ಬೆಳಗಾವಿ: ಬೆಳಗಾವಿ ತಾಲೂಕು ನಾವಗೆ ಬಳಿಯ ಸ್ನೇಹಂ ಟೆಕ್ಸೋ ಟೇಪ್ ಕಂಪನಿ ಕಾರ್ಖಾನೆಯಲ್ಲಿ ಮಂಗಳವಾರ ಸಂಭವಿಸಿದ ಬೆಂಕಿ ಅನಾಹುತದ ದುರಂತದಲ್ಲಿ ಸುಟ್ಟು ಕರಕಲಾದ ಮಾರ್ಕಂಡೇಯ ನಗರದ ಯಲ್ಲಪ್ಪ ಗುಂಡ್ಯಾಗೋಳ ಅವರ ಮೃತದೇಹದ ಸುಟ್ಟು ಕರಕಲಾದ ಅವಶೇಷಗಳನ್ನು ತುಂಬಿಕೊಂಡು ತೆರಳಿದ ಅವರ ತಂದೆ ಕಣ್ಣೀರಿಡುವ ದೃಶ್ಯ ಕರುಳು ಹಿಂಡುವಂತಿತ್ತು(Gut-wrenching).

ವಿಡಿಯೋ ಸಹಿತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್‌ ಮಾಡಲು ಇಲ್ಲಿ ಒತ್ತಿ.

ಮಂಗಳವಾರ ಕೆಲಸಕ್ಕೆ ಹೋಗಿದ್ದ ಮಗ ಮನೆ ಸೇರುತ್ತಾನೆ ಎಂದು ಕಾದು ಕುಳಿತಿದ್ದ ಕುಟುಂಬಸ್ಥರಿಗೆ ಆತನ ಶವವನ್ನು ಸಹ ನೋಡಲು ಸಾಧ್ಯವಾಗಲಿಲ್ಲ. ಲಿಫ್ಟ್ ನಲ್ಲಿ ಸಿಲುಕಿ ಆತನ ಸುಟ್ಟು ಕರಕಲಾದ ಅವಶೇಷಗಳು ಮಾತ್ರ ಸಿಕ್ಕಿದ್ದವು. ಜಿಲ್ಲಾಸ್ಪತ್ರೆಯಲ್ಲಿ ಮಗನ ಮರಣೋತ್ತರ ಪರೀಕ್ಷೆಯ ಮೃತದೇಹದ ಅವಶೇಷಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಮುಚ್ಚಿ ಕುಟುಂಬಸ್ಥರಿಗೆ ನೀಡಲಾಯಿತು. ಕೈ ಚೀಲದಲ್ಲಿ ಮಗನ ಅವಶೇಷಗಳನ್ನು ತೆಗೆದುಕೊಂಡು ಕಣ್ಣೀರು ಹಾಕುತ್ತಾ ತಂದೆ ಸಣ್ಣಗೌಡ ಅಂತ್ಯಕ್ರಿಯೆ ನೆರವೇರಿಸಲು ನಡೆದರು. ಈ ದೃಶ್ಯ ನೋಡುಗರ ಕರುಳು ಹಿಂಡುವಂತಾಯ್ತು(Gut-wrenching). ಕಾರ್ಖಾನೆಯ ಲಿಫ್ಟಿನಲ್ಲಿ ಸಿಲುಕಿ ಮೃತಪಟ್ಟ ಯುವಕನ ಶವ ತೆಗೆದುಕೊಂಡು ಹೋಗಲು ಆಸ್ಪತ್ರೆ ಬಳಿ ಹಲವು ಆಂಬುಲೆನ್ಸ್ ಗಳು ಇದ್ದವು. ಆದರೆ, ಕೈಚೀಲದಲ್ಲಿ ಅವಶೇಷಗಳನ್ನು ಹಾಕಿಕೊಟ್ಟ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ : ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರ್ಮಿಕನ ಶವ ಪತ್ತೆ

ನಾಲ್ವರು ಮಕ್ಕಳು : ಯಲ್ಲಪ್ಪ ಅವರ ತಂದೆಗೆ ನಾಲ್ವರು ಮಕ್ಕಳು. ಯಲ್ಲಪ್ಪ ಮಾತ್ರ ಗಂಡು ಮಗ. ಪಿಯುಸಿ ವಿದ್ಯಾಭ್ಯಾಸ ಮಾಡಿದ್ದ ಯಲ್ಲಪ್ಪ ನಾವಗೆಯ ಸ್ನೇಹಂ ಕಂಪನಿಗೆ ಹೆಲ್ಪರ್ ಕೆಲಸಕ್ಕೆ ಸೇರಿಕೊಂಡು ಕೇವಲ ಮೂರು ತಿಂಗಳಷ್ಟೇ ಕಳೆದಿದೆ. ೧೨ ಸಾವಿರದಂತೆ ಎರಡು ತಿಂಗಳ ಸಂಬಳ ಮಾತ್ರ ಪಡೆದಿದ್ದಾನೆ. ಅಷ್ಟರಲ್ಲಿ ಈ ಅವಘಡ ಸಂಭವಿಸಿದೆ. ಇಡೀ ಮನೆಯ ಜವಾಬ್ದಾರಿ ಹೊತ್ತುಕೊಂಡಿದ್ದ ಯಲ್ಲಪ್ಪ. ಯಲ್ಲಪ್ಪನ ತಂದೆ-ತಾಯಿಗೆ ವಯಸ್ಸಾಗಿದೆ. ಸಹೋದರಿಗೆ ಮದುವೆಯಾಗಿದ್ದು ಇನ್ನಿಬ್ಬರು ಸಹೋದರಿಯರಿಗೆ ಇನ್ನೂ ಮದುವೆಯಾಗಿಲ್ಲ. ಈ ನಿಟ್ಟಿನಲ್ಲಿ ಆರ್ಥಿಕವಾಗಿ ತೊಂದರೆಯಲ್ಲಿರುವ ಯಲ್ಲಪ್ಪ ಅವರ ಕುಟುಂಬಕ್ಕೆ ಕಾರ್ಖಾನೆ ಮಾಲೀಕರು ಸೂಕ್ತ ಪರಿಹಾರ ಒದಗಿಸಬೇಕು ಎಂದು ಜನತೆ ಮನವಿ ಮಾಡಿದ್ದಾರೆ.