ಭಟ್ಕಳ (Bhatkal) : ಸಾಮಾನ್ಯವಾಗಿ ನಿರ್ಗತಿಕರು, ಭಿಕ್ಷುಕರು, ಮಾನಸಿಕ ಅಸ್ವಸ್ಥರು ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು ಅನ್ನುವವರ ಸಂಖ್ಯೆ ತುಂಬಾ ವಿರಳ. ಆದರೆ, ಭಟ್ಕಳದ ನ್ಯಾಯಾಧೀಶರೊಬ್ಬರು (Judge) ಮಾನಸಿಕ ಅಸ್ವಸ್ಥನನ್ನು ಮುತುವರ್ಜಿಯಿಂದ ಆರೈಕೆ ಮಾಡಿ ಮಾನವೀಯತೆ (Humanitarian) ಮೆರೆದಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ರಸ್ತೆಯ ಮೇಲೆ ಹೊಲಸು, ಹರಿದ ಬಟ್ಟೆಯನ್ನು ಹಾಕಿಕೊಂಡು ತಿರುಗಾಡುತ್ತಿದ್ದ ಅಸ್ವಸ್ಥನನ್ನು ಶುದ್ಧ ಬಟ್ಟೆ ಹಾಕಿಸಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ತಾಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ಗುರುವಾರ ನಡೆಯಬೇಕಿದ್ದ ಕಾರ್ಯಕ್ರಮವೊಂದಕ್ಕೆ ತೆರಳಲು ಇಲ್ಲಿನ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ (JMFC) ನ್ಯಾಯಾಧೀಶರು ಸಿದ್ಧರಾಗಿದ್ದರು. ಆಗ ನ್ಯಾಯಾಧೀಶರಿಗೆ ನ್ಯಾಯಾಲಯದ ಎದುರುಗಡೆಯಲ್ಲಿ ಹೊಲಸು ಬಟ್ಟೆ, ಕೈಯಲ್ಲಿ ಐದಾರು ಪ್ಲಾಸ್ಟಿಕ್ ವಸ್ತುಗಳನ್ನು ತುಂಬಿದ ಚೀಲಗಳು, ಹೊಲಸು ಗಡ್ಡ, ಕುರುಚಲು ತೆಲೆಗೂದಲು ಇದ್ದ ಸುಮಾರು ೫೦ ವರ್ಷ ಪ್ರಾಯದ ವ್ಯಕ್ತಿಯೋರ್ವ ನಿಂತುಕೊಂಡಿದ್ದು ಕಣ್ಣಿಗೆ ಬಿದ್ದಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಆತನನ್ನು ನ್ಯಾಯಾಲಯಕ್ಕೆ ಕರೆ ತರುವಂತೆ ಸೂಚಿಸಿದ್ದಾರೆ. ಪೊಲೀಸರು ನ್ಯಾಯಾಧೀಶರ ಆದೇಶ ಮೇರೆಗೆ ಆತನನ್ನು ಕರೆ ತಂದಿದ್ದಾರೆ. ಸ್ಥಳಕ್ಕೆ ಕ್ಷೌರಿಕರನ್ನು ಕರೆಯಿಸಿ ಸ್ಥಳೀಯರು ಹಾಗೂ ಪೊಲೀಸರ ಸಹಾಯದಿಂದ ತಲೆ ಕೂದಲು ಕಟಿಂಗ್ ಹಾಗೂ ಶೇವಿಂಗ್ ಮಾಡಿಸಿದ್ದಾರೆ. ಆರೋಗ್ಯ ಇಲಾಖೆಯವರನ್ನು ಕೆರೆಯಿಸಿ ಆರೋಗ್ಯ ತಪಾಸಣೆ ಮಾಡಿಸಿದ್ದಾರೆ.
ಇದನ್ನೂ ಓದಿ : ಮತ್ತೊಂದು ಗೋ ಸಾಗಾಟ ಪ್ರಕರಣ; ಕಳ್ಳತನದ್ದೊ.. ಅಕ್ರಮವೊ?
ಈತನ ಬಳಿ ನ್ಯಾಯಾಧೀಶರು ವಿಚಾರಿಸಿದಾಗ, ತಾನು ಉಡುಪಿ (Udupi) ಜಿಲ್ಲೆಯ ಹಿರಿಯಡ್ಕ ಗ್ರಾಮದ ನಿವಾಸಿ ನಾಗಭೂಷಣ ಆಚಾರಿ ಎಂದು ಹೇಳಿಕೊಂಡಿದ್ದಾನೆ. ಅಕ್ಕ ಹಾಗೂ ಅಣ್ಣ ಇದ್ದಾರೆ ಎಂದೂ ತಿಳಿದು ಬಂದಿದೆ. ಸುಮಾರು ೧೦ ವರ್ಷಗಳ ಹಿಂದೆ ಮನೆಯಿಂದ ಕೋಪಗೊಂಡು ಹೊರ ಬಿದ್ದಿದ್ದ. ಭಟ್ಕಳ, ಮುರ್ಡೇಶ್ವರ (Murdeshwar) ಹಾಗೂ ಹೊನ್ನಾವರದಲ್ಲಿ (Honnavar) ಬಸ್ ನಿಲ್ದಾಣ ಮತ್ತು ರಸ್ತೆಯ ಬದಿಯಲ್ಲಿಯೇ ದಿನ ಕಳೆಯುತ್ತಿದ್ದ ಎಂದು ಆತ ಹೇಳಿಕೊಂಡಿದ್ದಾನೆ. ೭ ವರ್ಷಗಳ ಹಿಂದೆ ಅಪೆಂಡಿಕ್ಸ್ ಆಪರೇಶನ್ ಆಗಿದೆ ಎಂದು ಹೊಟ್ಟೆಯಲ್ಲಿ ಹಾಕಲಾಗಿದ್ದ ಹೊಲಿಗೆಯನ್ನು ತೋರಿಸಿದ್ದಾನೆ. ಆತನ ಹೊಟ್ಟೆಯ ಮೇಲೆ ಒಂದು ಗಾಯವಾಗಿದೆ. ಅದು ಆಪರೇಶನ್ ನಿಂದ ಆಗಿರುವ ಗಾಯ ಎಂದು ಹೇಳಿಕೊಂಡಿದ್ದಾನೆ. ಅದರಿಂದ ನೋವು ಇಲ್ಲ ಎಂದೂ ಹೇಳುತ್ತಾನೆ. ಇದನ್ನೆಲ್ಲವನ್ನು ಕಂಡು ನ್ಯಾಯಾಧೀಶರ ಮನಸ್ಸು ಕರಗಿದೆ. ಎಷ್ಟೇ ಹೇಳಿದರೂ ಬುದ್ದಿ ಮಾತು ಕೇಳದ ಆತನ ಮನವೊಲಿಸಿ, ಆತನನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ಭಟ್ಕಳ ವೃತ್ತದ ಬಳಿ ಟೂರಿಸ್ಟ್ ಕಾರು ನಿಲುಗಡೆಗೆ ವಿರೋಧ
ಆತನ ಆರೈಕೆಯಲ್ಲಿ ಪಿ.ಎಸ್.ಐ. ಶಿವಾನಂದ, ಸಮಾಜ ಸೇವಕ ಮಂಜು ಮುಟ್ಠಳ್ಳಿ, ವಕೀಲರು, ನ್ಯಾಯಾಲಯದ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ಪೌರ ಕಾರ್ಮಿಕರು ಹಾಗೂ ವಿಶ್ವನಾಥ ಸೇರಿದಂತೆ ಹಲವರು ಶ್ರಮಿಸಿದ್ದಾರೆ. ಭಟ್ಕಳದಲ್ಲಿ ಕಳೆದ ೪ ವರ್ಷಗಳಿಂದ ಯಾರಿಗೂ ತೊಂದರೆ ಕೊಡದೆ ತಿರುಗಾಡುತ್ತಿದ್ದ ಈತನನ್ನು ಈ ಹಿಂದೆ ಆಸ್ಪತ್ರೆಗೆ ಸೇರಿಸಬೇಕು ಎಂದು ಹಲವಾರು ಬಾರಿ ನೋಡಿದ್ದರೂ ಸಾಧ್ಯವಾಗಿರಲಿಲ್ಲ. ನ್ಯಾಯಾಧೀಶರ ಮಾನವೀಯತೆಗೆ (Humanitarian) ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇದರ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : ಕುಸಿದು ಬಿದ್ದು ಕೃಷಿಕ ಸಾವು