ಭಟ್ಕಳ: ದೇಶದ ನಾಗರಿಕರಿಗೆ ಕೈಗೆಟಕುವ ದರದಲ್ಲಿ ಸಾಮಾಜಿಕ ಸುರಕ್ಷೆ ಒದಗಿಸುವ ಮೂಲಕ ಅವರ ಭವಿಷ್ಯಕ್ಕೆ ಆಧಾರ ಒದಗಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಭಾರತ ಸರ್ಕಾರದ ಸಾಮಾಜಿಕ ಸುರಕ್ಷಾ ಯೋಜನೆಯ ಕುರಿತು (Financial Literacy) ತಾಲೂಕಿನ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಆಂದೋನದ ಮಾದರಿಯಲ್ಲಿ ಅಭಿಯಾನ ನಡೆಯುತ್ತಿದೆ.
ತಾಲೂಕಿನಲ್ಲಿ ಆರ್ಥಿಕ ಸಾಕ್ಷರತಾ ಕೇಂದ್ರದ (Financial Literacy) ಮೂಲಕ ವಿವಿಧ ಬ್ಯಾಂಕುಗಳು, ಸಂಜೀವಿನಿ ಒಕ್ಕೂಟ, ಗ್ರಾಮ ಪಂಚಾಯತಗಳ ಸಹಯೋಗದಲ್ಲಿ ಜರುಗುತ್ತಿರುವ ಜನಜಾಗೃತಿ ಸಭೆಗಳಿಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಗಳ ಮಹತ್ವ, ಸಿಗುವ ಸೌಲಭ್ಯಗಳು, ವಿಮೆಯ ಪ್ರಿಮಿಯಂ ಮೊತ್ತ, ಅವಧಿ ದೊರೆಯುವ ಸುರಕ್ಷೆ, ಕ್ಲೇಮು ಅರ್ಜಿ ಸಲ್ಲಿಸುವ ವಿಧಾನಗಳ ಕುರಿತು ವಿವರವಾಗಿ ಮಾಹಿತಿ ನೀಡಲಾಗುತ್ತಿದೆ.
ಇದನ್ನೂ ಓದಿ : ಸಿದ್ದಾಪುರ ಸ್ವಾತಂತ್ರ್ಯ ಯೋಧರ ಅನಾವರಣ
ವಿಶೇಷವಾಗಿ ಗ್ರಾಮೀಣ ವಾಸಿಗಳನ್ನು ಆಕರ್ಷಿಸುತ್ತಿರುವ ವಾರ್ಷಿಕವಾಗಿ ರೂ. ೩೩೦ ಭರಣಕ್ಕೆ ಸಿಗುವ ೨ ಲಕ್ಷ ವಿಮೆ, ವಾರ್ಷಿಕವಾಗಿ ರೂ. ೧೨ ಭರಣಕ್ಕೆ ಸಿಗುವ ರೂ. ೨ ಲಕ್ಷಗಳ ಜೀವ ವಿಮೆ ಸೌಲಭ್ಯಗಳು ಬಡ ವರ್ಗದವರಿಗೆ ವರದಾನವಾಗಿವೆ. ವಾರ್ಷಿಕ ವಿಮಾ ರಕ್ಷೆ ಅವಧಿಯು ಪ್ರತಿವರ್ಷ ಮೇ ತಿಂಗಳ ೩೧ ನೇ ತಾರೀಖಿಗೆ ಕೊನೆಗೊಳ್ಳುವ ಅವಧಿಯ ಪ್ರತಿವರ್ಷ ಜೂನ್ ೧ ಕ್ಕೆ ಆರಂಭವಾಗುವ ಈ ಸೌಲಭ್ಯ ಬ್ಯಾಂಕ್ ಖಾತೆಯ ಮೂಲಕ ಸ್ವಯಂ ಕಡಿತದ ಸೌಲಭ್ಯವೂ ಇದೆ.
ಇದನ್ನೂ ಓದಿ : ತ್ರಿವರ್ಣ ಧ್ವಜ ನಿರಂತರ ಆಕಾಶದೆತ್ತರಕ್ಕೆ ಹಾರಲಿ
ಭಟ್ಕಳ ತಾಲೂಕಿನಲ್ಲಿ ಈಗಾಗಲೇ ೫ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಜನಾಂದೋಲನ ಸಭೆಯನ್ನು ಪೂರೈಸಲಾಗಿದೆ. ವಿವಿಧ ಗ್ರಾಮ ಪಂಚಾಯತಗಳಲ್ಲಿ ವ್ಯಾಪಕ ಮಳೆಯ ಮಧ್ಯದಲ್ಲೂ ಸಭೆಯನ್ನು ಸಂಘಟಿಸಿ ಜನಜಾಗೃತಿ ಮಾಡಿಸಲಾಗಿದೆ. ಶಿರಾಲಿಯಲ್ಲಿ ಬ್ಯಾಂಕ್ ಆಫ್ ಬರೋಡದ ವ್ಯವಸ್ಥಾಪಕ ರಾಜೇಂದ್ರ ಪ್ರಭು, ಪಂಚಾಯತ ಅಭಿವೃದ್ದಿ ಅಧಿಕಾರಿ ನಾಗರಾಜ ವಿ. ಮತ್ತು ಸ್ವಸಹಾಯ ಸಂಘಗಳ ಒಕ್ಕೂಟದ ಪ್ರತಿನಿಧಿಗಳ ಸಹಯೋಗದಲ್ಲಿ ಸಭೆಯನ್ನು ಸಂಘಟಿಸಲಾಗಿದೆ.
ಬೇಂಗ್ರೆಯಲ್ಲಿ ಕೆನರಾ ಬ್ಯಾಂಕ್ ಶಿರಾಲಿಯ ಅಧಿಕಾರಿ ಪರಮೇಶ್ವರ ನಾಯ್ಕ, ಗ್ರಾ.ಪಂ. ಅಧ್ಯಕ್ಷೆ ಪ್ರಮೀಳಾ ಡಿ’ಕೋಸ್ತಾ, ಸಂಜಿವಿನಿ ಒಕ್ಕೂಟದ ಮೇಘನಾ ಕಾಮತ, ತನುಜಾ ನಾಯ್ಕ, ಗ್ರಾ.ಪಂ. ಲೆಕ್ಕ ಸಹಾಯಕ ಶಂಕರ ದೇವಾಡಿಗ ಹಾಜರಿದ್ದು ಸಭೆ ನಡೆಸಿಕೊಟ್ಟಿದ್ದಾರೆ. ಮುಟ್ಟಳ್ಳಿಯಲ್ಲಿ ಗ್ರಾ.ಪಂ. ಅಧ್ಯಕ್ಷೆ ರಜನಿ ನಾಯ್ಕ, ಸದಸ್ಯರು, ಪಂ.ಅ.ಅಧಿಕಾರಿ ರಾಜೇಶ್ವರಿ ಚಂದಾವರ, ಭಟ್ಕಳ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಸನೀಲ ಪೈ ಹಾಜರಿದ್ದು ಸಭಿಕರಿಗೆ ಮಾಹಿತಿ ನೀಡಿದ್ದಾರೆ. ಮುಂಡಳ್ಳಿಯಲ್ಲಿ ಕರ್ನಾಟಕ ವಿಕಾಸ ಬ್ಯಾಂಕ್ ವ್ಯವಸ್ಥಾಪಕ ಶ್ರೀನಿಧಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಲೋಕೇಶ್ವರ ಗೊಂಡ, ಪಂಚಾಯತ ಸದಸ್ಯರ ಸಮ್ಮುಖದಲ್ಲಿ ಯಶಸ್ವಿಯಾಗಿ ಸಭೆ ಸಂಘಟಿಸಲಾಗಿತ್ತು. ಯಲ್ವಡಿಕವೂರನಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಪಾರ್ವತಿ ಗೊಂಡ, ಪಂಚಾಯತ ಸದಸ್ಯರು, ಪಂಚಾಯತ ಅಭಿವೃದ್ಧಿ ಅಧಿಕಾರಿ ಜಯಂತಿ ನಾಯ್ಕ, ಯುನಿಯನ್ ಬ್ಯಾಂಕ್ ವ್ಯವಸ್ಥಾಪಕ ಧನರಾಜ್, ಸಂಜಿವಿನಿ ಒಕ್ಕೂಟದ ಪ್ರತಿನಿಧಿಗಳು ಒಗ್ಗೂಡಿ ಸಭೆ ಸಂಘಟಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ : ಭಟ್ಕಳದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ
ಗ್ರಾಮೀಣ ಭಾಗದಲ್ಲಿ ಪೂರ್ವಭಾವಿಯಾಗಿ ವಿವಿಧ ಗ್ರಾ.ಪಂ.ಗಳಿಗೆ ಭೇಟಿ ನೀಡಿ ಉತ್ತರ ಕನ್ನಡ ಲೀಡ್ ಬ್ಯಾಂಕ್ ವ್ಯವಸ್ಥಾಪಕರ ನಿರ್ದೇಶನದಂತೆ ಸಾರ್ವಜನಿಕರನ್ನು ಒಗ್ಗೂಡಿಸಿ ಪ್ರತಿ ಸಭೆಯಲ್ಲೂ ಯೋಜನೆಯ ಕುರಿತು ಭಟ್ಕಳ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕಿ ಗೀತಾ ನಾಯ್ಕ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದಾರೆ. ಆಗಸ್ಟ ೩೧ ರ ತನಕ ತಾಲೂಕಿನ ಎಲ್ಲಾ ೧೬ ಗ್ರಾ.ಪಂ.ಗಳ ಮಟ್ಟದಲ್ಲೂ ವೇಳಾಪಟ್ಟಿಯಂತೆ ಜನಜಾಗೃತಿ ಸಭೆಗಳನ್ನು ಜನಾಂದೋಲನದ ಮಾದರಿಯಲ್ಲಿ ನಡೆಸಲಾಗುತ್ತಿದೆ. ನಾಗರಿಕರಿಗೆ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ನೌಕರರ ವರ್ಗಕ್ಕೂ ನೆರವಾಗುತ್ತಿರುವ ಈ ಯೋಜನೆ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ : ರಾಷ್ಟ್ರಧ್ವಜಾರೋಹಣ ಮಾಡದ ರಾಷ್ಟ್ರೀಕೃತ ಬ್ಯಾಂಕ್
ಭಟ್ಕಳ ತಾಲೂಕು ಪಂಚಾಯತನಲ್ಲಿ ಕಚೇರಿ ಹೊಂದಿರುವ ಆರ್ಥಿಕ ಸಾಕ್ಷರತಾ ಕೇಂದ್ರದ ಮೂಲಕ ಸಾರ್ವಜನಿಕರಿಗೆ ಬ್ಯಾಂಕಿಂಗ್ ಸೇವೆ, ಸುರಕ್ಷಿತ ಹೂಡಿಕೆ, ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ದೊರಕುವ ಸೇವೆಗಳ ಬಗ್ಗೆ, ವಿವಿಧ ರೀತಿಯ ಖಾತೆ ತೆರೆಯುವ ಬಗ್ಗೆ ಭೇಟಿ ನೀಡುವ ನಾಗರಿಕರಿಗೆ ಮಾಹಿತಿ ನೀಡಲಾಗುತ್ತಿದೆ. ಸ್ವ-ಸಹಾಯ ಸಂಘಗಳು, ಸಂಘ ಸಂಸ್ಥೆಗಳು ಸಭೆ ಸೇರಿ ಅಹ್ವಾನಿಸಿದರೆ ಅಲ್ಲಿಗೂ ತೆರಳಿ ಆರ್ಥಿಕ ಸಾಕ್ಷರತೆ ಮೂಲಕ ಮಾಹಿತಿ ನೀಡಲಾಗುತ್ತಿದೆ. ಭಾರತ ಸರ್ಕಾರದ ಸಾಮಾಜಿಕ ಸುರಕ್ಷಾ ಯೋಜನೆಗಳಾದ ಪ್ರಧಾನ ಮಂತ್ರಿ ಜನ್‌ಧನ್ ಯೋಜನೆ, ಸುಕನ್ಯಾ ಸಮೃದ್ಧಿ, ಪ್ರಧಾನ ಮಂತ್ರಿ ಬೆಳೆವಿಮೆ, ಅಟಲ್ ಪಿಂಚಣಿ ಯೋಜನೆಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಸಂಬಂಧಿಸಿದ ಅರ್ಜಿ ನಮೂನೆಗಳಿದ್ದು, ಅರ್ಜಿ ಭರ್ತಿಗೂ ನೆರವಾಗಲಾಗುವುದು. ಅಗತ್ಯವಿರುವವರು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.–ಗೀತಾ ನಾಯ್ಕ, ಆರ್ಥಿಕ ಸಾಕ್ಷರತಾ ಸಮಾಲೋಚಕಿ, ಭಟ್ಕಳ. ಮೊಬೈಲ್ ನಂ: ೯೦೩೬೨೦೯೪೧೭.