ಕುಮಟಾ: ಮಳೆಯು ಬಲವಾದ ಗಾಳಿಯೊಂದಿಗೆ ಸುರಿದ ಪರಿಣಾಮ ತಾಲೂಕಿನಲ್ಲಿ ಹರಿದಿರುವ ಅಘನಾಶಿನಿ, ಚಂಡಿಕಾ, ಬಡಗಣಿ ಹೊಳೆಗಳು ನೆರೆ ಸೃಷ್ಟಿಸಿವೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ನದಿ, ಹೊಳೆಗುಂಟ ಇರುವ ಪ್ರದೇಶಗಳೆಲ್ಲವೂ ಜಲಾವೃತವಾಗಿವೆ. ಇದರಿಂದಾಗಿ ಮೂರೂರು, ಕರ್ಕಿಮಕ್ಕಿ, ಕಡವು, ದಿವಗಿ, ಖೈರೆ, ಕೊಡ್ಕಣಿ, ಮಿರ್ಜಾನ ಸೇರಿದಂತೆ ಹತ್ತಕ್ಕೂ ಹೆಚ್ಚು ಕಡೆ ಕಾಳಜಿ ಕೇಂದ್ರವನ್ನು ತೆರೆದು ನೂರಾರು ಕುಟುಂಬಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಹೆಗಡೆ, ಮಾಸೂರು ಸೇರಿದಂತೆ ಅನೇಕ ಕಡೆ ಜನವಸತಿ ಕಡೆ ನೀರು ನುಗ್ಗಿದೆ.
ಸೋಮವಾರ ಬೆಳಿಗ್ಗೆಯಿಂದಲೇ ಜೋರಾದ ಗಾಳಿಯೊಂದಿಗೆ ನಿರಂತರ ಮಳೆ ಸುರಿಯಲಾರಂಭಿಸಿತು. ಸಂಜೆಯವರೆಗೂ ಇದೇ ತರಹದಲ್ಲಿ ಮುಂದುವರಿದಿತ್ತು. ರಾತ್ರಿ ೧೨ ಗಂಟೆಯ ನಂತರ ಗಾಳಿ ಜೋರಾಗಿ ಮಳೆಯ ರಭಸ ಹೆಚ್ಚಾಯಿತು. ಇದರಿಂದ ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ ತಾಲೂಕಿಗಳಲ್ಲಿ ಭರ್ಜರಿ ಮಳೆ ಸುರಿಯಿತು. ಇದರಿಂದ ಅಘನಾಶಿನಿ, ಚಂಡಿಕಾ, ಬಡಗಣಿ ಹೊಳೆಗಳು ತುಂಬಿ ನೆರೆ ಸೃಷ್ಟಿಸಿತು. ನೀರು ಜನವಸತಿ ಪ್ರದೇಶಕ್ಕೆ ನುಗ್ಗಿತು. ನೀರು ಮನೆಗೆ ನುಗ್ಗುತ್ತಿರುವುದನ್ನು ಅರಿತ ಅನೇಕ ಕುಟುಂಬದ ಜನರು ತಮ್ಮ ಪರಿವಾರದವರನ್ನು ಸುರಕ್ಷಿತ ಸ್ಥಳಕ್ಕೆ ಕತ್ತಲೆಯಲ್ಲೇ ಕರೆತಂದರು.

ಇದನ್ನೂ ಓದಿ : ೧೮ ಕಾಳಜಿ ಕೇಂದ್ರ, ೮೨೫ ಜನರ ಆಶ್ರಯ

ಅಘನಾಶಿನಿ ನದಿಯ ದಡದಲ್ಲಿರುವ ಜಲವೃತ್ತವಾದ ದಿವಗಿ ಕೆಳಗಿನಕೇರಿಯಲ್ಲಿರುವ ಮನೆಗಳ ಜನರನ್ನು ಸ್ಥಳಾಂತರಿಸಲಾಯಿತು. ಅಗ್ನಿಶಾಮಕ, ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ “ಶೌರ್ಯ” ತಂಡದ ಸದಸ್ಯರೊಂದಿಗೆ ಸ್ಥಳೀಯರು ದೋಣಿ ಬಳಸಿ ರಕ್ಷಿಸಿದರು. ವಯಸ್ಸಾದವರನ್ನು ಈ ತಂಡದ ಸದಸ್ಯರು ಎತ್ತಿಕೊಂಡು ಬಂದು ಕಾಳಜಿಕೇಂದ್ರಕ್ಕೆ ಮುಟ್ಟಿಸಿದರು. ಬೆಳಿಗ್ಗೆಯೂ ಈ ಕಾರ್ಯಾಚರಣೆ ನಡೆದೇ ಇತ್ತು. ಇನ್ನೂ ಕೆಲವರನ್ನು ರಸ್ತೆಯ ಒಂದು ಕಡೆ ಅಲ್ಲಿಂದಿಲ್ಲಿಗೆ ಕಟ್ಟಿದ ಹಗ್ಗ ಕಟ್ಟಿ ಅದನ್ನು ಹಿಡಿದುಕೊಂಡು ನಡೆದುಬಂದರು. ಭಾರಿ ಸೆಳೆತವಿರುವ ನೀರಿನಲ್ಲೇ ಅನೇಕರು ನಡೆದುಬಂದು ಕಾಳಜಿ ಕೇಂದ್ರಕ್ಕೆ ಸೇರಿಕೊಂಡರು.

ಇದನ್ನೂ ಓದಿ : ಗುಡ್ಡಕುಸಿತ ಹಿನ್ನೆಲೆ ಸಂಚಾರ ಮಾರ್ಗ ಬದಲಾವಣೆ

ಶೌರ್ಯ ತಂಡದ ಸದಸ್ಯರು ಕಾರ್ಯಾಚರಣೆ ನಡೆಸುತ್ತಿದ್ದ ಪ್ರದೇಶಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಕುಮಟಾದ ಯೋಜನಾಧಿಕಾರಿ ಕಲ್ಮೇಶ ತಂಡದ ಸದಸ್ಯರಿಗೆ ಮಾರ್ಗದರ್ಶನ ಮಾಡಿದರು. ರಕ್ಷಿಸಲ್ಪಟ್ಟವರಿಗೆ ಗ್ರಾಮಾಭಿವೃದ್ದಿ ಯೋಜನೆ ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ಹೇಳಿ ಧೈರ್ಯ ತುಂಬಿದರು.
ಸೋಮವಾರ ಬೆಳಿಗ್ಗೆಯಿಂದ ಮಂಗಳವಾರ ಬೆಳಿಗ್ಗೆ ವರೆಗೆ ತಾಲೂಕಿನಲ್ಲಿ ೧೬೪.೪ ಮೀ.ಮೀ ಮಳೆಯಾಗಿದೆ.