ಶಿರಸಿ : ಇಲ್ಲಿನ ಪ್ರಸಿದ್ಧಮಾರಿಕಾಂಬಾ ಜಾತ್ರೆಯಲ್ಲಿ ಹಕ್ಕಿಪಿಕ್ಕಿ ಅಲೆಮಾರಿ ಜನಾಂಗಕ್ಕೆ ಅಂಗಡಿ ಮುಂಗಟ್ಟು ಇಡಲು ಜಾಗ ಮೀಸಲಿಡುವಂತೆ ಕರ್ನಾಟಕ ಸರಕಾರದ ಅಲೆಮಾರಿ ಅರೆ ಅಲೆಮಾರಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಅಭಿವೃದ್ದಿ ಕೋಶದ ನಾಮನಿರ್ದೇಶಿತ ಸದಸ್ಯ ಕೃಷ್ಣ ಹೆಚ್. ಬಳೆಗಾರ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಕಬ್ಬಿನ ಎಫ್ ಆರ್ ಪಿ ಹೆಚ್ಚಿಸಿದ ಕೇಂದ್ರ ಸರ್ಕಾರ
ಈ ಕುರಿತು ಅವರು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಶಿರಸಿಯ ವಿಶ್ವ ವಿಖ್ಯಾತ ಶ್ರೀ ಮಾರಿಕಾಂಬಾ ಜಾತ್ರೆಯು ಪ್ರಾರಂಭವಾಗುತ್ತಿದೆ. ಈ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆಯಲು ಬರುತ್ತಾರೆ. ಈ ಜಾತ್ರೆಗೆ ದೇವಿಗದ್ದುಗೆಯ ಸುತ್ತಮುತ್ತಲಿನ ಜಾಗವನ್ನು ನಗರ ಸಭೆಯಿಂದ ಹರಾಜಿನ ಮೂಲಕ ನೀಡುತ್ತಾರೆ. ಹಿಂದಿನಿಂದಲೂ ಶಿರಸಿ ನಗರದ ಶಿವಾಜಿ ಚೌಕ್, ಮಿರ್ಜಾನ ಪೆಟ್ರೊಲ್ ಬಂಕ್ ಮುಂಭಾಗ ಹಾಗು ಹಿಂಭಾಗ ಪೋಸ್ಟ ಆಫೀಸ ಮುಂಭಾಗದ ಜಾಗೆಗಳನ್ನು ಅಲೆಮಾರಿ ಅರೆ ಅಲೆಮಾರಿ (ಹಕ್ಕಿಪಿಕ್ಕಿ) ಜನಾಂಗದವರಿಗೆ ಕರಕುಶಲ ವಸ್ತುಗಳ ಮಾರಾಟಕ್ಕೆ ನೀಡಲಾಗುತ್ತಿತ್ತು. ಆದರೆ ಕಳೆದ ಜಾತ್ರೆಯ ಸಂದರ್ಭದಲ್ಲಿ ಹಕ್ಕಿಪಿಕ್ಕಿ ಜನಾಂಗದವರ ಅಂಗಡಿಗಳನ್ನು ಕಿತ್ತು ಹಾಕಿ ನಗರಸಭೆ ಅಧಿಕಾರಿಗಳು ದೌರ್ಜನ್ಯವೆಸಗಿದ್ದರು. ಪೊಲೀಸರ ಉಪಸ್ಥಿತಿಯಲ್ಲಿ ಹಕ್ಕಿಪಿಕ್ಕಿ  ಜನಾಂಗದವರ ಮೇಲೆ ಹಲ್ಲೆ ಮಾಡಲಾಗಿತ್ತು. ಅವರ ಅಂಗಡಿಗಳನ್ನು ರಾತ್ರೋರಾತ್ರಿ ಕಿತ್ತು ವಾಹನದಲ್ಲಿ ಸಾಗಿಸಲಾಗಿತ್ತು. ಈ ಕುರಿತು ಸುದ್ದಿವಾಹಿನಿಗಳಲ್ಲಿ ವರದಿ ಪ್ರಸಾರವಾಗಿತ್ತು. ಈ ಕುರಿತು ಸಾಮಾಜಿಕ ಹೋರಾಟಗಾರರು ಸಾರ್ವಜನಿಕರು ಪ್ರತಿಭಟನೆ ನಡೆಸಿದ ಮೇಲೆ ಹಕ್ಕಿಪಿಕ್ಕಿ ಜನಾಂಗದವರಿಗೆ ಕೇವಲ ಶಿವಾಜಿ ಚೌಕ್ ಜಾಗದಲ್ಲಿ ಅಂಗಡಿ ಮುಂಗಟ್ಟುಗಳನ್ನು ಇಡಲು ಜಾಗ ನೀಡಲಾಗಿತ್ತು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಬಾರಿ ಹಕ್ಕಿಪಿಕ್ಕಿ ಜನಾಂಗಕ್ಕೆ ಮೀಸಲಿಟ್ಟ ಜಾಗಕ್ಕೆ ಹರಾಜು ಪ್ರಕ್ರಿಯೆ ನಡೆಸದೆ ಹಕ್ಕಿಪಿಕ್ಕಿ ಜನಾಂಗದವರಿಗೆ ೧೦೦ ಅಂಗಡಿಗಳನ್ನು ಮೀಸಲಿಡಬೇಕು. ಪೋಸ್ಟ ಆಫಿಸು ಎದುರು, ಮಿರ್ಜಾನ ಪೆಟ್ರೋಲ್ ಬಂಕ್ ಮುಂಭಾಗ ಹಾಗೂ ಹಿಂಭಾಗ, ಆಸುಪಾಸು ಜಾಗಗಳನ್ನು ಹಕ್ಕಿಪಿಕ್ಕಿ ಪ.ಜಾತಿ ಪ. ಪಂಗಡ ಜನಾಂಗದವರಿಗೇ ನೀಡಬೇಕು. ಅಧಿಕಾರಿಗಳು ಮತ್ತು ಪೋಲಿಸರಿಂದ ದೌರ್ಜನ್ಯವಾಗದಂತೆ ನೋಡಿಕೊಳ್ಳಬೇಕು ಎಂದು ಕೃಷ್ಣ ಹೆಚ್. ಬಳೆಗಾರ ಮನವಿ ಮಾಡಿದ್ದಾರೆ.