ಶಿವಮೊಗ್ಗ (Shivamogga) : ಧರ್ಮ ಮತ್ತು ವೇದ ಸಂರಕ್ಷಣೆಗಾಗಿ ಎಲ್ಲ ಮಠಗಳು ಸಂಘಟಿತವಾಗಿ ಕೆಲಸ ಮಾಡಬೇಕು ಎಂದು ಕಾಂಚಿ ಶ್ರೀ (Kanchi Shree) ಕಾಮಕೋಟಿ ಪೀಠಾಧ್ಯಕ್ಷ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಸಲಹೆ ಮಾಡಿದರು. ತೀರ್ಥಹಳ್ಳಿಯ (Thirthahalli) ಶ್ರೀರಾಮಚಂದ್ರಾಪುರ ಮಠದಲ್ಲಿ (Ramachandrapur math) ಶಂಕರಪೀಠದ ಮೂವರು ಶ್ರೀಗಳ ಸಾನ್ನಿಧ್ಯದಲ್ಲಿ ನಡೆದ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶಂಕರಪೀಠಗಳೆಲ್ಲ ಒಂದಾಗಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ಮೂರರ ಬದಲು ಶಂಕರಪೀಠದ ೩೦ ಯತಿಗಳನ್ನು ಸೇರಿಸುವ ಕಾರ್ಯ ಆಗಲಿ ಎಂದು ಅವರು ಆಶಿಸಿದರು. “ರಾಮಚಂದ್ರಾಪುರ ಮಠ ಬೃಹತ್-ಮಹತ್ ಕಾರ್ಯಗಳನ್ನು ಮಾಡುತ್ತಿದೆ. ಜೀವ-ಜೀವನೋದ್ಧಾರಕ್ಕೆ ಪೂರಕವಾಗುವಂತೆ, ಚಿಕ್ಕಮಕ್ಕಳೂ ಧಾರ್ಮಿಕ ಆಸಕ್ತಿ ಬೆಳೆಸಿಕೊಂಡು ಎಳವೆಯಲ್ಲೇ ಮಠಕ್ಕೆ ಬರುವಂತಾಗಬೇಕು. ಜೀವ- ಜೀವಗಳ ನಡುವೆ, ಮಠ-ಮಠಗಳ ನಡುವೆ ಅದ್ವೈತ ಏರ್ಪಡಬೇಕು. ದೇವತೆ ಹಾಗೂ ಮನುಷ್ಯರ ನಡುವೆ ಸಂಬಂಧ ಬೆಸೆಯುವ ನಿಟ್ಟಿನಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಈ ಭಾಗದಲ್ಲಿ ರಾಮಚಂದ್ರಾಪುರ ಮಠ ನೇತೃತ್ವದಲ್ಲಿ ಸೇವೆಗಳು ನಡೆಯಲಿ ಎಂದು ಕರೆ ನೀಡಿದರು.
ಇದನ್ನೂ ಓದಿ : ಹಿರಿಯ ಚಿತ್ರ ಕಲಾವಿದ ತೇಕು ತಾಂಡೇಲ ನಿಧನ
ರಾಘವೇಶ್ವರ ಭಾರತೀಮಹಾಸ್ವಾಮೀಜಿ (Raghaveshwar Shree) ಆಶೀರ್ವಚನ ನೀಡಿ, “ಇಂದು ನಡೆದಿರುವ ಯತಿ ಸಮಾಗಮ ಸಮಾಜಕ್ಕೆ ದೊಡ್ಡ ಸಂದೇಶವನ್ನು ಕೊಡುವಂಥದ್ದು. ಶಂಕರತತ್ವದ ಮೂರು ಪ್ರಧಾನ ಪೀಠಗಳ ಸಮಾಗಮ ಇಂದಾಗಿದೆ. ಬಹುಶಃ ಇದು ಪವಿತ್ರ ತ್ರಿವೇಣಿ ಸಂಗಮ. ಧರ್ಮರಕ್ಷಣೆ ಕಾರ್ಯದಲ್ಲಿ ಎಲ್ಲ ಮಠಗಳು ಒಂದಾಗಿ ನಡೆಯುತ್ತವೆ ಎನ್ನುವುದನ್ನು ಇಂದಿನ ಸಮಾವೇಶ ಸಾರುತ್ತದೆ. ಮುಂದಿನ ದಿನಗಳಲ್ಲಿ ಮೂರು ಮಠಗಳು ಮೂವತ್ತು ಮಠಗಳ ಒಡಗೂಡಿ ಈ ಕಾರ್ಯಕ್ಕೆ ಟೊಂಕ ಕಟ್ಟುತ್ತೇವೆ” ಎಂದು ನುಡಿದರು.
ಇದನ್ನೂ ಓದಿ : ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಹಿತ ೭ ಜನರ ವಿರುದ್ಧ ದೂರು ದಾಖಲು
ಶಕಟಪುರಿ (Shakatapuram) ವಿದ್ಯಾಪೀಠದ ಶ್ರೀ ಕೃಷ್ಣಾನಂದತೀರ್ಥ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ, ಮೂವತ್ತೊಂದು ವರ್ಷಗಳ ಹಿಂದೆ ಉಭಯ ಮಠಗಳ ಶ್ರೀಗಳು ಇಲ್ಲಿ ಸಮಾಗಮಗೊಂಡಿದ್ದರು. ಇದೀಗ ಮೂರು ಪೀಠಗಳು ಇಲ್ಲಿ ಸಮಾವೇಶಗೊಂಡಿವೆ. ಮುಂದಿನ ದಿನಗಳಲ್ಲಿ ಇಂಥ ೩೦ ಶಂಕರ ಪೀಠಗಳು ಒಂದೆಡೆ ಸೇರಿ ಸಮಾಜ ರಕ್ಷಣೆ, ಧರ್ಮರಕ್ಷಣೆ ಕಾರ್ಯದಲ್ಲಿ ಒಗ್ಗೂಡಬೇಕು. ಮೂಲಾಮ್ನಾಯ ಮಠಗಳ ಪ್ರಬಲ ಇಚ್ಛಾಶಕ್ತಿಯಿಂದ ಇದು ಸಾಧ್ಯವಾಗಲಿದೆ ಎಂದು ಭವಿಷ್ಯ ನುಡಿದರು.
ಇದನ್ನೂ ಓದಿ : ಶಿವಮೊಗ್ಗದ ಕಾರಿಗೆ ಖಾಸಗಿ ಬಸ್ ಡಿಕ್ಕಿ; ಇಬ್ಬರಿಗೆ ಗಾಯ
ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆ.ಎಲ್, ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಶ್ರೀಮಠದ ವಿವಿಧ ವಿಭಾಗಗಳ ಪ್ರಮುಖರಾದ ಪ್ರವೀಣ ಭೀಮನಕೋಣೆ, ಶಾಂತಾರಾಮ ಹೆಗಡೆ, ಸ್ಥಳೀಯ ಮಠ ಸಮಿತಿಯ ಶಶಿಧರ್, ಕಾರ್ತೀಕ, ಕೃಷ್ಣಪ್ರಸಾದ್ ಎಡಪ್ಪಾಡಿ, ಪ್ರಕಾಶ ಬೇರಾಳ, ಮುರಳಿ ಗೀಜಗಾರ, ಶ್ರೀನಾಥ ಸಾರಂಗ, ವಾದಿರಜ ಸಾಮಗ, ಶ್ರೀವತ್ಸ ಮುರಗೋಡು, ಆರ್.ಎಸ್.ಹೆಗಡೆ ಹರಗಿ, ಡಾ.ವೈ.ವಿ.ಕೃಷ್ಣಮೂರ್ತಿ, ಈಶ್ವರಿ ಬೇರ್ಕಡವು, ಶ್ರೀಕಾರ್ಯದರ್ಶಿ ಮಧು ಜಿ.ಕೆ, ಶ್ರೀಮಠದ ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ ಮತ್ತಿತರರು ಉಪಸ್ಥಿತರಿದ್ದರು. ಕೃಷ್ಣಾನಂದ ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ವೇದವಿದ್ವಾಂಸರ ಸನ್ಮಾನ ಮತ್ತಿತರ ಕಾರ್ಯಕ್ರಮಗಳು ಮೂವರು ಶ್ರೀಗಳ ಸಾನ್ನಿಧ್ಯದಲ್ಲಿ ನಡೆದವು.
ಇದನ್ನೂ ಓದಿ : ಆಟೋ ಚಾಲಕನ ಮೇಲೆ ಹಲ್ಲೆ, ಜೀವ ಬೆದರಿಕೆ