ಅರಿಷಡ್ವರ್ಗಗಳು ಯೋಗ್ಯವಾಗಿದ್ದರೆ ಆರೋಗ್ಯ ಸದೃಢ : ಕೋಡಿಮಠದ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅಭಿಪ್ರಾಯ
ಶಿವಮೊಗ್ಗ : ಪುರಾತನ ಕಾಲದಿಂದಲೂ ತಾಯಿ ಎದೆಹಾಲೇ ಶ್ರೇಷ್ಟ ಎಂಬ ಪರಂಪರೆಯನ್ನು ಇಡೀ ಜಗತ್ತೇ ಹೊಂದಿದೆ. ಎದೆಹಾಲಿನಿಂದ ಬರುವ ಶಕ್ತಿ ಅಪಾರವಾದದ್ದು ಮತ್ತು ಅದು ಎಲ್ಲಿಯೂ ಸಿಗುವುದಿಲ್ಲ ಎಂದು ಕೋಡಿಮಠದ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.
ಅವರು ಬುಧವಾರ ಸರ್ಜಿ ತಾಯಿ-ಮಗು ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ಸರ್ಜಿ ಆಸ್ಪತ್ರೆಗಳ ಸಮೂಹದ ಸಹಯೋಗದೊಂದಿಗೆ ಅಮೃತ ಬಿಂದು ಹೆಸರಿನ ತಾಯಂದಿರ ಎದೆಹಾಲಿನ ಬ್ಯಾಂಕ್ ಲೋಕಾರ್ಪಣೆ ಮಾಡಿದ ಬಳಿಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಇಂದಿನ ಆಧುನಿಕ ಸೌಲಭ್ಯಗಳಿಗೆ ಮಾರುಹೋದ ಕೆಲವರು ಮಕ್ಕಳಿಗೆ ಹಾಲುಣಿಸುವಲ್ಲಿ ಯೋಚಿಸುತ್ತಿದ್ದಾರೆ. ಜೊತೆಗೆ ವಿವಿಧ ಕಾರಣಗಳಿಂದ ಮಗುವಿಗೆ ಎದೆಹಾಲು ಸಿಗದೇ ಹೋಗುತ್ತಿದೆ. ಇದರಿಂದ ಮಗು ಅನಾರೋಗ್ಯಕ್ಕೆ ತುತ್ತಾಗುತ್ತದೆ. ಸರ್ಜಿ ಆಸ್ಪತ್ರೆಯವರು ಒಂದು ಮಹತ್ತರ ಕಾರ್ಯದಲ್ಲಿ ತೊಡಗಿದ್ದಾರೆ. ಇದು ಯಶಸ್ವಿಯಾಗಲಿ, ಮಕ್ಕಳ ಆರೋಗ್ಯ ಸುಧಾರಿಸಲಿ. 6 ಅರಿಷಡ್ವರ್ಗಗಳು ಯೋಗ್ಯವಾಗಿದ್ದರೆ ಆರೋಗ್ಯ ಕಾಪಾಡಿಕೊಂಡಂತೆ ಎಂದರು.
ಬೆಂಗಳೂರಿನ ಡಾ.ಚಂದ್ರಮ್ಮ ದಯಾನಂದ ಸಾಗರ ವೈದ್ಯಕೀಯ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ ಮಕ್ಕಳ ವಿಭಾಗದ ಮುಖ್ಯಸ್ಥರಾದ ಪ್ರೊ.ಆಶಾ ಬೆನಕಪ್ಪ ದಿಕ್ಸೂಚಿ ಭಾಷಣ ಮಾಡುತ್ತಾ, ಜನರ ಅನಾರೋಗ್ಯ ಎಂಬುದು ಬಂಡವಾಳ ಆಗಬಾರದು, ಲೈಫ್ ಸ್ಟೈಲ್ ಕ್ಲಿನಿಕ್ ಆರಂಭಿಸಬೇಕು. ಅಲ್ಲದೇ ಶಿಶುಗಳಿಗೆ ಬಾಟಲಿ ಹಾಲು ಕುಡಿಸುವುದು ಒಳ್ಳೆಯದಲ್ಲ, ಬಾಟಲಿ ಹಾಲಲ್ಲಿ ಇರುವಷ್ಟು ವಿಷ ಬೇರೆಯದರಲ್ಲಿಲ್ಲ. ವಿಶೇಷವಾದ ಜೀವಾಂಶಗಳನ್ನು ಹೊಂದಿರುವ ಶಕ್ತಿ ಎದೆಹಾಲಿನಲ್ಲಿದ್ದು, ಇದು ಪ್ರಕೃತಿ ನಿಯಮ. ಮಕ್ಕಳನ್ನು ತಾಯಿಯ ಹಾಲಿನಿಂದ ವಂಚನೆ ಮಾಡಿದರೆ ಮಕ್ಕಳಲ್ಲಿ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಎಚ್ಚರಿಸಿದರು.
ಸರ್ಜಿ ಫೌಂಡೇಶನ್ ಅಧ್ಯಕ್ಷ, ಮಕ್ಕಳ ತಜ್ಞ ಡಾ. ಧನಂಜಯ ಸರ್ಜಿ ಮಾತಾನಾಡಿ, ಪವಿತ್ರವಾದ ತಾಯಿಯ ಎದೆ ಹಾಲನ್ನು ಅಮೃತಕ್ಕೆ ಹೋಲಿಸುತ್ತೇವೆ. ಎದೆಹಾಲು ಕೊಡುವುದರಿಂದ 8ಲಕ್ಷಕ್ಕೂ ಹೆಚ್ಚು ಮಕ್ಕಳ ಪ್ರಾಣವನ್ನು ಒಂದು ವರ್ಷದಲ್ಲಿ ಉಳಿಸಬಹುದು. ಒಂದು ಅಂಕಿ ಅಂಶದ ಪ್ರಕಾರ ಶೇ.46 ರಷ್ಟು ನವಜಾತ ಶಿಶುಗಳಿಗೆ ಸಮರ್ಪಕವಾಗಿ ಸ್ತನ್ಯ ಪಾನವಾಗುತ್ತಿಲ್ಲ ಎಂದು ತಿಳಿದು ಬರುತ್ತಿದೆ. ಇದರ ಪರಿಣಾಮ ಮಕ್ಕಳಲ್ಲಿ ನಾನಾ ರೀತಿಯ ಸಮಸ್ಯೆಗಳು ಉಂಟಾಗುತ್ತಿವೆ. ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಅಥವಾ ಮೆದುಳಿನ ಬೆಳವಣಿಗೆ ಆಗಿರಬಹುದು, ಇವೆಲ್ಲದರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರ ಪ್ರಾಮುಖ್ಯತೆ ಅರಿತೇ ಎಲ್ಲ ನವಜಾತ ಶಿಶುಗಳಿಗೂ ತಾಯಂದಿರ ಎದೆಹಾಲು ದೊರೆಯಬೇಕೆಂಬ ಸದುದ್ದೇಶದೊಂದಿಗೆ ಎದೆ ಹಾಲಿನ ಬ್ಯಾಂಕ್ನ್ನು ಪ್ರಪಂಚದಾದ್ಯಂತ ಸ್ಥಾಪನೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಮಧ್ಯ ಕರ್ನಾಟಕದಲ್ಲಿ ಅಮೃತ ಬಿಂದು ಶಿವಮೊಗ್ಗ ಸರ್ಜಿ ಆಸ್ಪತ್ರೆಯಲ್ಲಿ ಸ್ಥಾಪನೆಯಾಗಿದೆ. ಎದೆಹಾಲಿನಲ್ಲಿ ಅನೇಕ ಉತ್ತಮ ಅಂಶಗಳಿವೆ. ಇನ್ನು ಇದರ ಬಗ್ಗೆ ಸಂಶೋಧನೆ ನಡೆಯುತ್ತ ಇದೆ. ಎಲ್ಲವನ್ನೂ ನೀಗಿಸುವ ಶಕ್ತಿ ಎದೆಹಾಲಿನಲ್ಲಿ ಇದೆ ಎಂದರು.
ಆಸಕ್ತಿ ಇರುವ ಹೆಚ್ಚುವರಿ ಹಾಲು ಲಭ್ಯವಿರುವ ತಾಯಂದಿರು ಸ್ವಯಂ ಪ್ರೇರಿತರಾಗಿ ಎದೆ ಹಾಲನ್ನು ದಾನ ಮಾಡಲು ಮುಂದೆ ಬಂದಿದ್ದಾರೆ. ಈಗಾಗಲೇ 5 ಮಕ್ಕಳಿಗೆ ನಮ್ಮ ಆಸ್ಪತ್ರೆಯಲ್ಲಿ ಎದೆಹಾಲು ನೀಡಿ, ಪ್ರಾಣಾಪಾಯದಿಂದ ರಕ್ಷಿಸಿದ್ದೇವೆ. ಅದನ್ನು ಶೇಖರಿಸಿ ಪಾಶ್ಚರೀಕರಿಸಿ ಲ್ಯಾಬ್ನಲ್ಲಿ ಪರೀಕ್ಷೆ ಮಾಡಿದ ನಂತರ ಸೂಕ್ತ ಉಷ್ಣಾಂಶದಲ್ಲಿ ಅದನ್ನು ಶೀತಲಿಕರಿಸಿ ಪರೀಕ್ಷೆ ಮಾಡಿದ ಬಳಿಕ ಮಗುವಿಗೆ ಯೋಗ್ಯ ಎಂದು ಕಂಡುಬಂದಲ್ಲಿ ಅದಕ್ಕೆ ಗ್ರೀನ್ಲೇಬಲ್ ಹಚ್ಚಿ ಬಾಟಲಿಯಲ್ಲಿ ಸಂಗ್ರಹಿಸಲಾಗುವುದು. ಒಂದು ಎಂಎಲ್ ಹಾಲಿಗೆ 4ರಿಂದ 6 ರೂ. ಗಳ ಖರ್ಚು ಬರುತ್ತಿದ್ದು, ಸಂಗ್ರಹಿಸಿದ ಹಾಲನ್ನು ಶೇ.30ರಷ್ಟು ಸರ್ಕಾರಿ ಆಸ್ಪತ್ರೆಗೆ ಬಡ ಮಕ್ಕಳಿಗೆ ನೀಡಲಾಗುವುದು ಎಂದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಚಂದ್ರು ಜೆ.ಪಿ ಪ್ರಾಸ್ತಾವಿಕ ಮಾತನಾಡಿದರು. ರೋಟರಿ ಕ್ಲಬ್ ಮಾಜಿ ಜಿಲ್ಲಾ ಗವರ್ನರ್ ರೋಟರಿ ಸೇವಾ ಕಾರ್ಯ ಕುರಿತು ಡಾ.ಪಿ.ನಾರಾಯಣ್ ಮಾಹಿತಿ ನೀಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್, ರೋಟರಿ ಕ್ಲಬ್ ಜಿಲ್ಲಾ ಗವರ್ನರ್ಬಿ.ಸಿ.ಗೀತಾ ಮಾತನಾಡಿದರು. ಶ್ರೀಮತಿ ಉಷಾ ನಟೇಶ್ ನಿರೂಪಿಸಿದರು. ಡಾ.ಶಾಂತಲಾ ಪ್ರಾರ್ಥಿಸಿದರು, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ನ ಅಧ್ಯಕ್ಷ ಶಿವರಾಜ್ ಎಚ್.ಪಿ. ಸ್ವಾಗತಿಸಿದರು, ಸರ್ಜಿ ಆಸ್ಪತ್ರೆ ಮೆಡಿಕಲ್ ಸೂಪರಿಂಟ್ಂಡೆಂಟ್ ಡಾ.ಪ್ರಶಾಂತ್ ಎಸ್.ವಿ. ವಂದಿಸಿದರು. ಇದೇ ಸಂದರ್ಭದಲ್ಲಿ ಪ್ರೊ. ಆಶಾ ಬೆನಕಪ್ಪ ಅವರಿಗೆ ಅಭಿನಂದನಾ ಪತ್ರ ನೀಡಿ ಅಭಿನಂದಿಸಲಾಯಿತು ಹಾಗೂ ಗಣ್ಯರನ್ನು ಗೌರವಿಸಲಾಯಿತು.
ಇದಕ್ಕೂ ಮೊದಲು ಟೇಪು ಕತ್ತರಿಸುವ ಮೂಲಕ ಮಿಲ್ಕ್ ಬ್ಯಾಂಕ್ನ್ನು ಕೋಡಿಮಠದ ಶ್ರೀ ಶ್ರೀ ಶ್ರೀ ಡಾ. ಶಿವಾನಂದ ಶಿವಯೋಗಿರಾಜೇಂದ್ರ ಮಹಾಸ್ವಾಮೀಜಿ ಹಾಗೂ ಟೇಪು ಕತ್ತರಿಸುವುದರ ಮೂಲಕ ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ರೋ.ಬಿ.ಸಿ.ಗೀತಾ ಅವರಿಂದ ಫೀಡಿಂಗ್ ರೂಮ್ ಉದ್ಘಾಟಿಸಿದರು. ನಂತರ ಫೀಡಿಂಗ್ ರೂಮ್ನಲ್ಲಿ ದೀಪ ಬೆಳಗಿಸುವುದು ಮತ್ತು ಸ್ಟೆಪ್ ಡೌನ್ ಎನ್ಐಸಿಯುನಲ್ಲಿ ತಾಯಂದಿರಿಂದ ಶಿಶುವಿಗೆ ಹಾಲುಣಿಸಿದರು. ಇದಕ್ಕೂ ಮೊದಲು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಸಿಸ್ಟೆಂಟ್ ಗವರ್ನರ್ ರವಿ ಕೋಟೋಜಿ ಅವರು ಅಮೃತ ಬಿಂದು ಮಿಲ್ಕ್ ಬ್ಯಾಂಕ್ ನಾಮಫಲಕ ಅನಾವರಣಗೊಳಿಸಿದರು.