ಭಟ್ಕಳ (Bhatkal) : ರಂಜಾನ ಪ್ರಯುಕ್ತ ಭಟ್ಕಳದ ಮುಖ್ಯರಸ್ತೆಯಲ್ಲಿ ೧೫ ದಿನಗಳವರೆಗೆ ಸಂಚಾರ ಬಂದ್‌ ಮಾಡಿ ಅಂಗಡಿ ಮಂಗಟ್ಟುಗಳನ್ನು (Ramzan shops) ಹಾಕುವುದಕ್ಕೆ ಹಿಂದೂ ಜಾಗರಣಾ ವೇದಿಕೆ (HJV) ವಿರೋಧ ವ್ಯಕ್ತಪಡಿಸಿದೆ. ಇದಕ್ಕೆ ಪುರಸಭೆಯೇ (Municipality) ವ್ಯವಸ್ಥೆ ಮಾಡಿಕೊಡುತಿದ್ದು, ಇದರಿಂದ ನಿತ್ಯ ಸಾವಿರಾರು ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ರಂಜಾನ ಮಾರುಕಟ್ಟೆಯನ್ನು ಖಾಲಿ ಮೈದಾನಕ್ಕೆ ಸ್ಥಳಾಂತರ ಮಾಡುವಂತೆ ಹಿಂದೂ ಜಾಗರಣಾ ವೇದಿಕೆ ಆಗ್ರಹಿಸಿದೆ.
ಮಂಗಳವಾರ ಗೋ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆ ವೇಳೆ ರಂಜಾನ್‌ ಮಳಿಗೆ ಕುರಿತಂತೆಯೂ ತಹಶೀಲ್ದಾರ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದ ರಂಜಾನ್ ಸಮಯದಲ್ಲಿ ಭಟ್ಕಳ ಪಟ್ಟಣ ಭಾಗದ ಪರಸಭೆ ವ್ಯಾಪ್ತಿಯಲ್ಲಿ ಬರುವ ಮುಖ್ಯರಸ್ತೆಯನ್ನು ೧೫ ದಿನಗಳವರೆಗೆ ಬಂದ್ ಮಾಡಿ ಭಟ್ಕಳ ಪುರಸಭೆಯು ತಾತ್ಕಾಲಿಕ ಅಂಗಡಿ ಮುಗಟ್ಟುಗಳನ್ನು (Ramzan shops) ಹಾಕಲು ಅವಕಾಶ ಮಾಡಿಕೊಡುತ್ತಿದೆ. ಇದರಿಂದ ಮುಖ್ಯ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಅತೀಯಾದ ಕಿರಿಕಿರಿ ಹಾಗೂ ತೊಂದರೆ ಅನುಭವಿಸುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ವರ್ಷದಿಂದ ವರ್ಷಕ್ಕೆ ಅಂಗಡಿ ಮುಗ್ಗಟ್ಟಿನ ಸಂಖ್ಯೆ ಬಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಸರಿಸುಮಾರು ೫೦೦ಕ್ಕೂ ಹೆಚ್ಚು ಅಂಗಡಿಗಳನ್ನು ಮುಖ್ಯ ರಸ್ತೆ, ಪುಟ್‌ಪಾತ್‌ಗಳ ಮೇಲೆ ಹಾಕಿ ಯಾವುದೇ ವಾಹನಗಳನ್ನು ಸಂಚರಿಸದಂತೆ ನಿರಂತರ ೧೫ ದಿನಗಳ ಕಾಲ ಬಂದ್ ಮಾಡಲಾಗುತ್ತದೆ. ನಗರ ಭಾಗದ ಹಾಗೂ ನಗರ ಭಾಗಕ್ಕೆ ಹೊಂದಿಕೊಂಡಿರುವ ಗ್ರಾಮಗಳ ಸಾರ್ವಜನಿಕರು, ಶಾಲಾ ವಾಹನಗಳು, ಸರ್ಕಾರಿ ನೌಕರಸ್ಥರು, ಖಾಸಗಿ ಉದ್ಯೋಗಿಗಳು, ಸಾರ್ವಜನಿಕರು ಹಾಗೂ ವಾಹನ ಸವಾರರು ಸಾವಿರಾರು ಸಂಖ್ಯೆಯಲ್ಲಿ ಪ್ರತಿನಿತ್ಯ ಇದೇ ಮುಖ್ಯ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಅವರೆಲ್ಲ ಪ್ರತಿವರ್ಷ ಈ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಸೌಹಾರ್ದತೆಯ ದೃಷ್ಟಿಯಿಂದ ಸಾರ್ವಜನಿಕರು ಮೂರ್ನಾಲ್ಕು ದಿನಗಳ ಕಾಲ ಮುಖ್ಯ ರಸ್ತೆಯನ್ನು ಈ ರೀತಿ ಬಂದ್ ಮಾಡುವುದನ್ನು ಸಹಿಸಬಹುದು. ಆದರೆ ಹಲವು ದಿನಗಳ ಕಾಲ ಸಂಜೆ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ರಸ್ತೆಯ ಮೇಲೆ ಜಮಾಯಿಸಿ, ಅತಿ ಹೆಚ್ಚು ಜನದಟ್ಟಣೆಗೆ ಕಾರಣವಾಗುತ್ತಿದೆ.  ಭಟ್ಕಳವು ಕೋಮು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಹಾಗೂ ಈ ಅಂಗಡಿ ಮುಗ್ಗಟ್ಟುಗಳಿಗೆ ಎಲ್ಲಾ ಕೋಮಿನ ಗ್ರಾಹಕರು ಬರುತ್ತಿರುವುದರಿಂದ ಪ್ರತಿಬಾರಿ ಸಣ್ಣ ಪುಟ್ಟ ಕ್ಷುಲ್ಲಕ ವಿಷಯಕ್ಕೂ ಜಗಳ, ಹೊಡೆದಾಟದಂತಹ ಪ್ರಕರಣಗಳು ನಡೆಯುತ್ತಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಜಿಲ್ಲಾಧಿಕಾರಿ ಗಮನಕ್ಕೆ ತಂದು, ಕೂಲಂಕುಷವಾಗಿ ಪರಿಶೀಲಿಸಬೇಕು. ಸಾರ್ವಜನಿಕರ ಹಾಗೂ ವಾಹನ ಸವಾರರ ಹಿತದೃಷ್ಠಿಯಿಂದ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಪ್ರಸ್ತುತ ವರ್ಷದಿಂದಲೇ ರಂಜಾನ್ ಸಮಯದಲ್ಲಿ ಹಾಕುವ ಅಂಗಡಿ ಮುಗ್ಗಟ್ಟುಗಳನ್ನು ಸೂಕ್ತ ಮೈದಾನದಲ್ಲಿ ಹಾಕುವಂತೆ ಸೌಹಾರ್ದಯುತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.