ಭಟ್ಕಳ ಡೈರಿ ವರದಿ

ಭಟ್ಕಳ: ಕನ್ನಡದ ಕಂಪು, ನಾಡು-ನುಡಿಯ ಅಭಿಮಾನ ಹಾಗೂ ಸಾಂಸ್ಕೃತಿಕ ಸಂಭ್ರಮಕ್ಕೆ ವೇದಿಕೆ ಸಜ್ಜಾಗುತ್ತಿದೆ. ಶ್ರೀ ಭುವನೇಶ್ವರಿ ಕನ್ನಡ ಸಂಘ (ರಿ.) ಆಸರಕೇರಿ ವತಿಯಿಂದ ೨೯ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ ೧ರಂದು ಭಾನುವಾರ ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆಸಲಾಗಿದೆ.

ಭಟ್ಕಳದ ಆಸರಕೇರಿಯ ನಾಮಧಾರಿ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ ೮ ಗಂಟೆಗೆ ಧ್ವಜಾರೋಹಣ ನೆರವೇರಲಿದೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಕನ್ನಡಾಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಅಣ್ಣಪ್ಪ ಎಸ್. ನಾಯ್ಕ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆಸರಕೇರಿಯ ಶ್ರೀ ನಿಚ್ಛಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನದ ಮಾಜಿ ಅಧ್ಯಕ್ಷ ಅರುಣ ಜಿ. ನಾಯ್ಕ ಭಾಗವಹಿಸಲಿದ್ದಾರೆ. ಸಾಹಿತಿಗಳು ಹಾಗೂ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುರ್ಡೇಶ್ವರದ ಶ್ರೀ ಮಂಜುನಾಥ ಉಮೇಶ ನಾಯ್ಕ ಧ್ವಜಾರೋಹಣ ನೆರವೇರಿಸಲಿದ್ದಾರೆ. ಉದ್ಯಮಿ ನೇತ್ರಾಣಿ ಗಣೇಶ ಗೌರವ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ರಮೇಶ ಪಿ. ನಾಯ್ಕ, ಗುರುಮಠದ ಗೌರವಾಧ್ಯಕ್ಷ ಕೃಷ್ಣ ಎಸ್. ನಾಯ್ಕ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಮಾಜಗಳ ಗಣ್ಯರು ಉಪಸ್ಥಿತರಿರಲಿದ್ದಾರೆ.

ಕನ್ನಡ ಭಾಷೆ, ಸಂಸ್ಕೃತಿ ಮತ್ತು ನಾಡಿನ ಪರಂಪರೆಯನ್ನು ಉಳಿಸಿ ಬೆಳೆಸುವ ಆಶಯದೊಂದಿಗೆ ಸಂಘವು ಸತತವಾಗಿ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿದೆ. ಈ ಬಾರಿಯ ೯ನೇ ವರ್ಷದ ಆಚರಣೆಯೂ ಕನ್ನಡಾಭಿಮಾನಿಗಳ ಪಾಲ್ಗೊಳ್ಳುವಿಕೆಯಿಂದ ಅರ್ಥಪೂರ್ಣವಾಗುವ ನಿರೀಕ್ಷೆಯಿದೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ :

ಆರ್‌ಎಸ್‌ಎಸ್ ಪಥಸಂಚಲನದ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಸಿದ್ಧತೆ

ನ.೧ರ ಆರ್‌ಎಸ್‌ಎಸ್ ಪಥಸಂಚಲನ: ಭಟ್ಕಳ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಪೂರ್ವಭಾವಿ ಸಭೆ