ಉಡುಪಿ (Udupi): ಕೊಡವೂರಿನ ಮಹತೋಬಾರ ಶ್ರೀ ಶಂಕರ ನಾರಾಯಣ ದೇವಸ್ಥಾನ ಮತ್ತು ನೃತ್ಯ ನಿಕೇತನ ಸಂಯೋಜನೆಯಲ್ಲಿ ಸೋಮವಾರ ರಾತ್ರಿ ವಸಂತ ಮಂಟಪದಲ್ಲಿ ನಡೆದ ‘ನೃತ್ಯ ಶಂಕರ’ ೬೩ನೇ ಸಾಪ್ತಾಹಿಕ ಸರಣಿಯಲ್ಲಿ ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ (Sirsi) ತಾಲೂಕಿನ ಬಿಸಲಕೊಪ್ಪ ಮೂಲದ ಅನಘಾ ಹೆಗಡೆ ತನ್ನ ಭರತನಾಟ್ಯ (bharatnatyam) ಪ್ರೌಢಿಮೆ ಪ್ರದರ್ಶಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಆರಂಭದಲ್ಲಿ ವಿಘ್ನ ನಿವಾರಕ ಗಣಪತಿಯನ್ನು ಪ್ರಾರ್ಥಿಸುತ್ತ, ನಟರಾಜನಿಗೆ ಪುಷ್ಪಾಂಜಲಿ ನೃತ್ಯ ಸಮರ್ಪಿಸಿ, ಭರತನಾಟ್ಯ (bharatnatyam) ಆರಂಭಿಸಿದರು. ಬಳಿಕ ರಾಗ್ ಸರಸ್ವತಿ ಮತ್ತು ಆದಿ ತಾಳದಲ್ಲಿ ಮಧುರೈ ಆರ್. ಮುರಳೀಧರನ್ ರಚಿಸಿರುವ ಕೃತಿಗೆ ಅನಘಾ ಹೆಜ್ಜೆ ಹಾಕುತ್ತ, ತಮ್ಮಲ್ಲಿರುವ ಪ್ರತಿಭೆ ಅನಾವರಣಗೊಳಿಸಿದರು. ವಿಷ್ಣುವಿನ ಮಹಿಮೆ ಸಾರುವ ದಶಾವತಾರ ನೃತ್ಯ, ಶಿವ ತಾಂಡವ ನೃತ್ಯ, ರಾಮಾಯಣ ಕಥೆ ಆಧಾರಿತ ಕನಕದಾಸ ರಚನೆಯ ‘ಏನೆಂದಳೇನೆಂದಳು ನಿನ್ನೊಳು ಸೀತೆ ಹನುಮಯ್ಯ’ ಹಾಡಿಗೆ ನೃತ್ಯ, ದೇವಿಯ ಮಹಿಮೆ ಪ್ರಶಂಸಿಸುವ ರಕ್ತ ಬೀಜಾಸುರನ ಸಂಹಾರ ನೃತ್ಯ, ಅಂತಿಮವಾಗಿ ತಿಲ್ಲಾನದಲ್ಲಿ ರಾಗ ಬೃಂದಾವನೀಯ ಮತ್ತು ಆದಿ ತಾಳದಲ್ಲಿ ಡಾ. ಎಂ. ಬಾಲಮುರಳೀಕೃಷ್ಣ (M. Balamuralikrishna) ಅವರ ಸಂಯೋಜನೆಯ ನೃತ್ಯ ಪ್ರದರ್ಶಿಸಿದ ಅನಘಾ, ನೃತ್ಯ ಕಲಾ ಪ್ರೌಢಿಮೆ ಪ್ರದರ್ಶಿಸಿ ಮನ ಸೆಳೆದರು.

ಇದನ್ನೂ ಓದಿ :  ಧನ್ವಿತಾಗೆ ಕರಾವಳಿ ಕಾವಲು ಪಡೆಯಿಂದ ಸನ್ಮಾನ

ಕೊಡವೂರಿನ ನೃತ್ಯನಿಕೇತನದ ಕಲಾವಿದೆ ಹಾಗೂ ವಿದ್ಯಾರ್ಥಿನಿ ಅನಘಾ ಹೆಗಡೆ, ಉಡುಪಿಯ ಎಲ್.ಎಂ. ಹೆಗಡೆ ಹಾಗೂ ವಿದ್ಯಾ ಹೆಗಡೆ ದಂಪತಿ ಪುತ್ರಿ. ಉಡುಪಿಯ ಎಂಜಿಎಂ ಕಾಲೇಜಿನಲ್ಲಿ (MGM College) ಬಿಎಸ್ಸಿ ಮುಗಿಸಿ, ಮಣಿಪಾಲದಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಾರೆ. ಬಾಲ್ಕದಲ್ಲೇ ನೃತ್ಯದ ಕುರಿತು ಒಲವು ಹೊಂದಿದ್ದ ಅವರು, ೬ನೇ ವಯಸ್ಸಿನಿಂದಲೇ ನೃತ್ಯನಿಕೇತನ (nritya niketan) ಸಂಸ್ಥೆಯ ವಿದ್ವಾನ್ ಸುಧೀರ್ ರಾವ್ ಕೊಡವೂರು ಮತ್ತು ವಿದುಷಿ ಮಾನಸಿ ಸುಧೀರ್ ಅವರಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಐದು ವರ್ಷದಿಂದ ಸಂಸ್ಥೆಯ ನೃತ್ಯ ತಂಡದಲ್ಲಿರುವ ಅವರು, ವಿವಿಧ ಸಂದರ್ಭಗಳಲ್ಲಿ ರಾಷ್ಟ್ರೀಯ ಮಟ್ಟದ ಅನೇಕ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ವಿದುಷಿ ವಿನುತಾ ಎಂ. ಆಚಾರ್ಯ ಹಾಗೂ ವಿದುಷಿ ವಸಂತಲಕ್ಷ್ಮೀ ಹೆಬ್ಬಾರ್ ಮಾರ್ಗದರ್ಶನದಲ್ಲಿ ಕರ್ನಾಟಕ ಸಂಗೀತವನ್ನೂ ಕಲಿಯುತ್ತಿದ್ದಾರೆ. ೨೦೨೨ರಲ್ಲಿ ಭರತನಾಟ್ಯದ ಶ್ರೀ ವಿದ್ವತ್ ಪೂರ್ಣಗೊಳಿಸಿದ್ದು, ಇದೇ ಸೆ.೨೩ರಂದು ಅಂತಿಮ ವಿದ್ವತ್ ಪರೀಕ್ಷೆ ಬರೆಯಲಿದ್ದಾರೆ.

ಇದನ್ನೂ ಓದಿ : ಪಾಳುಬಿದ್ದ ಅಂಗನವಾಡಿ ಕಟ್ಟಡ ನವೀಕರಣ