ಕಾರವಾರ (Karwar) :  ನ.೭ರಂದು ಹಗಲು ಹೊತ್ತಿನಲ್ಲೇ ಕಾರವಾರದ ಮನೆಯೊಂದಕ್ಕೆ ನುಗ್ಗಿ ೫.೬ ಲಕ್ಷ ರೂ.ಗೂ ಅಧಿಕ ಮೌಲ್ಯದ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದಾಗ ಆತ ಮತ್ತೊಬ್ಬ ಕಳ್ಳ ಎಂದೇ ಭಾವಿಸಿದ್ದರು. ಆದಾಗ್ಯೂ, ೨ ಕೋಟಿ ಶಂಕಿತರ ಮಾದರಿಗಳನ್ನು ಒಳಗೊಂಡಿರುವ ರಾಷ್ಟ್ರೀಯ ಡೇಟಾಬೇಸ್‌ನೊಂದಿಗೆ ಆತನ ಬೆರಳಚ್ಚುಗಳನ್ನು ಹೊಂದಿಸಿದಾಗ, ಪೊಲೀಸರೇ ಆಘಾತಕ್ಕೊಳಗಾದರು. ಯಾಕೆಂದರೆ, ಆತನೊಬ್ಬ ಒಂಟಿ ತೋಳ (A lone wolf)!

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ದಕ್ಷಿಣ ಬೆಂಗಳೂರಿನ (Bengaluru) ಶ್ರೀನಗರದ ಎಸ್. ಸಮೀರ್ ಶರ್ಮಾ (೪೦) ಎಂಬಾತನೇ ಬಂಧಿತ ಆರೋಪಿ. ಈ ಶಂಕಿತ ಆರೋಪಿ ೨೦೧೯ರಲ್ಲಿ ಬೆಂಗಳೂರಿನಿಂದ ನಾಪತ್ತೆಯಾಗಿದ್ದ. ಈತನ ವಿರುದ್ಧ ೨೦೧೫ ಮತ್ತು ೨೦೧೯ರ ನಡುವೆ ಬೆಂಗಳೂರು ಒಂದರಲ್ಲೇ ೧೦೦ಕ್ಕೂ ಹೆಚ್ಚು ಪ್ರಕರಣಗಳಿವೆ. ಈತನ ವಿರುದ್ಧ ೩೦ ಜಾಮೀನು ರಹಿತ ವಾರಂಟ್‌ಗಳು ಮತ್ತು ೨೦ ನೋಟಿಸ್‌ಗಳನ್ನು ಜಾರಿ ಮಾಡಲಾಗಿದೆ. ಅಲ್ಲದೆ, ಈತ ೨೦೧೯ರಿಂದ ಗೋವಾದಲ್ಲಿ (Goa) ಏಳು ಪ್ರಕರಣಗಳಲ್ಲಿ ಮತ್ತು ಪಂಜಾಬ್‌ನಲ್ಲಿ (Punjab) ಐದು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ : ಭಟ್ಕಳದಲ್ಲಿ ಕ್ಲಿನಿಕ್ ಗಳ ಮೇಲೆ ದಾಳಿ

ಕಳೆದ ನ.೭ರಂದು ಕಾರವಾರದ ಆಶ್ರಮ ರಸ್ತೆಯಲ್ಲಿರುವ ಅಭಿಮಾನಶ್ರೀ ಅಪಾರ್ಟಮೆಂಟಿನಲ್ಲಿ ಹಾಡಹಗಲೇ ಕಳ್ಳತನ ನಡೆದಿತ್ತು. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಪ್ರಿಯಾ ಅಂತೋನಿ ಫರ್ನಾಂಡೀಸ್‌ ಎಂಬುವವರ ಮನೆಗೆ ನುಗ್ಗಿ ೧೪೦ ಗ್ರಾಂ ತೂಕದ ಚಿನ್ನಾಭರಣ ಕಳ್ಳತನ ಮಾಡಲಾಗಿತ್ತು. ಬೀಗ ಮುರಿದು ಒಳನುಗ್ಗಿ ಕಪಾಟಿನಲ್ಲಿಟ್ಟಿದ್ದ ೫.೬೦ ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಸಿಕ್ಕಿದ್ದೇ ಸಮೀರ್‌ ಶರ್ಮಾ.

ಹಗಲಿನಲ್ಲಿ ಮಾತ್ರ ಕಳ್ಳತನ : ೧೦೦ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿರುವ ಸಮೀರ್ ಎಂದಿಗೂ ರಾತ್ರಿಯಲ್ಲಿ ಕಳ್ಳತನ ಮಾಡಲಿಲ್ಲ. “ಇದು ಅಪಾಯಕಾರಿ. ಜನರು ಹಗಲಿಗಿಂತ ರಾತ್ರಿಯಲ್ಲಿ ನಿಮ್ಮನ್ನು ಹೆಚ್ಚು ಅನುಮಾನಿಸುತ್ತಾರೆ. ಹಗಲಿನಲ್ಲಿ, ನಾನು ವಸತಿ ಪ್ರದೇಶಗಳು, ಪಿಜಿ ವಸತಿ ಅಥವಾ ಹಾಸ್ಟೆಲ್‌ಗಳಲ್ಲಿ ಯಾವುದೋ ಸ್ಥಳ  ಹುಡುಕುವ ನೆಪದಲ್ಲಿ ಸುತ್ತಾಡುತ್ತೇನೆ. ಆ ಸಂದರ್ಭ ಕಳ್ಳತನಕ್ಕೆ ಬಳಸಬಹುದಾದ ಕಿಟಕಿಗಳು ಮತ್ತು ಕೊಠಡಿಗಳ ಬಗ್ಗೆ  ಮಾಹಿತಿ ಪಡೆಯುತ್ತೇನೆ ”ಎಂದು ವಿಚಾರಣೆ ವೇಳೆ ಸಮೀರ್ ಪೊಲೀಸರಿಗೆ ತಿಳಿಸಿದ್ದಾನೆ.

ಇದನ್ನೂ ಓದಿ :    ರೈಲು ಪ್ರಯಾಣಿಕರು ಓದಲೇ ಬೇಕಾದ ಸುದ್ದಿಯಿದು !

ಸಮೀರ್ ಒಬ್ಬ ‘ಒಂಟಿ ತೋಳ’. ಅವನು ಯಾರೊಂದಿಗೂ ಕೆಲಸ ಮಾಡಿಲ್ಲ. “ಜೈಲಿನ ದಿನಗಳಲ್ಲಿ, ಸಮೀರ್ ಇತರ ಕೈದಿಗಳೊಂದಿಗೆ ಬಹಳ ಕಡಿಮೆ ಸಂವಹನ ನಡೆಸುತ್ತಿದ್ದ. ಅವನು ಯಾರನ್ನೂ ನಂಬದ ಕಾರಣ ತನ್ನ ಬಗ್ಗೆ ಯಾರ ಬಳಿಯೂ ಮಾಹಿತಿಯನ್ನು ಹಂಚಿಕೊಂಡಿಲ್ಲ” ಎಂದು ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಸಮೀರ್ ಬಂಧನ ಹಾಗೂ ಆತನ ಕುರಿತಾದ ಇತರ ವಿವರಗಳ ಕುರಿತು ಕಾರವಾರ ಎಸ್ಪಿ ಎಂ.ನಾರಾಯಣ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ (B Dayanand) ಅವರಿಗೆ ಪತ್ರ ಬರೆದಿರುವುದಾಗಿ ಮೂಲಗಳು ತಿಳಿಸಿವೆ.

ವಿಡಿಯೋ ಸಹಿತ ಇದನ್ನೂ ಓದಿ :  ನಾನು ತುಂಬಾ ಕಾಸ್ಟ್ಲಿ, 100 ಕೋಟಿ ಸಾಕಾಗೊಲ್ಲ

ವ್ಯಾಪಾರಿಯಿಂದ ಕಳ್ಳತನಕ್ಕೆ : ಸಮೀರ್ ೨೦೧೦ರಲ್ಲಿ ಶ್ರೀನಗರದಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಅಂಗಡಿಯನ್ನು ನಡೆಸುತ್ತಿದ್ದ. ಆದರೆ ಆದಾಯದಿಂದ ಸಂತೋಷವಾಗಿರಲಿಲ್ಲ. ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಕದ್ದ ಆರೋಪದ ಮೇಲೆ ಬಂಧಿತನಾಗಿರುವ ರಾಜಸ್ಥಾನದ (Rajasthan) ಸ್ನೇಹಿತನೊಬ್ಬ ಸಮೀರ್‌ಗೆ ಭವಿಷ್ಯದಲ್ಲಿ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳಿಗೆ ಭಾರಿ ಬೇಡಿಕೆ ಬರಲಿದೆ ಎಂದು ಹೇಳಿದ್ದ. ಕಿಟಕಿಗಳ ಮೂಲಕ ಅಥವಾ ಹಾಸ್ಟೆಲ್‌ಗಳು ಮತ್ತು ಪಿಜಿ ವಸತಿಗಳಲ್ಲಿ ತೆರೆದ ಬಾಗಿಲುಗಳ ಮೂಲಕ ಟೇಬಲ್‌ಗಳ ಮೇಲೆ ಇರಿಸಲಾದ ಲ್ಯಾಪ್‌ಟಾಪ್‌ಗಳನ್ನು ಕದಿಯುವುದು ಮೊಬೈಲ್ ಫೋನ್‌ಗಳನ್ನು ಕಸಿದುಕೊಳ್ಳುವುದಕ್ಕಿಂತ ಹೆಚ್ಚು ಸುಲಭ ಎಂದು ಸಮೀರ್ ಅರಿತುಕೊಂಡಿದ್ದ. ಆಗ ಹೊಳೆದಿದ್ದೇ ಹಾಡಗಲಲ್ಲಿ ಮನೆಕಳ್ಳತನ.

ಇದನ್ನೂ ಓದಿ :  ಕ್ಷುಲ್ಲಕ ವಿಚಾರಕ್ಕೆ ಕುಟುಂಬಗಳ ಮಾರಾಮಾರಿ