ಶಿರಸಿ (Sirsi): ಮನೆಯಲ್ಲಿಯೇ ಚಿಕ್ಕ ಗ್ರಂಥಾಲಯವನ್ನು (library) ಪ್ರಾರಂಭಿಸಿಕೊಳ್ಳುವುದರಿಂದ ಓದುವ ಹವ್ಯಾಸ ಹೆಚ್ಚುತ್ತದೆ. ಮನೆಗೆ ಬಂದ ಅತಿಥಿಗಳನ್ನೂ ಓದಲು ಪ್ರೇರೆಪಿಸಿದಂತಾಗುತ್ತದೆ. ಪುಸ್ತಕ ಸಂಗ್ರಹ, ಪುಸ್ತಕ ಓದುವ ಹವ್ಯಾಸ ಜೀವನವನ್ನು ಚೈತನ್ಯದಿಂದಿರುವಂತೆ ಮಾಡುತ್ತದೆ ಎಂದು ಪುಸ್ತಕ ಬಿಡುಗಡೆಗೊಳಿಸಿ (book release) ನಿವೃತ್ತ ಶಿಕ್ಷಕ, ಸಾಹಿತಿ ಕೆ.ಆರ್. ಹೆಗಡೆ ಅಮ್ಮಚ್ಚಿ ಹೇಳಿದರು.
ನೆಮ್ಮದಿ ಆವರಣದ ರಂಗಧಾಮದಲ್ಲಿ ನಡೆದ ಪ್ರಜ್ವಲೋತ್ಸವ ಕಾರ್ಯಕ್ರಮದಲ್ಲಿ ಮಹಿಬಾ ಬಿ. ಅವರು ಬರೆದ ‘ಮಧುರ ಗಾನ’ ಪುಸ್ತಕ ಬಿಡುಗಡೆಗೊಂಡಿತು (book release).  ನಾಗೇಶ ಮಧ್ಯಸ್ಥ ಕೃತಿ ಪರಿಚಯ ನಡೆಸಿಕೊಟ್ಟರು. ಲೇಖಕಿ ಮಹಿಮಾ ಬಿ. ತಮ್ಮ ಅನುಭವಗಳನ್ನು ಹಂಚಿಕೊಂಡರು.
ನಂತರದಲ್ಲಿ ನಡೆದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಂತೋಷ ಹೆಗಡೆ ನಿಡಗೋಡು, ಅರ್ಚನಾ ಆರ್ಯಾ ಬೆಂಗಳೂರು (Bengaluru), ಗಾಯತ್ರಿ ಬೋಳಗುಡ್ಡೆ ಯಲ್ಲಾಪುರ (Yellapur) ಇವರನ್ನು ಸನ್ಮಾನಿಸಲಾಯಿತು. ಮಂಜುನಾಥ ಹೆಗಡೆ ಗೋಳಗೋಡ, ವೆಂಕಟೇಶ ಹೆಗಡೆ ಬೆಂಗಳೆ ಇವರಿಗೆ ಕಲಾ ಪೋಷಕ ಗೌರವ ನೀಡಿ ಗೌರವಿಸಲಾಯಿತು.  ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ (cultural program) ದಿವಾಕರ ಕೆರೆಹೊಂಡ ವಿರಚಿತ ‘ಪ್ರತಿಷ್ಠೆಯ ಕಲಹ’ ರೂಪಕ ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು. ಗಾಯಕ ವಿನಾಯಕ ಮುತ್ಮುರ್ಡು ನಡೆಸಿಕೊಟ್ಟ ಸಂತವಾಣಿ- ದಾಸ ವಾಣಿ ಕಾರ್ಯಕ್ರಮವು ನೆರೆದಿದ್ದ ಸಂಗೀತಾಭಿಮಾನಿಗಳನ್ನು ಭಕ್ತಿಯ ಅಲೆಯಲ್ಲಿ ಮುಳುಗೇಳಿಸಿತು.
ಜನಪದ ತ್ರಿಪದಿಗಳ ಕಲರವ: ಈ ಬಾರಿ ಪ್ರಜ್ವಲ ಟ್ರಸ್ಟ್ ಮೂಲ ಜನಪದ ಸಾಹಿತ್ಯಗಳನ್ನು ಪರಿಚಯಿಸುವ ನಿಟ್ಟಿನಲ್ಲಿ  ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನಪದ ತ್ರಿಪದಿಗಳ ಸ್ಪರ್ಧೆ ಕಾರ್ಯಕ್ರಮದಲ್ಲಿ ೨೦ಕ್ಕೂ ಹೆಚ್ಚಿನ ತಂಡಗಳು ಭಾಗವಹಿಸಿ ವಿವಿಧ ಜಾನಪದ ತ್ರಿಪದಿಗಳನ್ನು ಹಾಡಿದರು. ಸ್ಪರ್ಧೆಯ ನಿರ್ಣಾಯಕರಾಗಿ ನಿರಂಜನ ಕುಗ್ವೆ, ಶ್ರೀಲತಾ ಭಟ್ ಹೆಗ್ಗರ್ಸಿಮನೆ, ಪೂರ್ಣಿಮಾ ಹೆಬ್ಬಾರ ಆಗಮಿಸಿದ್ದರು.  ರಾಜರಾಜೇಶ್ವರಿ ಯುವಕ ಮಂಡಳ ಸೋಂದಾ ಪ್ರಥಮ, ರಾಜರಾಜೇಶ್ವರಿ ಮಹಿಳಾ ಮಂಡಳ ಹುಳಗೋಳ ದ್ವಿತೀಯ, ಗಾನ ಗರತಿಯರು ತೃತೀಯ ಹಾಗೂ ಸಾಯಿ ಗ್ರುಪ್ ಶಿರಸಿ ಚತುರ್ಥ ಬಹುಮಾನವನ್ನು ತಮ್ಮದಾಗಿಸಿಕೊಂಡರು.