ಕುಮಟಾ: ಗದ್ಯ, ಲೇಖನಗಳು ಮಾಡದ ಕಾರ್ಯವನ್ನು ಕೆಲವೊಮ್ನೆ ಹನಿ ಕವನಗಳು ಮಾಡಬಲ್ಲವು. ಅಂತಹ ಶಕ್ತಿ ಹನಿ ಕವಿತೆಗಳಿಗಿದೆ ಎಂದು ನಾಡಿನ ಹಿರಿಯ ಕವಿ, ಜನಪದ ವಿದ್ವಾಂಸ ವಿ.ಗ.ನಾಯಕ ನುಡಿದರು.

ಅವರು ಭಾನುವಾರ ಕುಮಟಾದ ಹಳೆಬಸ್ ಸ್ಟ್ಯಾಂಡ್ ಸಮೀಪ ಇರುವ ಪ್ರಭುಧಾಮದಲ್ಲಿ ಭಾವಕವಿ ಉಮೇಶ ಮುಂಡಳ್ಳಿ ಅವರು ಬರೆದ ಶ್ರೀ ಶರಣು ದುರ್ಗಾ ಪ್ರಕಾಶನದ ಹನ್ನೊಂದನೇ ಪ್ರಕಟಣೆ ಹನಿ ಕವನಗಳ ಸಂಕಲನ “ತಿಂಗಳ ಬೆಳಕು” ಬಿಡುಗಡೆಗೊಳಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸಾಹಿತ್ಯಿಕವಾಗಿ ತೊಡಗಿಸಿಕೊಳ್ಳುವವರ, ಓದುಗರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗುತ್ತಿದೆ. ಈ ಬಗ್ಗೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ಓದುವ, ಬರೆಯುವ ಕಡೆ ಆಸಕ್ತಿ ಹುಟ್ಟಿಸುವ ಕಾರ್ಯ ಚಟುವಟಿಕೆಗಳ ಅನಿವಾರ್ಯತೆ ಇದೆ ಎಂದರು.

ಈ ಸಂದರ್ಭದಲ್ಲಿ ವಿ.ಗ.ನಾಯಕ ಅವರ ಪತ್ನಿ ಇದ್ದರು. ಉಮೇಶ್ ಮುಂಡಳ್ಳಿಯವರ ಪತ್ನಿ ಕವಯಿತ್ರಿ ರೇಷ್ಮಾ ಉಮೇಶ , ಮಕ್ಕಳಾದ ನಿನಾದ, ಉತ್ಥಾನ ಜೊತೆ ಇದ್ದರು. ಇದೇ ವೇಳೆ ವಿ.ಗ.ನಾಯಕ ಅವರು ತಮ್ಮ ಸಂಗ್ರಹದಲ್ಲಿದ್ದ ಅಮೂಲ್ಯವಾದ ನೂರು ಪುಸ್ತಕಗಳನ್ನು ನಿನಾದ ಸಾಹಿತ್ಯ ಸಂಗೀತ ಸಂಚಯಕ್ಕಾಗಿ ಉಮೇಶ ಮುಂಡಳ್ಳಿ ದಂಪತಿಗೆ ನೀಡಿ ಹರಿಸಿದರು.

ಚಂದಿರನನ್ನು ಸಂಕೇತವಾಗಿ ಇಟ್ಟಕೊಂಡು ಸಮಾಜದ ಆಗುಹೋಗುಗಳ ಬಗ್ಗೆ ಮುಂಡಳ್ಳಿ ಅವರು ಪ್ರತಿನಿತ್ಯವೂ ಬರೆದು ಹಂಚಿಕೊಳ್ಳುತ್ತಿದ್ದ ನೂರಕ್ಕೂ ಹೆಚ್ಚಿನ ಹನಿ ಕವಿತೆಗಳನ್ನು ಒಳಗೊಂಡ ತಿಂಗಳ ಬೆಳಕು ವಿಜಯ ಕರ್ನಾಟಕ ಪತ್ರಿಕೆಯ ಮಂಗಳೂರು ಉಪಸಂಪಾದಕಿಯಾಗಿದ್ದ ದಿವಂಗತ ಸೀತಾಲಕ್ಷ್ಮೀ ಕರ್ಕಿಕೋಡಿಯವರಿಗೆ ಅರ್ಪಿಸಲಾಗಿದೆ.