ಭಟ್ಕಳ: ಉಜ್ವಲ ಯೋಜನೆ ಸ್ಥಗಿತಗೊಂಡು ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಮತ್ತೊಂದು ಪ್ರಜ್ವಲ ಯೋಜನೆ ಹೊರ ಬಂದಿದೆ ಎನ್ನುವ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರ ಹೇಳಿಕೆಗೆ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸುಬ್ರಾಯ ದೇವಡಿಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : ರಾಹುಲ್ ಗಾಂಧಿ ಅವರದ್ದು ಹುಸಿ ಭರವಸೆ: ಸುನೀಲ ನಾಯ್ಕ

ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ ಅವರು ಓರ್ವ ಮಹಿಳೆಯಾಗಿ ಹಲವಾರು ಮಹಿಳೆಯರು ಸಂಕಷ್ಟಕ್ಕೆ ಸಿಲುಕಿರುವ ಹಗರಣವನ್ನು ಒಂದು ಯೋಜನೆ ಎಂದು ಹೇಳಿಕೆ ನೀಡಿ ಮಹಿಳೆಯರ ಬಗ್ಗೆ ಹಗುರವಾಗಿ ಮಾತನ್ನಾಡಿದ್ದಾರೆ ಎಂದು ಕಿಡಿಕಾರಿದರು.
ಕನಿಷ್ಠ ಅವರ ಬಗ್ಗೆ ಸಾಂತ್ವನ ಹೇಳುವುದನ್ನು ಬಿಟ್ಟು ಇದನ್ನು ಯೋಜನೆ ಎಂದು ಬಿಂಬಿಸುತ್ತಿರುವುದು ಇವರ ಕೀಳು ಮಟ್ಟದ ರಾಜಕೀಯಕ್ಕೆ ಸಾಕ್ಷಿಯಾಗಿದೆ. ಈ ಬಾರಿ ಉತ್ತರ ಕನ್ನಡ ಜಿಲ್ಲೆಯ ಮಹಿಳೆಯರೇ ಇವರನ್ನು ತಿರಸ್ಕರಿಸಲಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ : ಭಟ್ಕಳದಲ್ಲಿ ಬೃಹತ್ ಬೈಕ್ ರ‌್ಯಾಲಿ ನಾಳೆ : ಗೋವಿಂದ ನಾಯ್ಕ

ಡಾ.ಅಂಜಲಿ ನಿಂಬಾಳ್ಕರ್ ಅವರು ಆ ಸಂತ್ರಸ್ತ ಮಹಿಳೆಯರ ಸ್ಥಾನದಲ್ಲಿ ನಿಂತು ಒಮ್ಮೆ ಯೋಚಿಸಲಿ. ಅಂತಹ ಪರಿಸ್ಥಿತಿಯಲ್ಲಿ ಪ್ರಜ್ವಲ್ ಯೋಜನೆ ಎನ್ನುವ ಮಾತಾದರೂ ನಿಮ್ಮ ಬಾಯಿಂದ ಹೇಗೆ ಬಂತು ಎಂದು ಪ್ರಶ್ನಿಸಿರುವ ಅವರು, ರಾಜ್ಯದ ಹಾಗೂ ಈ ಕ್ಷೇತ್ರದ ಜನತೆ ಇಂತಹ ತಲೆ ತಗ್ಗಿಸುವ ಹೇಳಿಕೆಯನ್ನು ನಿಮ್ಮಿಂದ ನಿರೀಕ್ಷಿಸಿರಲಿಲ್ಲ. ಕನಿಷ್ಟ ಅವರಿಗೆ ಸಾಂತ್ವನದ ಮಾತನ್ನಾದರೂ ಆಡಿ ಎಂದಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಅಷ್ಟಕ್ಕೂ ಸಂಸದನಾಗಿರುವ ಪ್ರಜ್ವಲ್ ಅವರನ್ನು ಸಂಸದರನ್ನಾಗಿ ಮಾಡಿದ್ದು ಯಾರು? ಕಾಂಗ್ರೆಸ್ ಪಕ್ಷದ ಕೊಡುಗೆಯಲ್ಲವೇ? ಅಂದು ನೀವು ಆತನನ್ನು ಸಂಸದನನ್ನಾಗಿ ಮಾಡದೇ ಇದ್ದಲ್ಲಿ ಇಂತಹ ಹಗರಣ ಆಗುತ್ತಿರಲಿಲ್ಲ ಎನ್ನುವ ವ್ಯವಧಾನವೂ ನಿಮಗೆ ಬೇಡವೇ. ಓರ್ವ ಮಹಿಳೆಯಾಗಿ ನಿಮ್ಮಿಂದ ಮಹಿಳೆಯರ ಕುರಿತು ಬೇಜಾವಾಬ್ದಾರಿ ಹೇಳಿಕೆಯನ್ನು ನಾವಾಗಲೀ, ನಮ್ಮ ಪಕ್ಷವಾಗಲೀ ನಿರೀಕ್ಷಿಸಿರಲಿಲ್ಲ. ನಿಜವಾಗಿಯೂ ನಮಗೆ ಹಗರಣದ ವೈಭವೀಕರಣಕ್ಕಿಂತ ಸಾವಿರಾರು ಮಹಿಳೆಯರ ಜೀವನ, ಅವರ ಗೌಪ್ಯತೆ ಕಾಪಾಡುವುದು ಮುಖ್ಯವಾಗಬೇಕಾಗಿತ್ತು. ಅಲ್ಲದೇ ಅಂತಹ ಅಶ್ಲೀಲ ವಿಡಿಯೋಗಳನ್ನು ಸಾರ್ವಜನಿಕಗೊಳಿಸಿದವರನ್ನು ಪತ್ತೆ ಹಚ್ಚಿ ಅವರನ್ನು ಕೂಡ ಶಿಕ್ಷಗೆ ಗುರಿಪಡಿಸಬೇಕು ಎಂದು ಸುಬ್ರಾಯ ದೇವಡಿಗ ಆಗ್ರಹಿಸಿದ್ದಾರೆ.