ಭಟ್ಕಳ: ನಾಮಧಾರಿ ಸಂಚಿಕೆ, ಉ.ಕ. ಜಿಲ್ಲಾ ನಾಮಧಾರಿ ಪ್ರತಿಷ್ಠಾನದ ಉದ್ಘಾಟನೆ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮ ಇಲ್ಲಿನ ಶಿರಾಲಿ ಸಾರದಹೊಳೆ ಸಭಾಭವನದಲ್ಲಿ ನಡೆಯಿತು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಉ.ಕ. ಜಿಲ್ಲಾ ನಾಮಧಾರಿ ಪ್ರತಿಷ್ಠಾನ, ಗುರುಮಠ ದೇವಸ್ಥಾನ ಆಸರಕೇರಿ, ಶ್ರೀ ಕ್ಷೇತ್ರ ಹಳೆಕೋಟೆ ಹನುಮಂತ ದೇವರ ಸನ್ನಿದಿ ಹಾಗೂ ನಾಮಧಾರಿ ಸಂಘ ಮಾವಳ್ಳಿ ಹೋಬಳಿ ಇವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇದನ್ನೂ ಓದಿ : ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ೩ ಚಿನ್ನ, ೧ ಕಂಚು

ಕಾರ್ಯಕ್ರಮವನ್ನು ಹಳೆಕೋಟೆ ಹನುಮಂತ ದೇವಸ್ಥಾನದ ಧರ್ಮದರ್ಶಿ ಸುಬ್ರಾಯ ಜೆ. ನಾಯ್ಕ, ಭಟ್ಕಳ ಗುರುಮಠದ ಅಧ್ಯಕ್ಷ ಅರುಣ ನಾಯ್ಕ ಹಾಗೂ ಮಾವಳ್ಳಿ ಹೋಬಳಿ ನಾಮಧಾರಿ ಸಮಾಜದ ಅಧ್ಯಕ್ಷ ಆರ್. ಕೆ. ನಾಯ್ಕ ಜಂಟಿಯಾಗಿ ಉದ್ಘಾಟಿಸಿದರು.

ಭಟ್ಕಳದ ಸಾರದಹೊಳೆ ಹಳೆಕೋಟೆ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉ.ಕ.ಜಿಲ್ಲಾ ನಾಮಧಾರಿ ಪ್ರತಿಷ್ಠಾನ ಉದ್ಘಾಟನೆಗೊಂಡಿತು.

ಈ ಸಂದರ್ಭದಲ್ಲಿ ಹಳೆಕೋಟೆ ಹನುಮಂತ ದೇವಸ್ಥಾನದ ಮೊಕ್ತೇಸರ ಸುಬ್ರಾಯ ಜೆ. ನಾಯ್ಕ ಮಾತನಾಡಿ, ಜಿಲ್ಲಾ ಮಟ್ಟದ ನಾಮಧಾರಿ ಪ್ರತಿಷ್ಠಾನ ಹಾಗೂ ನಾಮಧಾರಿ ಸಂಚಿಕೆ ಬಿಡುಗಡೆಯಾಗುತ್ತಿರುವುದು ಸಂತಸದ ವಿಚಾರವಾಗಿದೆ. ಬಹುವರ್ಷದ ಕನಸು ನನಸಾಗಿದೆ. ಸಮಾಜ ಬಾಂಧವರು ಚಿಕ್ಕಪುಟ್ಟ ಭಿನ್ನಾಬಿಪ್ರಾಯಗಳನ್ನು ಮರೆತು ಸಮಾಜದ ಅಬಿವೃದ್ಧಿಗೆ ಸದಾ ಮುಂಚೂಣಿಯಲ್ಲಿರಬೇಕು. ಸಮಾಜಕ್ಕೆ ಪ್ರತಿಯೊಬ್ಬರ ಕೊಡುಗೆಯೂ ಅಗತ್ಯವಿರುತ್ತದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಬೇಕಾಗಿದೆ ಎಂದರು.

ಭಟ್ಕಳದ ಸಾರದಹೊಳೆ ಹಳೆಕೋಟೆ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉ.ಕ. ಜಿಲ್ಲೆಯ ಸಾಧಕರನ್ನು ಸನ್ಮಾನಿಸಲಾಯಿತು.

ಪ್ರತಿಷ್ಠಾನ ಉದ್ಘಾಟಿಸಿದ ಮಾಜಿ ಶಾಸಕ ಜೆ.ಡಿ. ನಾಯ್ಕ ಮಾತನಾಡಿ, ಸಮಾಜವು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕಾಗಿದೆ. ಯಾವ ಸಮಾಜ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತದೆಯೋ ಆ ಸಮಾಜ ಪ್ರತಿಯೊಂದರಲ್ಲೂ ಅಭಿವೃದ್ದಿ ಹೊಂದುತ್ತದೆ. ಸಮಾಜದ ಪ್ರತಿಯೊಬ್ಬರೂ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸಮಾಜದ ಮುಖಂಡರ ಮೇಲಿದೆ. ನಾರಾಯಣ ಗುರುಗಳು ಹೇಳಿದ ಹಾಗೆ ಸಂಘಟನೆಯಿಂದ ಬಲಿಷ್ಠತೆ ಹೊಂದಿ ಶಿಕ್ಷಣದಿಂದ ಸ್ವತಂತ್ರರಾಗುವ ಹಾಗೆ ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದರು.

ನಾಮಧಾರಿ ಪುಸ್ತಕ ಬ್ಯಾಂಕ್ ಉದ್ಘಾಟನೆ ಮಾಡಿದ ಸಿದ್ದಾರ್ಥ ಕಾಲೇಜಿನ ಮುಖ್ಯಸ್ಥೆ ಅರ್ಚನಾ ಯು. ಮಾತನಾಡಿ, ಸಮಾಜದ ಮಕ್ಕಳು ನಮ್ಮ ಸಂಸ್ಕೃತಿ
ಸಂಪ್ರದಾಯವನ್ನು ಮರೆಯದೆ ಉಳಿಸಿಕೊಳ್ಳಬೇಕಾಗಿದೆ. ಮಾತೆಯರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ನಮ್ಮ ಧರ್ಮ, ನಮ್ಮ ಸಂಸ್ಕಾರದ ಬಗ್ಗೆ ತಿಳಿಸಿ ಜಾಗೃತಗೊಳಿಸಬೇಕಾಗಿದೆ ಎಂದರು. ಸಾರದಹೊಳೆಯ ಹಳೆಕೋಟೆ ದೇವಸ್ಥಾನದ ಅಧ್ಯಕ್ಷ ಆರ್.ಕೆ. ನಾಯ್ಕ ಮತ್ತು ಭಟ್ಕಳ ನಾಮಧಾರಿ ಗುರುಮಠದ ಅಧ್ಯಕ್ಷ ಅರುಣ ನಾಯ್ಕ ಮಾತನಾಡಿದರು. ಸಮಾಜದ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಾಗಿ ಪಾಲ್ಗೊಂಡು ಸಮಾಜದ ಆಗುಹೋಗುಗಳ ಬಗ್ಗೆ ಚಿಂತನೆ ಮಾಡಬೇಕಾಗಿದೆ ಎಂದರು.

ನಾಮಧಾರಿ ವಿದ್ಯಾಸ್ಪಂದನೆ ಉದ್ಘಾಟಿಸಿದ ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಈಶ್ವರ ನಾಯ್ಕ ಮಾತನಾಡಿದರು. ವೇದಿಕೆಯಲ್ಲಿದ್ದ ಹಿರಿಯ ಸಾಹಿತಿ ಸುಮುಖಾನಂದ ಜಲವಳ್ಳಿ, ನಾಮಧಾರಿ ಯುವ ವೇದಿಕೆಯ ರಾಜ್ಯಾಧ್ಯಕ್ಷ ಗಜಾನನ ನಾಯ್ಕ, ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪ್ರಭಾಕರ ನಾಯ್ಕ ವಹಿಸಿ ಸಮಾಜದ ಚಿಂತನೆ, ಅಭಿವೃದ್ಧಿಯನ್ನು ಕಾರ್ಯರೂಪಕ್ಕೆ ತರಲು ಎಲ್ಲರ ಸಹಕಾರ ಅತ್ಯಗತ್ಯ ಎಂದರು.

ವೇದಿಕೆಯಲ್ಲಿ ಹಳೆಕೋಟೆ ಹನುಮಂತ ದೇವಸ್ಥಾನದ ಮಾಜಿ ಅಧ್ಯಕ್ಷ ಸುಬ್ರಾಯ ನಾಯ್ಕ, ಉದ್ಯಮಿ ಎಚ್.ಆರ್.ನಾಯ್ಕ,ಕೋನಳ್ಳಿ, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮನಮೋಹನ ನಾಯ್ಕ, ಕುಮಟಾ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ, ನಿವೃತ್ತ ಎಸ್.ಬಿ.ಐ. ಅಧಿಕಾರಿ ದತ್ತಾತ್ತೇಯ ನಾಯ್ಕ ಇದ್ದರು.

ಸಾಧಕರಾದ ಸಾಹಿತಿ ಸುಮುಖಾನಂದ ಜಲವಳ್ಳಿ, ಭಟ್ಕಳದ ಅರ್ಚನಾ ಯು., ಈಶ್ವರ ನಾಯ್ಕ ಕುಮಟಾ, ನಿವೃತ್ತ ಎಸ್.ಬಿ.ಐ. ಅಧಿಕಾರಿ ದತ್ತಾತ್ರೇಯ ಜೆ.ನಾಯ್ಕ, ಸಿ.ಟಿ.ಓ. ಗಣೇಶ ನಾಯ್ಕ, ಪತ್ರಕರ್ತ ಎಂ.ಜಿ.ನಾಯ್ಕ ಕುಮಟಾ, ಕೆ.ಆರ್.ನಾಯ್ಕ, ಸಮಾಜದ ಅಧ್ಯಕ್ಷರಾದ ಆರ್.ಕೆ.ನಾಯ್ಕ, ಅರುಣ ನಾಯ್ಕ, ಧರ್ಮದರ್ಶಿ ಸುಬ್ರಾಯ ನಾಯ್ಕ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಪ್ರಾರಂಭದಲ್ಲಿ ಮಂಜುನಾಥ ನಾಯ್ಕ ಪ್ರಾರ್ಥನೆ ಹಾಡಿದರು. ನಾಮಧಾರಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆರ್.ಐ. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬಾಲಚಂದ್ರ ನಾಯ್ಕ ವಂದನಾರ್ಪಣೆ ಮಾಡಿದರು. ಶಿಕ್ಷಕ ಪರಮೇಶ್ವರ ನಾಯ್ಕ, ನಾರಾಯಣ ನಾಯ್ಕ ಹಾಗೂ ಗಂಗಾಧರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು