಗಡೆಯವರನ್ನು ಆರು ಬಾರಿ ಸಂಸದರಾಗಿ ಆಯ್ಕೆ ಮಾಡಿರುವುದು ವ್ಯರ್ಥವಾಗಿದೆ. ೬ ಬಾರಿ ಬಿಜೆಪಿ ಗೆಲುವು ಸಮುದ್ರಕ್ಕೆ ನೀರು ಸುರಿದಂತೆ ಆಗಿದೆ. ಬಡತನ, ನಿರುದ್ಯೋಗ, ಆಹಾರ ಸಮಸ್ಯೆ, ರೈತರ ಸಮಸ್ಯೆ ಇವೆಲ್ಲ ಸಮಸ್ಯೆಗಳಿಗೆ ಉತ್ತರವಾಗಿ ಜ್ವಾಲಾಮುಖಿಯಂತೆ ಎದ್ದು ನಿಲ್ಲಬೇಕು. ಬಿಜೆಪಿಯ ದುರಾಡಳಿತಕ್ಕೆ ಅಂತ್ಯ ಕಾಣಿಸಬೇಕು ಎಂದು ಕರೆ ನೀಡಿದರು.

ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ಮಾತನಾಡಿ, ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತರ ಕನ್ನಡದ ಶಿರಸಿಗೆ ಬಂದಿದ್ದರು. ಅವರು ತಮ್ಮ ಚುನಾವಣಾ ಪ್ರಚಾರದ ಭಾಷಣದಲ್ಲಿ ಹಲವಾರು ವಿಷಯದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಆದರೆ ಅವರು ನಮ್ಮ ಉತ್ತರ ಕನ್ನಡ ಜಿಲ್ಲೆಯ ಯಾವ ಸಮಸ್ಯೆ ಬಗ್ಗೆ ಮಾತನಾಡಲಿಲ್ಲ. ಜಿಲ್ಲೆಯಲ್ಲಿ ಅತಿಕ್ರಮಣ ಸಮಸ್ಯೆ ಅತಿ ದೊಡ್ಡ ಜ್ವಲಂತ ಸಮಸ್ಯೆಯಾಗಿದೆ. ಆದರೆ ಈ ಬಗ್ಗೆ ಮೋದಿಯವರು ಯಾವುದೇ ಪ್ರಸ್ತಾಪ ಮಾಡಲಿಲ್ಲ. ಮೋದಿಯವರು ಅತಿಕ್ರಮಣದಾರರ ಸಮಸ್ಯೆ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಆದರೆ ನಾವು ಅತಿಕ್ರಮಣದಾರರ ಸಮಸ್ಯೆಯನ್ನು ಪರಿಹರಿಸಲು ಅನೇಕ ಬಾರಿ ಚರ್ಚೆ ಮಾಡಿದ್ದೇವೆ ಎಂದರು.

ಉತ್ತರ ಕನ್ನಡ ಜಿಲ್ಲೆ ಅತ್ಯಂತ ಸಮೃದ್ಧವಾದ ಜಿಲ್ಲೆ. ಆದರೆ ಇಲ್ಲಿ ಯುವಕರು ಉದ್ಯೋಗವನ್ನು ಅರಸಿ ಪಕ್ಕದ ರಾಜ್ಯಗಳಿಗೆ ಹೋಗಬೇಕಾದ ಅನಿವಾರ್ಯತೆ ಬಂದಿದೆ. ಪ್ರಧಾನಿಯವರು ಈ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ ಮಾಡುವ ಬಗ್ಗೆ ಯಾವುದೇ ಪ್ರಸ್ತಾವನೆ ಮಾಡಿಲ್ಲ.
ನಾನು ಕೂಡ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಹತ್ತು ಹಲವಾರು ಸಮಸ್ಯೆಗಳಿವೆ. ಸಮಸ್ಯೆ ಬಗೆಹರಿಸಲು ಅವರಿಗೆ ಪತ್ರದ ಮೂಲಕ ತಿಳಿಸಿದ್ದೇನೆ. ಆ ಪತ್ರಕ್ಕೆ ಯಾವ ಉತ್ತರ ನೀಡುತ್ತಾರೆ ಅಂತ ಕಾದು ನೋಡುತ್ತೇನೆ ಎಂದರು.


ಬಿಜೆಪಿಯಿಂದ ಈ ಕ್ಷೇತ್ರದಲ್ಲಿ ೬ ಬಾರಿ ಅನಂತಕುಮಾರ ಹೆಗಡೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಆದರೆ ಏನು ಪ್ರಯೋಜನ? ಕ್ಷೇತ್ರದ ಅಭಿವೃದ್ಧಿಗಾಗಿ ಯಾವುದೇ ಕೆಲಸ ಮಾಡಲಿಲ್ಲ. ಸದನದಲ್ಲಿ ಕ್ಷೇತ್ರದ ಸಮಸ್ಯೆ ಬಗ್ಗೆ ಮಾತನಾಡಲಿಲ್ಲ. ಜನರ ಸಮಸ್ಯೆಗೆ ಸ್ಪಂದಿಸಲಿಲ್ಲ. ಇವರು ಚುನಾವಣೆಗೆ ಬಂದಾಗ ಮಾತ್ರ ಜನರ ಮುಂದೆ ಬರುತ್ತಾರೆ. ನಂತರ ಮರೆಯಾಗುತ್ತಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಇವರ ಕೊಡುಗೆ ಶೂನ್ಯ ಎಂದು ಆರ್ ವಿ ದೇಶಪಾಂಡೆ ಹೇಳಿದರು.


ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಸತತ ಮೂವತ್ತು ವರ್ಷದಿಂದ ಈ ಕ್ಷೇತ್ರದಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಗೆಲ್ಲಲು ಸಾಧ್ಯವಾಗಲಿಲ್ಲ. 30 ವರ್ಷದಿಂದ ಸಾಧ್ಯವಾಗದ ಕೆಲಸವನ್ನು ನಾವು ಮಾಡಿ ತೋರಿಸಬೇಕಾಗಿದೆ.
30 ವರ್ಷದಿಂದ ಬಿಜೆಪಿ ಸಂಸದರು ಈ ಕ್ಷೇತ್ರವನ್ನು ಗೆದ್ದಿದ್ದಾರೆ. ಈ ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸವನ್ನು ಮಾಡಲಿಲ್ಲ. ಕೇಂದ್ರದಲ್ಲಿ ಜಿಲ್ಲೆಯ ಸಮಸ್ಯೆ ಬಗ್ಗೆ ಮಾತನಾಡಲಿಲ್ಲ. ಉತ್ತರ ಕನ್ನಡ ಜಿಲ್ಲೆಯ ಅತಿ ದೊಡ್ಡ ಸಮಸ್ಯೆಯಾದ ಅತಿಕ್ರಮಣ ಸಮಸ್ಯೆ ದೊಡ್ಡ ಸಮಸ್ಯೆ ಆಗಿದೆ. ಈ ಸಮಸ್ಯೆ ಪರಿಹರಿಸಲು ಸಂಸದರು ಪ್ರಯತ್ನವನ್ನೇ ಮಾಡಲಿಲ್ಲ. ನನ್ನ ಕ್ಷೇತ್ರದಲ್ಲಿ 25 ಸಾವಿರ ಜನರು ಅತಿಕ್ರಮಣದಾರರಿದ್ದಾರೆ. ಇವರ ಸಮಸ್ಯೆಗೆ ಯಾವುದೇ ಪರಿಹಾರ ದೊರಕಿಲ್ಲ. ಆದರೆ ೨೦೧೨-೧೩ರಲ್ಲಿ ಕಾಂಗ್ರೆಸ್ ಸರ್ಕಾರ ಇವರಿಗೆ ಹಕ್ಕುಪತ್ರ ನೀಡಿದೆ. ಸಂಸದರು ಈ ಬಗ್ಗೆ ಎಲ್ಲೂ ಮಾತನಾಡಲಿಲ್ಲ. ಅಯೋಗದ ಕಮಿಟಿಯ ಸಭೆಯಲ್ಲಿ ಚರ್ಚಿಸಲಿಲ್ಲ. ಇವರಿಗೆ ಜಿಲ್ಲೆಯ ಸಮಸ್ಯೆ ಬಗೆಹರಿಸುವ ಇರಾದೆ ಇರಲಿಲ್ಲ ಎಂದು ಆರೋಪಿಸಿದರು.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯು ೧೧ ವರ್ಷದಿಂದ ನಡೆಯುತ್ತಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಹಲವಾರು ಸಾವು-ನೋವು ಉಂಟಾಗಿದೆ. ಆದರೂ ಕಾಮಗಾರಿ ಇಲ್ಲಿಯ ತನಕ ಪೂರ್ಣಗೊಂಡಿಲ್ಲ. ಆದರೆ ಇವರು ಟೋಲ್ ಹಣ ಪಡೆಯುತ್ತಿದ್ದಾರೆ. ಇವರಿಗೆ ಮಾನ ಮರ್ಯಾದೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳಿವೆ. ಅತಿಕ್ರಮಣದಾರರ ಸಮಸ್ಯೆ ಒಂದೆಡೆಯಾದರೆ, ಸಿ.ಆರ್.ಝಡ್ ಸಮಸ್ಯೆ ಇನ್ನೊಂದೆಡೆ. ಇದರಿಂದ ಯಾವುದೇ ಅಭಿವೃದ್ಧಿ ಮಾಡಲು ಆಗುತ್ತಿಲ್ಲ. ಪ್ರವಾಸೋದ್ಯಮಕ್ಕೆ ಸಿ.ಆರ್.ಝಡ್ ನಿಂದ ಅಡೆತಡೆ ಉಂಟಾಗುತ್ತಿದೆ. ಆದರೆ ಪಕ್ಕದ ರಾಜ್ಯಗಳಿಗೆ ಸಿ.ಆರ್.ಝಡ್ ಸಮಸ್ಯೆ ಇಲ್ಲ. ಅಲ್ಲಿ ಪ್ರವಾಸೋದ್ಯಮ ಬೆಳೆದಿದೆ. ಇದರಿಂದ ಉದ್ಯೋಗ ಸೃಷ್ಟಿಯಾಗಿದೆ. ಅಲ್ಲಿಯ ಸಂಸದರು ಆ ಬಗ್ಗೆ ಮಾತನಾಡಿ ಸಮಸ್ಯೆಯನ್ನು ಪರಿಹರಿಸಿಕೊಂಡಿದ್ದಾರೆ. ಆದರೆ ನಮ್ಮ ಸಂಸದರು ಈ ಬಗ್ಗೆ ಏನೂ ಮಾತನಾಡದೆ ಜಿಲ್ಲೆಯ ಸಮಸ್ಯೆಯನ್ನು ಉಲ್ಭಣಗೊಳಿಸಿದ್ದಾರೆ. ನಮ್ಮ ಉತ್ತರಕನ್ನಡ ಕ್ಷೇತ್ರದ ಧ್ವನಿ ಆಗಬೇಕಿದ್ದ ಸಂಸದರು,
೩೦ ವರ್ಷಗಳ ಕಾಲ ಒಂದು ದಿನ ಕೂಡ ಜಿಲ್ಲೆಯ ಸಮಸ್ಯೆ ಚರ್ಚೆ ಮಾಡಿಲ್ಲ. ಸುಳ್ಳು ಹೇಳುವುದು ಇವರ ಕೆಲಸವಾಗಿದೆ ಎಂದು ಮಂಕಾಳ ವೈದ್ಯ ಕಿಡಿಕಾರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಮುಖಂಡ ರಾಮಾ‌ ಮೊಗೇರ ಮತ್ತಿತರರು ಇದ್ದರು.