ಭಟ್ಕಳ (Bhatkal) : ರಸ್ತೆ ಅವ್ಯವಸ್ಥೆ, ಸೇತುವೆ, ಆಟದ ಮೈದಾನ, ಪಂಚಾಯತ ಕಟ್ಟಡ ಸಮಸ್ಯೆ, ಕಾಡುಪ್ರಾಣಿಗಳ ಕಾಟ, ಮಳೆ ಹಾನಿ, ಪ್ರವಾಹ, ಬಸ್ ಕೊರತೆ…. ಹೀಗೆ ಗ್ರಾಮದ ಹಲವು ಸಮಸ್ಯೆಗಳನ್ನು ಜನರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದು ಸಚಿವ ಮಂಕಾಳ ವೈದ್ಯರ (Mankal Vaidya) ಜನಸ್ಪಂದನ (Janaspandana) ಸಭೆಯಲ್ಲಿ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಇಲ್ಲಿನ ಮಾರುಕೇರಿ ಗ್ರಾಮ ಪಂಚಾಯತನಲ್ಲಿ ಸಚಿವರ ೫ನೇ ಜನಸ್ಪಂದನ (Janaspandana) ಸಭೆ ಹಾಗೂ ಜನರ ಬಳಿಗೆ ಸಚಿವ ಮಂಕಾಳ ವೈದ್ಯರ ನಡೆ ಕಾರ್ಯಕ್ರಮದಲ್ಲಿ ಗ್ರಾಮದ ಸಮಸ್ಯೆಗಳು ಅನಾವರಣಗೊಂಡವು. ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ತಮ್ಮೂರಿನ ಸಮಸ್ಯೆಗಳನ್ನು ಬಿಚ್ಚಿಟ್ಟರು.
ಇದನ್ನೂ ಓದಿ : ಗ್ರಾಪಂ ಮಟ್ಟದಲ್ಲೂ ವಸತಿಗೃಹ ನಿರ್ಮಾಣ
ಪತ್ರಕರ್ತ ರಾಘವೇಂದ್ರ ಹೆಬ್ಬಾರ ಊರಿನ ಅಭಿವೃದ್ಧಿಯ ಬಗ್ಗೆ ಪಟ್ಟಿ ಮಾಡಿ, ಆಗಬೇಕಾದ ಕೆಲಸದ ಬಗ್ಗೆ ಮಾತನಾಡಿದರು. ‘ಕನಿಷ್ಠ ೧೦೦ ಕೋಟಿ ರೂ. ಅನುದಾನವನ್ನು ಸರಕಾರದಿಂದ ಬಿಡುಗಡೆ ಮಾಡಿಕೊಡಬೇಕು. ಇಲ್ಲಿನ ಪ್ರಮುಖ ರಸ್ತೆಯ ಕಾಂಕ್ರೀಟಿಕರಣ ವ್ಯವಸ್ಥೆ, ಸೇತುವೆ, ಆಟದ ಮೈದಾನ, ಪಂಚಾಯತ ಕಟ್ಟಡಕ್ಕೆ ಅನುದಾನ ಒದಗಿಸಿಕೊಡಬೇಕು. ಕಾಡು ಪ್ರಾಣಿಗಳ ದಾಳಿ, ಮಳೆಗಾಲದಲ್ಲಿ ಹೊಳೆಗೆ ನೀರು ನುಗ್ಗಿ ಆದ ನಷ್ಟದ ಪರಿಹಾರ ಮಾಡಿಕೊಡಬೇಕಿದೆ. ಕೃಷಿ ಜಮೀನು ಈ ಭಾಗದ ಜನರ ದುಡಿಮೆಯ ಮೂಲಾಧಾರವಾಗಿದೆ. ಅವರ ಜಮೀನು ರಕ್ಷಣೆಗೆ ಮಂಗ, ಹಂದಿ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಬೇಕಾಗಿದೆ. ಈ ಭಾಗಕ್ಕೆ ದಿನಕ್ಕೆ ಕೇವಲ ಒಂದು ಬಸ್ ವ್ಯವಸ್ಥೆಯಿದೆ. ಇದನ್ನು ಬದಲಿಸಿ ಗಂಟೆಗೆ ಒಂದರಂತೆ ಬಸ್ ವ್ಯವಸ್ಥೆ ಮಾಡಿಕೊಟ್ಟಲ್ಲಿ ವಿದ್ಯಾರ್ಥಿಗಳಿಗೆ ಪ್ರಯಾಣಿಕರಿಗೆ ಅನೂಕೂಲಕರವಾಗಲಿದೆ ಎಂದರು.
ಇದನ್ನೂ ಓದಿ : ಶಿರಾಲಿ ಸಹಿತ ೧೫ ಗ್ರಾಪಂಗಳಲ್ಲಿ ಸಂತೆ, ಜಾತ್ರೆ ನಿಷೇಧ
ಗ್ರಾಮಸ್ಥ ಮಹೇಶ ಗೊಂಡ ಮಾತನಾಡಿ, ಊರಿನಲ್ಲಿ ಬಿ.ಎಸ್.ಎನ್.ಎಲ್. ನೆಟ್ವರ್ಕ್ ವ್ಯವಸ್ಥೆಯನ್ನು ಸರಿಪಡಿಸಿಕೊಡಬೇಕು. ಈ ಭಾಗದ ಬಹುತೇಕ ಜನರು ಎಸ್.ಟಿ. ಗೊಂಡ ಸಮುದಾಯದವರಾಗಿದ್ದಾರೆ. ಕಳೆದ ಬಾರಿ ನಮಗೆ ಎಸ್.ಟಿ. ಸರ್ಟಿಫಿಕೇಟ್ ವಿತರಿಸುವುದಾಗಿ ಶಾಸಕರಾಗಿದ್ದ ವೇಳೆ ತಿಳಿಸಿದ್ದರೂ ಇನ್ನು ತನಕ ನಮಗೆ ಸರ್ಟಿಫಿಕೇಟ್ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದನಿಗೂಡಿಸಿದ ವಸಂತ ಗೊಂಡ ಮಾರುಕೇರಿ, ೨೪ ಗಂಟೆಗಳಲ್ಲಿ ಗಂಟೆಯಲ್ಲಿ ಜಾತಿ ಸರ್ಟಿಫಿಕೇಟ್ ಮಾಡಿಕೊಡುವ ಭರವಸೆ ನೀಡಿದ್ದೀರಿ. ಇನ್ನು ತನಕ ಸರ್ಟಿಫಿಕೇಟ್ ಸಿಗದ ಹಿನ್ನೆಲೆ ಭಟ್ಕಳದಲ್ಲಿನ ಎಲ್ಲಾ ಗೊಂಡ ಸಮಾಜದ ಜನರಿಗೆ ಸಮಸ್ಯೆ ಆಗುತ್ತಿದೆ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ, ಉದ್ಯೋಗಸ್ಥರಿಗೆ ಕೆಲಸದಲ್ಲಿ ಇದರಿಂದ ಸಮಸ್ಯೆ ಎದುರಿಸುವಂತಾಗಿದೆ ಎಂದರು.
ಇದನ್ನೂ ಓದಿ : ಭಟ್ಕಳ ಸಹಿತ ೭ ತಾಲೂಕುಗಳಲ್ಲಿ ನೋಂದಣಿ ಕೇಂದ್ರ ಸ್ಥಾಪನೆ
ಹಿರಿಯರಾದ ಪ್ರಮೋದಾ ಶೆಟ್ಟಿ, ಸಾರ್ವಜನಿಕರ ಅನೂಕೂಲಕ್ಕಾಗಿ ಪ್ರಮುಖ ರಸ್ತೆಯನ್ನು ಮಾಡಿಕೊಡುವಂತೆ ಸಚಿವರ ಮನವಿ ಮಾಡಿದರು. ಗ್ರಾಮಸ್ಥ ಮಂಜುನಾಥ ಮೊಗೇರ ವಿದ್ಯುತ್ ಸಮಸ್ಯೆ ಬಗ್ಗೆ ಗಮನಸೆಳೆದರು. ನಮ್ಮಲ್ಲಿ ವಿದ್ಯುತ್ ಕಡಿತ ಸಮಸ್ಯೆಯನ್ನು ಪದೇ ಪದೇ ಜನರು ಎದುರಿಸುವಂತಾಗಿದೆ. ಇದಕ್ಕೊಂದು ಶಾಶ್ವತ ಪರಿಹಾರ ಬೇಕಿದೆ ಎಂದರು. ಹಳ್ಳಿಯಿಂದ ಬರುವ ವ್ಯಾಪಾರಿಗಳಿಗೆ ಭಟ್ಕಳದ ಭಾನುವಾರ ಸಂತೆಯಲ್ಲಿ ಅಂಗಡಿ ಹಾಕಲು ಸೂಕ್ತ ವ್ಯವಸ್ಥೆ ನೀಡುತ್ತಿಲ್ಲ. ಸ್ಥಳೀಯರಿಗೆ ಮೊದಲ ಆದ್ಯತೆಯ ಮೇಲೆ ಸರಿಯಾದ ವ್ಯವಸ್ಥೆ ಕಲ್ಪಿಸಿಕೊಡಬೇಕು. ಬೇರೆ ತಾಲೂಕು, ಜಿಲ್ಲೆಯ ವ್ಯಾಪಾರಿಗಳಿಗೆ ಅಂಗಡಿ ಹಾಕಿಸುವಲ್ಲಿ ಪುರಸಭೆ ಮುಂದಿದೆ ಎಂದು ಆರೋಪಿಸಿದರು.
ಇದನ್ನೂ ಓದಿ : ಪ್ರಾಂಶುಪಾಲರಾಗಿ ಮರುನೇಮಕಕ್ಕೆ ಆದೇಶ
ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಉಸ್ತುವಾರಿ ಸಚಿವ ಮಂಕಾಳ ವೈದ್ಯ ‘ಇಲ್ಲಿನ ಸಮಸ್ಯೆಗಳನ್ನು ಜನರಿಂದ ತಿಳಿದಿದ್ದೇನೆ. ಪ್ರಮುಖವಾಗಿ ತೀರಾ ದೊಡ್ಡ ಸಮಸ್ಯೆಯಾಗಿ ಅತಿಕ್ರಮಣ ಜಾಗವಾಗಿದ್ದು ಇದಕ್ಕೆ ನನ್ನ ಶಾಸಕತ್ವದ ಅವಧಿಯಲ್ಲಿ ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ. ೨೦೦೫-೦೬ರಲ್ಲಿ ಕೇಂದ್ರ ಸರಕಾರದಿಂದ ಹಳೆಯ ಅತಿಕ್ರಮಣಕ್ಕೆ ಜಿ.ಪಿ.ಎಸ್. ಮಾಡಿಕೊಡುವಂತೆ ಆದೇಶ ನೀಡಲಾಗಿತ್ತು. ಆದರೆ ೨೦೧೩ರ ತನಕ ಅದನ್ನು ಕಾರ್ಯರೂಪಕ್ಕೆ ತಂದಿಲ್ಲವಾಗಿತ್ತು. ನನ್ನ ಶಾಸಕತ್ವದ ಅವಧಿಯಲ್ಲಿ ಅತಿಕ್ರಮಣದಾರರ ಜಾಗಕ್ಕೆ ಮೊದಲು ಜಿ.ಪಿ.ಎಸ್. ಮಾಡಿಕೊಟ್ಟಿದ್ದೇನೆ. ಅದಾದ ಬಳಿಕ ಮುಂದಿನ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದ್ದೀರಿ. ಈಗ ಮತ್ತೆ ಆಯ್ಕೆ ಮಾಡಿದ್ದೀರಿ ನನ್ನ ಜವಾಬ್ದಾರಿಯನ್ನು ನಾನು ಮರೆಯದೇ ಕೆಲಸ ಮಾಡುತ್ತೇನೆ. ತಾಲೂಕಿನಲ್ಲಿ ಒಟ್ಟು 26 ಸಾವಿರ ಕುಟುಂಬ ಅತಿಕ್ರಮಣ ಜಾಗದಲ್ಲಿದ್ದಾರೆ ಎಂದರು.
ಇದನ್ನೂ ಓದಿ : ಬಿಸಿಎಂ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ಸಾವು
ಇನ್ನು ೨೦೧೩ರ ಪೂರ್ವದಲ್ಲಿ ಯಾವುದೇ ಗೊಂಡ ಸಮುದಾಯದ ಸರ್ಟಿಫಿಕೇಟ್ ನೀಡದೇ ಸ್ಥಗಿತಗೊಂಡಿತ್ತು. ಆದರೆ ಸಮುದಾಯದ ಏಳಿಗೆಯ ಹಿನ್ನೆಲೆ ಅರ್ಧ ಗಂಟೆಯಲ್ಲಿ ಆರ್.ಡಿ. ನಂಬರ ನೀಡಿ ಸರ್ಟಿಫಿಕೇಟ್ ನೀಡಿದ್ದೇನೆ. ಅಂದಿನ ತಹಸೀಲ್ದಾರರ ಮೂಲಕ ವಿತರಿಸಿದ್ದೇವೆ. ಚುನಾವಣೆಯಲ್ಲಿ ಈ ಭಾಗದ ಮೂರು ಬೂತಿನಲ್ಲಿ ನನಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಿದ್ದೀರಿ. ನಿಮ್ಮ ಕೆಲಸ ನಾವೇ ಮಾಡಬೇಕಿದೆ ಹೊರತು ಮುಂದೆ ಯಾರು ಮಾಡುವುದಿಲ್ಲ ಎಂದರು.
ಇದನ್ನೂ ಓದಿ : ಹೊಸ ಆಟೋಗೆ ಪರ್ಮಿಟ್ ನೀಡದಂತೆ ಮನವಿ