ಭಟ್ಕಳ: ೨೫ ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಅತ್ಯಂತ ಯಶಸ್ವಿಯಾಗಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಜುಲೈ ೩೧ರಂದು ಸೇವಾ ನಿವೃತ್ತಿ ಹೊಂದಿದ ಭಟ್ಕಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ.ಮೊಗೇರ ಹಾಗೂ ಅವರ ಧರ್ಮಪತ್ನಿ ಸುಭದ್ರ ಮೊಗೇರ ಅವರನ್ನು ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್(AITA) ಭಟ್ಕಳ ಶಾಖೆಯಿಂದ ಮುರುಡೇಶ್ವರದ ಬಸ್ತಿಯ ಅವರ ಸ್ವಗೃಹದಲ್ಲಿ ಶುಕ್ರವಾರ ಗೌರವಿಸಿ ಅಭಿನಂದನಾ ಪತ್ರ ಅರ್ಪಿಸಲಾಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್‌ ಮಾಡಲು ಇಲ್ಲಿ ಒತ್ತಿ.

ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಣಾಧಿಕಾರಿ ವಿ.ಡಿ.ಮೊಗೇರ, ಐಟಾದಿಂದ ನನ್ನ ಮನೆಯಲ್ಲಿ ಕುಟುಂಬ ಸದಸ್ಯರ ನಡುವೆ ತಮ್ಮ ಪತ್ನಿಯೊಂದಿಗೆ ಸನ್ಮಾನಿಸಿ ಗೌರವಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಸರ್ಕಾರಿ ನೌಕರಿ ಎನ್ನುವ ದೃಷ್ಟಿಯಲ್ಲಿ ನಾನು ಕೆಲಸ ಮಾಡಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ನನಗೆ ಗೊತ್ತಿರುವ ಎಲ್ಲವನ್ನೂ ಧಾರೆ ಎರೆದಿದ್ದೇನೆ. ನನ್ನಲ್ಲಿರುವ ಶಕ್ತಿ ಮೀರಿ ನಾನು ಶ್ರಮಿಸಿದ್ದೇನೆ. ಬಹುಷಃ ಆ ಶಕ್ತಿ ಇನ್ನಷ್ಟು ಹೆಚ್ಚು ಸಿಕ್ಕರೆ ಮತ್ತಷ್ಟು ಕೆಲಸ ಮಾಡಬಹುದಿತ್ತು.  ತಪ್ಪು ಹೆಜ್ಜೆ ಇಡದೆ ಎಲ್ಲವನ್ನೂ ಸರಿಯಾದ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗಿದ್ದೇನೆ ಎಂದರು.
ಅಭಿನಂದಿಸಿ ಮಾತನಾಡಿದ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ಕರ್ನಾಟಕ ರಾಜ್ಯಾಧ್ಯಕ್ಷ ಎಂ.ಆರ್.ಮಾನ್ವಿ, ಶಿಕ್ಷಣ ಇಲಾಖೆಯ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬಂದ ವಿ.ಡಿ.ಮೊಗೇರ ಶಿಕ್ಷಕ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಭಟ್ಕಳ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ಹೆಚ್ಚಳಕ್ಕಾಗಿ ಹಲವು ವಿನೂತ ಯೋಜನೆಯ ಅಡಿಪಾಯವನ್ನು ಹಾಕಿಕೊಟ್ಟಿದ್ದಾರೆ. ಇದು ಮುಂಬರುವ ಶಿಕ್ಷಣಾಧಿಕಾರಿಗಳಿಗೆ ಮಾರ್ಗದರ್ಶಿಯಾಗಲಿದೆ ಎಂದರು.

ಇದನ್ನೂ ಓದಿ : ಸುಧೀಂದ್ರ ಕಾಲೇಜಿನ ವೃಂದಾಗೆ ರ‍್ಯಾಂಕ್

ಅಲ್ ಇಂಡಿಯಾ ಐಡಿಯಲ್ಲ ಟೀಚರ್ಸ್ ಅಸೋಸಿಯೇಶನ್(AITA) ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಯಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಕ್ರಿಯಾಶೀಲವಾಗಿದೆ. ಶಿಕ್ಷಕರ ಸಮಸ್ಯೆಗಳು ಸೇರಿದಂತೆ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಯತ್ನಿಸುತ್ತಿದೆ ಎಂದರು.
ರಾಜ್ಯ ಕಾರ್ಯದರ್ಶಿ ಯಾಸೀನ್ ಭಿಕ್ಬಾ ಮಾತನಾಡಿದರು. ಈ ಸಂದರ್ಭದಲ್ಲಿ ಉತ್ತರಕನ್ನಡ ಜಿಲ್ಲಾಧ್ಯಕ್ಷ ಸರ್ಕಾರಿ ಉದು ಪ್ರಾಥಮಿಕ ಶಾಲೆಯ ಜಾಮಿಯ ಜಾಲಿಯ ಮುಖ್ಯಾಧ್ಯಾಪಕ ಅಲಿ ಮನಿಗಾರ್, ಭಟ್ಕಳ ತಾಲೂಕು ಅಧ್ಯಕ್ಷ ಹಾಗೂ ಇಕ್ರಾ ಪ್ರೌಢಶಾಲೆಯ ಮುಖ್ಯಾಧ್ಯಾಪಕ ನಯೀಮ್ ಉಲ್ ಹಖ್, ಹೊನ್ನಾವರ ಸಿ.ಆರ್.ಪಿ. ನಸೀರ್ ಖಾನ್, ಜಮಾಲ್ ಖಾನ್, ಶಹಬಾಜ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ನಿವೃತ್ತ ಬಿಇಒ ವಿ.ಡಿ.ಮೋಗೇರ ಅವರಿಗೆ ಬೀಳ್ಕೊಡುಗೆ