ಭಟ್ಕಳ (Bhatkal): ಐ.ಆರ್.ಬಿ. ಅಧಿಕಾರಿಗಳು ಭಟ್ಕಳದಲ್ಲಿ ಯಾವ ರೀತಿ ಕಾಮಗಾರಿ (IRB work) ನಡೆಯುತ್ತದೆ ಎನ್ನುವ ಚಿತ್ರಣವನ್ನು ಭಟ್ಕಳ ತಾಲೂಕು ನಾಗರಿಕರ ಹಿತರಕ್ಷಣಾ ಹೋರಾಟ ವೇದಿಕೆ ಮುಖಂಡರಿಗೆ ಸ್ಪಷ್ಟೀಕರಣ ನೀಡಬೇಕು. ಇಲ್ಲವಾದರೆ ಜಿಲ್ಲೆಯಾದ್ಯಂತ ಹೋರಾಟಕ್ಕೆ ಕರೆ ನೀಡುತ್ತೇವೆ. ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುತ್ತೇವೆ ಎಂದು ಭಟ್ಕಳ ತಾಲೂಕು ನಾಗರಿಕರ ಹಿತರಕ್ಷಣಾ ಹೋರಾಟ ವೇದಿಕೆ ಅಧ್ಯಕ್ಷ ಸತೀಶ ಕುಮಾರ ಎಚ್ಚರಿಕೆ ನೀಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಬುಧವಾರದ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಿನ್ನೆ ಭಟ್ಕಳದಲ್ಲಿ ಒಂದೂವರೆ ತಾಸು ಸುರಿದ ಮಳೆಗೆ ರಂಗಿನಕಟ್ಟೆಯ ರಾಷ್ಟ್ರೀಯ ಹೆದ್ದಾರಿ (National Highway) ಸಂಪೂರ್ಣ ಜಾಲಾವೃತಗೊಂಡಿತ್ತು. ಅನೇಕ ಮನೆಗಳಿಗೆ ನೀರು ನುಗ್ಗಿದೆ. ಇದಕ್ಕೆಲ್ಲ ಹೊಣೆ ಯಾರು? ಈ ಹಾನಿಯನ್ನು ಯಾರು ಭರಿಸುತ್ತಾರೆ? ಈ ವ್ಯಾಪ್ತಿಯಲ್ಲಿ ಎಲ್ಲೂ ಸಂಪೂರ್ಣವಾದಂತಹ ಕಾಮಗಾರಿ ಮುಗಿದಿರುವ ಒಂದೇ ಒಂದು ಉದಾಹರಣೆ ಇಲ್ಲ. ಇದೊಂದು ಖೇದಕರ ವಿಷಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಮಾಜಿ ಎಮ್ಮೆಲ್ಸಿ ಶುಭಲತಾ ಅಸ್ನೋಟಿಕರ ನಿಧನ
ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಅನಾಹುತದ ಕುರಿತಂತೆ ಸಹಾಯಕ ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗೆ ಮನವಿ ನೀಡಿ ಸ್ಥಳ ವೀಕ್ಷಣೆ ಮಾಡುವಂತೆ ಅಗ್ರಹಿಸಿದ್ದೇವು. ಬಳಿಕ ಆಗಿನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆ ಹೆಚ್ಚಿನ ಮುತುವರ್ಜಿ ವಹಿಸಿ ಜಿಲ್ಲಾ ಮಟ್ಟದ ಗಣ್ಯರು ಮತ್ತು ನ್ಯಾಷನಲ್ ಹೈವೆ ಅಧಿಕಾರಿಗಳ ತಂಡ ರಚನೆ ಮಾಡಿದ್ದರು. ಅವರೊಂದಿಗೆ ಖುದ್ದು ಜಿಲ್ಲಾಧಿಕಾರಿ ಬಸ್ ಮುಖಾಂತರ ಕಾರವಾರದಿಂದ (Karwar) ಭಟ್ಕಳ ಗಡಿ ಭಾಗದ ತನಕ ತೆರಳಿ ಸ್ಥಳ ಪರಿಶೀಲನೆ ಮಾಡಿದ್ದರು. ಸ್ಥಳೀಯ ಸಮಸ್ಯೆಯನ್ನು ಜನರಿಂದ ಪಡೆದು ವರದಿ ರಚನೆ ಮಾಡಿದ್ದರು. ಆದರೆ ವಾರದೊಳಗೆ ಜಿಲ್ಲಾಧಿಕಾರಿ ವರ್ಗಾವಣೆಯಾದ ಹಿನ್ನೆಲೆ ರಚನೆಯಾಗಿದ್ದ ವರದಿ ಅಲ್ಲೇ ನೆನೆಗುದಿಗೆ ಬಿತ್ತು. ಅದಾದ ಬಳಿಕ ಬಂದ ಯಾವ ಜಿಲ್ಲಾಧಿಕಾರಿ ಕೂಡ ಮುತುವರ್ಜಿ ವಹಿಸದೇ ಇರುವುದು ಬೇಸರದ ವಿಷಯ ಎಂದರು.
ಇದನ್ನೂ ಓದಿ : ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಗೆ ಚಾಲನೆ
ಐ.ಆರ್.ಬಿ.ಯ ಅವೈಜ್ಞಾನಿಕ ಕಾಮಗಾರಿಯಿಂದ ಅಂಕೋಲಾದ ಶಿರೂರಿನಲ್ಲಿ ಬೃಹತ್ ಗುಡ್ಡ ಕುಸಿತವಾಗಿ ೮ ಮಂದಿ ಸಾವನ್ನಪ್ಪಿದ್ದಾರೆ. ಅವರ ಕುಟುಂಬದವರು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ಎದುರಾಗಿದೆ. ಆ ಎಂಟು ಜನರ ಸಾವಿಗೆ ಐ.ಆರ್.ಬಿ ಹಾಗೂ ನ್ಯಾಷನಲ್ ಹೈವೆ ಅಧಿಕಾರಿಗಳು ನೇರ ಹೊಣೆಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಹೊನ್ನಾವರದ ಕರ್ನಲ್ ಗುಡ್ಡ ಹಾಗೂ ಗುಣವಂತೆ ಸಮೀಪದ ಕೆಳಗಿನೂರು ಗುಡ್ಡ ಅಪಾಯಕಾರಿಯಾಗಿದೆ. ಭಟ್ಕಳ ಭಾಗದವರು ಕಾರವಾರದ ಜಿಲ್ಲಾ ಕೇಂದ್ರಕ್ಕೆ ತೆರಳುವುದೆಂದರೆ ನಮ್ಮ ಮನೆ ಮಂದಿಯೆಲ್ಲಾ ಭಯ ಪಡುವ ಸ್ಥಿತಿ ಎದುರಾಗಿದೆ ಎಂದರು.
ಇದನ್ನೂ ಓದಿ : ಸೆಪ್ಟೆಂಬರ್ ೨೫ರಂದು ವಿವಿಧೆಡೆ ಅಡಿಕೆ ಧಾರಣೆ
ತಂಜೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾತನಾಡಿ, ಈ ಬಾರಿಯ ನಮ್ಮ ಸಭೆಯ ತೀರ್ಮಾನದಂತೆ ರಸ್ತೆ ಅಗಲೀಕರಣದ ಸಮಸ್ಯೆ ಇಲ್ಲಿಗೆ ಮುಕ್ತಾಯವಾಗಬೇಕು. ಈ ಬಗ್ಗೆ ಜಿಲ್ಲಾ ಹಾಗೂ ತಾಲೂಕಾಡಳಿತ ಹೆಚ್ಚಿನ ಮುತುವರ್ಜಿವಹಿಸಿ ವಿಶೇಷವಾಗಿ ಭಟ್ಕಳ ತಾಲೂಕಿನಲ್ಲಿ ರಸ್ತೆ ಅಗಲೀಕರಣದ ಸಮಸ್ಯೆಗಳನ್ನು ಪರಿಹರಿಸಬೇಕು. ತಾಲೂಕಿನ ಯಾವ ಯಾವ ಭಾಗದಲ್ಲಿ ೩೫ ಮೀಟರ್, ೪೫ ಮೀಟರ್, ಚರಂಡಿ, ಸರ್ವಿಸ್ ರಸ್ತೆ , ಫ್ಲೈ ಓವರ್, ರೋಪ್ ವೇ ಇವೆಲ್ಲದರ ಮಾಹಿತಿ ತಿಳಿಸಬೇಕು. ಕಾಮಗಾರಿಗಳೆಲ್ಲ ಸಮಪರ್ಕವಾಗಿ ಜನರಿಗೆ ಅನುಕೂಲವಾಗುವಂತೆ ನಡೆಯಬೇಕು. ಈ ಬಗ್ಗೆ ಎಲ್ಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಹೋರಾಟ ಸಮಿತಿಯನೊಳಗೊಂಡಂತೆ ನಿಯೋಗ ರಚಿಸಿಕೊಂಡು ಎಂ.ಪಿ, ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಬಳಿ ತೆರಳಿ ಸಮಸ್ಯೆ ಪರಿಹಾರಕ್ಕೆ ಒತ್ತಡ ಹೇರುವ ತೀರ್ಮಾನ ವೇದಿಕೆಯಿಂದ ತೆಗೆದುಕೊಂಡಿದ್ದೇವೆ ಎಂದರು.
ವಿಡಿಯೋ ಸಹಿತ ಇದನ್ನೂ ಓದಿ : ಲಾರಿ ಸಹಿತ ಚಾಲಕನ ಮೃತದೇಹ ಪತ್ತೆ
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಅಲ್ತಾಫ್ ಖರೂರಿ, ಹೆದ್ದಾರಿ ಹೋರಾಟ ಸಮಿತಿ ಸಂಚಾಲಕ ರಾಜೇಶ ನಾಯಕ, ಕಾರ್ಯದರ್ಶಿ ಇಮ್ರಾನ್ ಲಂಕಾ, ಮಜ್ಲಿಸೆ ಇಸ್ಲಾ ಒ ತಂಜೀಮ್ ನ ಮೊಹಮ್ಮದ್ ಖತೀಬ್, ಕಾರ್ಯದರ್ಶಿ ಎಂ.ಜೆ.ರಖೀಬ್, ರಾಬಿತಾ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಉದ್ಯಮಿ ಡಾ.ಅತಿಕುರ್ರಹ್ಮಾನ್, ಎಮ್.ಡಿ.ನಾಯ್ಕ, ರಾಮನಾಥ ಬಳಗಾರ, ಪ್ರಭಾಕರ ನಾಯ್ಕ, ಟಿ.ಡಿ.ನಾಯ್ಕ, ಪಾಂಡುರಂಗ ನಾಯ್ಕ ಮುಂತಾದವರು ಇದ್ದರು.
ಇದನ್ನೂ ಓದಿ : ಉದ್ಯಮಿ ಕೊಲೆ ಆರೋಪಿ ಶವವಾಗಿ ಪತ್ತೆ