ಬೆಳಗಾವಿ (Belagavi) :  ೧೩ ತಿಂಗಳ ಹೆಣ್ಣು ಮಗುವನ್ನು ಆಕೆಯ ಪೋಷಕರು ಗೋವಾದ (Goa) ಕುಟುಂಬಕ್ಕೆ ಮಾರಾಟ ಮಾಡಿದ ಪ್ರಕರಣವನ್ನು ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ಸದಸ್ಯರು ಮತ್ತು ಬೆಳಗಾವಿ ನಗರ ಪೊಲೀಸರು ಬಯಲಿಗೆಳೆದಿದ್ದಾರೆ. ಉತ್ತರ ಕನ್ನಡದ (Uttara Kannada) ಜೋಯಿಡಾದ (Joida) ಖಾಸಗಿ ಹೋಟೆಲ್‌ನಲ್ಲಿ ಈ ಮಾರಾಟ ವ್ಯವಹಾರ ನಡೆದಿದೆ. ಹೀಗಾಗಿ ಬೆಳಗಾವಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಉತ್ತರ ಕನ್ನಡಕ್ಕೆ ವರ್ಗಾಯಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳ ಡೈರಿ ಫೇಸ್‌ಬುಕ್‌ ಪೇಜ್‌ ಫಾಲೋವ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ.

ಮಹಾರಾಷ್ಟ್ರದ ಸಾಂಗ್ಲಿ ಮೂಲದ ರಾಜೇಂದ್ರ ಮೇತ್ರಿ ಮತ್ತು ಅವರ ಪತ್ನಿ ಶಿಲ್ಪಾ ಮೇತ್ರಿ ಅವರು ತಮ್ಮ ಮಗಳನ್ನು ಗೋವಾದ ಸ್ಮಿತಾ ವಾಡಿಕರ್ ಅವರಿಗೆ ಮಾರಾಟ ಮಾಡಿದ್ದಾರೆ.  ಈ ಒಪ್ಪಂದಕ್ಕೆ ಬೆಳಗಾವಿಯ (Belagavi) ವಂದನಾ ಸುರವೆ, ಮಹಾರಾಷ್ಟ್ರದ ಸೊಲ್ಲಾಪುರದ ರವಿ ರಾವುತ್ ಮತ್ತು ರಾಣಿ ರಾವುತ್ ಮಧ್ಯಸ್ಥಿಕೆ ವಹಿಸಿದ್ದರು ಎನ್ನಲಾಗಿದೆ. ಜೋಯಿಡಾ ತಾಲೂಕಿನ ರಾಮನಗರದಲ್ಲಿ (Ramanagar) ಈ ವ್ಯವಹಾರ ನಡೆದಿತ್ತು ಎಂದು ತಿಳಿದುಬಂದಿದೆ.

ಇದನ್ನೂ ಓದಿ :  ಕಾರವಾರದ ದಂಪತಿಗೆ ೫ ಲ.ರೂ.ಗೆ ಮಗು ಮಾರಾಟ

ಅಪರಿಚಿತರೊಬ್ಬರು ಬೆಳಗಾವಿಯ ಮಕ್ಕಳ ರಕ್ಷಣಾ ಸಮಿತಿಗೆ ಫೋನ್‌ ಕರೆ ಮಾಡಿ ತಿಳಿಸಿದ್ದರಿಂದ ಪ್ರಕರಣ ಬಯಲಾಗಿದೆ. ಮಕ್ಕಳ ರಕ್ಷಣಾ ಸಮಿತಿ ಸದಸ್ಯರು ನೀಡಿದ ಸುಳಿವಿನ ಮೇರೆಗೆ ಬೆಳಗಾವಿ ನಗರ ಪೊಲೀಸರ ನೆರವಿನಿಂದ ಮಗುವನ್ನು ರಕ್ಷಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ವ್ಯವಹಾರದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ. ಸದ್ಯ ಮಗುವನ್ನು ಸ್ವಾಮಿ ವಿವೇಕಾನಂದ ಮಕ್ಕಳ ದತ್ತು ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ.

ಇದನ್ನೂ ಓದಿ : ಉ. ಕ. ಜಿಲ್ಲೆಯ ರೈತನಿಂದ ಕೋರ್ಟ್ ಹಾಲ್ ನಲ್ಲಿ ಲಂಚ ಪಡೆಯುತ್ತಿದ್ದ ಅಧಿಕಾರಿ ಅಂದರ್

ಏತನ್ಮಧ್ಯೆ, ಇದು ಮೂರು ರಾಜ್ಯಗಳ ಆರೋಪಿಗಳನ್ನು ಒಳಗೊಂಡಿರುವ ಅಪರಾಧ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಪ್ರಧಾನ ಕಚೇರಿಯಿಂದ ಅನುಮತಿ ಬಂದ ನಂತರ ನೆರೆಯ ರಾಜ್ಯಗಳ ಪೊಲೀಸರ ಸಹಾಯವನ್ನು ಪಡೆಯಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಳಗಾವಿ ಪೊಲೀಸ್ ಕಮಿಷನರೇಟ್‌ನ ತಂಡ ಗುರುವಾರ ಉತ್ತರ ಕನ್ನಡಕ್ಕೆ ಭೇಟಿ ನೀಡಿದೆ. ಎರಡೂ ಜಿಲ್ಲೆಗಳ ವಿಶೇಷ ತಂಡಗಳ ಸಮನ್ವಯದೊಂದಿಗೆ ಪ್ರಕರಣದ ತನಿಖೆ ನಡೆಯಲಿದೆ.  ಇದು ಒಂದೇ ವ್ಯವಹಾರವೇ ಅಥವಾ ಮಕ್ಕಳ ಮಾರಾಟದ ದಂಧೆಯ ಭಾಗವೇ ಎಂಬುದು ತನಿಖೆಯಿಂದ ತಿಳಿದುಬರಲಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ :  ಉಳ್ಳವರಿಗೊಂದು, ಬಡವರಿಗೊಂದು ಕಾನೂನಾ ?