ಭಟ್ಕಳ (Bhatkal): ಇಲ್ಲಿನ ಹೆಬಳೆಯ ಪುರಾಣಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಶೇಡಬರಿ ದೇವಸ್ಥಾನದ ಇಪ್ಪತ್ತೈದನೆಯ ವರ್ಷದ ದೀಪೋತ್ಸವ (Deepotsava) ಕಾರ್ಯಕ್ರಮ ಎರಡು ದಿನಗಳ ಕಾಲ ಸಂಭ್ರಮದಿಂದ ನಡೆದು ಸಂಪನ್ನಗೊಂಡಿತು. ವಿಶೇಷವಾಗಿ ರಜತ ಮಹೋತ್ಸವದ ಈ ವರ್ಷ ಎರಡೂ ದಿನವೂ ಮಧ್ಯಾಹ್ನ ಮಹಾಪೂಜೆಯ ಬಳಿಕ ಮಹಾ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ಅಂದಾಜು ಐದು ಸಾವಿರ ಭಕ್ತಾದಿಗಳು ಶ್ರೀ ದೇವರ ಪ್ರಸಾದ ಭೋಜನ ಸ್ವೀಕರಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸಂಜೆ ಸೂರ್ಯಾಸ್ತದ ಬಳಿಕ ದೀಪಗಳನ್ನು ಬೆಳಗಿಸುವ ಮೂಲಕ ದೀಪಾರಾಧನೆ ನಡೆಯಿತು. ಮೊದಲ ದಿನ ದೇವಸ್ಥಾನದ ಆಡಳಿತ ಮತ್ತು ದೀಪೋತ್ಸವ (Deepotsava) ಸಮಿತಿಯ ಪ್ರಮುಖರು ದೀಪವನ್ನು ಬೆಳಗಿ ಚಾಲನೆ ನೀಡಿದರೆ, ಎರಡನೆಯ ದಿನ ಶಿರಾಲಿ ಚಿತ್ರಾಪುರ ಮಹಾ ಸಂಸ್ಥಾನದ ಪ್ರತಿನಿಧಿಗಳು ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಜಟಕಾ ದೇವರ ಮುಂದೆ ಇಡಲಾದ ಬೃಹತ್ ತುಪ್ಪದ ದೀಪವನ್ನು ಬೆಳಗಿಸಿ ಚಾಲನೆ ನೀಡಿದರು. ದೀಪೋತ್ಸವ ಸಮಿತಿಯ ಪದಾಧಿಕಾರಿಗಳು ಮಹಾಸತಿ ಗುಡಿಯ ಮುಂದೆ ಇಟ್ಟಿರುವ ತುಪ್ಪದ ದೀಪವನ್ನು ಬೆಳಗಿದರೆ, ಬಂದಂತಹ ಮಹಿಳೆಯರು ವೀರ(ಪ್ರಧಾನ) ದೇವರ ಮುಂದೆ ಇಟ್ಟಿರುವ ತುಪ್ಪದ ದೀಪವನ್ನು ಬೆಳಗಿಸಿದರು. ಅನಂತರ ನೆರೆದಿದ್ದ ಸಾವಿರಾರು ಭಕ್ತಾದಿಗಳು ದೇವಸ್ಥಾನದ ಪ್ರಾಂಗಣದ ಒಳಗಡೆ, ಹೊರಗೆ ಹಾಗೂ ಸುತ್ತಲೂ ಇಟ್ಟಿರುವ ಮಣ್ಣಿನ ಹಣತೆಯ ದೀಪಗಳನ್ನು ಬೆಳಗಿಸಿ ತಮ್ಮ ಮನದ ಇಷ್ಟಾರ್ಥಗಳನ್ನು ಕೋರಿಕೊಳ್ಳುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿತ್ತು. ಕೆಲವು ಭಕ್ತರು ಹಿತ್ತಾಳೆಯ ಚಿಕ್ಕ-ಚಿಕ್ಕ ಕಾಲ್ದೀಪವನ್ನು ಹೊಸದಾಗಿ ತಂದು ಮುಖ್ಯ ಅರ್ಚಕರ ಬಳಿ ದೇವರ ಮುಂದೆ ಸಂಕಲ್ಪ ಮಾಡಿಸಿ ಆ ದೀಪವನ್ನು ಬೆಳಗಿ ಅದನ್ನು ದೇವಸ್ಥಾನಕ್ಕೆ ತಮ್ಮ ದೇಣಿಗೆಯಾಗಿ ನೀಡಿದರು.

ಇದನ್ನೂ ಓದಿ :  ಕಾರಾಗೃಹದಲ್ಲಿ ಶ್ರೀ ಭಗವದ್ಗೀತಾ ಅಭಿಯಾನ

ಎಲ್ಲಿ ನೋಡಿದರೂ ದೀಪಗಳ ಸಾಲು. ಇನ್ನೊಂದೆಡೆ ದೇವಸ್ಥಾನದ ಸುತ್ತಲೂ ಝಗಮಗಿಸುವ ವಿದ್ಯುತ್ ದೀಪಗಳ ಅಲಂಕಾರ. ಹಸಿರು ಸಿಡಿಮದ್ದುಗಳ ಪ್ರದರ್ಶನದಲ್ಲಿ ಆಕಾಶದೆತ್ತರಕ್ಕೆ ಚಿಮ್ಮುವ ಬೆಳಕಿನ‌ ರಂಗೋಲಿ. ಪ್ರಾಂಗಣದಲ್ಲಿ ಬೃಹತ್ ರಂಗೋಲಿಯ ಚಿತ್ತಾರ. ಇದು ಬಂದಂತಹ ಎಲ್ಲ ಭಕ್ತಾದಿಗಳ ಆಕರ್ಷಣೆಯ ಕೇಂದ್ರವಾಗಿತ್ತು. ಪಂಚಾಯತ್ ಸದಸ್ಯ ರಾಮ ಹೆಬಳೆಯವರ ಕಲ್ಪನೆಯ ರೇಖೆಯಲ್ಲಿ ಚಿತ್ರಿತವಾದ ಬೃಹತ್ ರಂಗೋಲಿಯ ಚಿತ್ತಾರಕ್ಕೆ ಸ್ಥಳೀಯ ಯುವಕ-ಯುವತಿಯರು ಪ್ರತಿವರ್ಷದಂತೆ ಈ ವರ್ಷವೂ ಬಣ್ಣ ತುಂಬುವಲ್ಲಿ ಪಾಲ್ಗೊಂಡರು.

ಇದನ್ನೂ ಓದಿ : ಕಾರು ಅಪಘಾತಕ್ಕೀಡಾಗಿ ಶಿಕ್ಷಕ ಸಾವು

ನಿರಂತರವಾಗಿ ಇಪ್ಪತ್ತೈದು ವರ್ಷಗಳ ಕಾಲ ಕ್ಷೇತ್ರದ ದೀಪೋತ್ಸವಕ್ಕೆ ತಲಾ ಒಂದೊಂದು ದೀಪದ ಎಣ್ಣೆ ಡಬ್ಬಗಳನ್ನು ಸೇವೆಯಾಗಿ ನೀಡುತ್ತಾ ಬಂದಿರುವ ಮೂವರು ಭಕ್ತರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಶ್ರೀಧರ ನಾಯ್ಕ ಬುಧವಂತರಮನೆ, ಶಂಕರ ನಾಯ್ಕ ಯಕ್ಷೇಶ್ವರಿ ಪಾತ್ರೆ ಸೆಟ್ ಹಾಗೂ ಶ್ರೀಧರ ನಾಯ್ಕ ಗೋಯ್ದಮನೆ ಇವರುಗಳನ್ನು ಆಡಳಿತ ಮತ್ತು ದೀಪೋತ್ಸವ ಸಮಿತಿಯವರು ಶಾಲು ಹೊದಿಸಿ, ಹಾರ ಹಾಕಿ, ಫಲಪುಷ್ಪ ನೀಡಿ ದೇವರ ಸನ್ನಿಧಿಯಲ್ಲಿ ಸನ್ಮಾನಿಸಲಾಯಿತು.

ಇದನ್ನೂ ಓದಿ : Karate/ ಪದಕ ಬಾಚಿದ ವಿದ್ಯಾರ್ಥಿಗಳು

ರಾತ್ರಿಯಲ್ಲಿ ಎರಡೂ ದಿನ ಸ್ಥಳೀಯ ಭಕ್ತಾದಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಗ್ರಾಮದ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ ಕೂಡ ನಡೆಯಿತು. ಈ ಎರಡೂ ದಿನಗಳ ಮೊದಲಿನ ದಿನ ದೀಪೋತ್ಸವ ಸಮಿತಿಯವರಿಂದ ಇಪ್ತತ್ತೈದನೆಯ ವರ್ಷದ ದೀಪೋತ್ಸವದ ಪ್ರಯುಕ್ತ ನವ ಮಹಾಸತಿಯರುಗಳಲ್ಲಿ ಪ್ರಮುಖರಾದ ಸಣ್ಣ ಮಾಸ್ತಿ ಮತ್ತು ದೊಡ್ಡ ಮಾಸ್ತಿ ಅಮ್ಮನವರಿಗೆ ಬೆಳ್ಳಿಯ ಮುಖವಾಡಗಳನ್ನು ಸಮರ್ಪಿಸಲಾಯಿತು. ಈ ಎಲ್ಲಾ ಕಾರ್ಯಕ್ರಮದಲ್ಲೂ ದೇವಸ್ಥಾನದ ಆಡಳಿತ ಮಂಡಳಿಯವರು ಮತ್ತು ದೀಪೋತ್ಸವ ಸಮಿತಿಯವರು ಹಾಜರಿದ್ದರು. ಸಾವಿರಾರು ಭಕ್ತರು ಪಾಲ್ಗೊಂಡರು.

ಇದನ್ನೂ ಓದಿ : Beach tragic/ ಶಿಕ್ಷಕರ ವಿರುದ್ಧ ಪ್ರಕರಣ; ಮುರ್ಡೇಶ್ವರ ಬೀಚ್‌ ಬಂದ್‌