ಭಟ್ಕಳ (Bhatkal): ಉತ್ತರ ಕನ್ನಡ (Uttarakannada) ಜಿಲ್ಲೆಯ ಅಂಕೋಲಾ (Ankola) ತಾಲೂಕಿನ ಶಿರೂರು ಗ್ರಾಮದ ಗುಡ್ಡಕುಸಿತದಲ್ಲಿ (Landslide) ಸಿಲುಕಿದವರ ಪತ್ತೆ ಕಾರ್ಯಾಚರಣೆ ಮುಂದುವರಿಸಲು ಭಟ್ಕಳ ನಾಮಧಾರಿ (Namadhari) ಸಮಾಜದ ವತಿಯಿಂದ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶಿರೂರು ಗ್ರಾಮದ ಗುಡ್ಡಕುಸಿತದ (landslide) ದುರ್ಘಟನೆಯಲ್ಲಿ ಅನೇಕರು ಸಾವನ್ನಪ್ಪಿದ್ದಾರೆ. ಸಾವು ನೋವು ಸಂಭವಿಸಿದವರ ಕುಟುಂಬವು ದುಃಖದ ಮಡುವಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಅದರಲ್ಲಿ ಕೆಲವರ ಶವ ಸಿಕ್ಕಿದೆ. ಆದರೆ ನಾಮಧಾರಿ ಸಮಾಜದ ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಎನ್ನುವವರು ದುರ್ಘಟನೆಯಲ್ಲಿ ನಾಪತ್ತೆಯಾಗಿದ್ದಾರೆ. ಅವರು ಇನ್ನೂ ಸಹ ಪತ್ತೆಯಾಗಿಲ್ಲ. ಈ ದುರ್ಘಟನೆಗೆ ಐಆರ್‌ಬಿ (IRB infrastructure) ಕಂಪನಿಯ ಅವೈಜ್ಞಾನಿಕ ಮತ್ತು ಅನಿಯೋಜಿತ ರಸ್ತೆ ಕಾಮಗಾರಿಯೇ ಕಾರಣವಾಗಿದೆ. ಗುಡ್ಡಗಳ ನೈಸರ್ಗಿಕ ರಚನೆಗೆ ಧಕ್ಕೆ ನೀಡುವ ರೀತಿಯ ನಿರ್ವಹಣಾ ಕೆಲಸಗಳು, ಪ್ರಕೃತಿಯ ಸಮತೋಲನವನ್ನು ಹಾಳು ಮಾಡಿದ್ದರಿಂದ ಗುಡ್ಡ ಕುಸಿತ ಸಂಭವಿಸಿದೆ. ಈಗಾಗಲೇ ಅಧಿಕಾರಿಗಳು ಪತ್ತೆ ಕಾರ್ಯಾಚರಣೆ ನಿಲ್ಲಿಸಿದ್ದು, ನೊಂದ ಮನೆಯವರಿಗೆ ಮತ್ತು ನಾಮಧಾರಿ ಸಮಾಜದವರಿಗೆ ಬಹಳ ನೋವು ಉಂಟಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಮದುವೆ ಮನೆಯಲ್ಲಿ ಜಗಳ; ಮೂವರಿಂದ ಹಲ್ಲೆ

ಈ ದುರ್ಘಟನೆಯನ್ನು ಗಂಬೀರವಾಗಿ ಪರಿಗಣಿಸಬೇಕು. ಕೂಡಲೇ ನಾಪತ್ತೆಯಾದವರ ಪತ್ತೆ ಕಾರ್ಯಾಚರಣೆಯನ್ನು ಮುಂದುವರೆಸಲು ಸಂಬಂಧಿಸಿದ ಜಿಲಾಡಳಿತಕ್ಕೆ ಸೂಕ್ತ ನಿರ್ದೆಶನ ನೀಡಬೇಕು. ನೊಂದ ಕುಟುಂಬಕ್ಕೆ ಇನ್ನೂ ಹೆಚ್ಚಿನ ಸೂಕ್ತ ಪರಿಹಾರ ನೀಡಲು ಆದೇಶಿಸಬೇಕು. ಜನರ ಜೀವದ ಜೊತೆ ಚಲ್ಲಾಟ ಆಡಿದ ಐಆರ್‌ಬಿ ಕಂಪನಿಯ ವಿರುದ್ಧ ಸೂಕ್ತ ತನಿಖೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ‌.

ಇದನ್ನೂ ಓದಿ : ಸತೀಶ ಸೈಲ್‌ ದೋಷಿ ಎಂದ ನ್ಯಾಯಾಲಯ

ಸಾರದಹೊಳೆ ಹೋಬಳಿಯ ನಾಮಧಾರಿ ಸಮಾಜ ಅಧ್ಯಕ್ಷ ಆರ್.ಕೆ ನಾಯ್ಕ ಮಾತನಾಡಿ, ಐ.ಆರ್.ಬಿ. ಕಂಪನಿಯು ಬಿಳಿ ಆನೆ ಇದ್ದಂತೆ. ಇದರ ಸಂಪರ್ಕ ಎಲ್ಲರಿಗೂ ಸಿಗಲು ಸಾಧ್ಯವಿಲ್ಲ. ಇವರನ್ನು ಬಗ್ಗಿಸಲು ಕೂಡ ಬಹಳ ಕಷ್ಟ ಸಾಧ್ಯ. ಈ ಘಟನೆಯಲ್ಲಿ ಕೇವಲ ಒಬ್ಬಿಬ್ಬರು ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ಕಾರ್ಯಾಚರಣೆ ಆರಂಭಿಸಿದ್ದರು. ಕೆಲವರ ಮೃತ ದೇಹವನ್ನು ಪತ್ತೆ ಹಚ್ಚಲಾಯಿತು. ಇನ್ನೂ ಕೆಲವರ ಮೃತ ದೇಹ ಪತ್ತೆಗೆ ಹಿಂದೇಟು ಹಾಕುತ್ತಿದ್ದಾರೆ. ಇವರ ಮೃತ ದೇಹದ ಪತ್ತೆ ಹಚ್ಚುವ ವ್ಯವಧಾನವೇ ಈ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಇಲ್ಲವಾಗಿದೆ. ಇವರ ಮೃತ ದೇಹ ಮತ್ತೆ ಮಾಡುವ ಮೊದಲೇ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ. ಅರ್ಧಂಬರ್ಧ ಕಾರ್ಯಾಚರಣೆ ಯಾಕೆ ಮಾಡಿದ್ದಾರೆ? ನಾಮಾಧಾರಿ ಸಮುದಾಯದವರನ್ನು ಹಿಮ್ಮೆಟ್ಟುವ ಧೋರಣೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಭಟ್ಕಳ ನ್ಯಾಯಾಧೀಶರ ಮಾನವೀಯ ಕಾರ್ಯ

ಭಟ್ಕಳ ನಾಮಧಾರಿ ಸಮಾಜದ ಮಾಜಿ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಮಾತನಾಡಿ, ಮೃತ ದೇಹದ ಪತ್ತೆ ಕಾರ್ಯಾಚರಣೆ ಆರಂಭ ಮಾಡದೆ ಹೋದರೆ ಕಷ್ಟವಾದೀತು. ನಮ್ಮ ನಾಮಧಾರಿ ಸಮಾಜದ ಯುವಕರು ಬೀದಿಗಿಳಿದರೆ ಈ ಜಿಲ್ಲೆ ಅಥವಾ ಭಟ್ಕಳ ಭಟ್ಕಳವಾಗಿರುವುದಿಲ್ಲ ಎಂದು ಎಚ್ಚರಿಸಿದರು.

ಇದನ್ನೂ ಓದಿ : ನಾಗಶ್ರೀ ಮಾರ್ಷಲ್ ಆರ್ಟ್ಸ್ ವಿದ್ಯಾರ್ಥಿಗಳ ಸಾಧನೆ

ಇಲ್ಲಿಯೂ ಕೇರಳದ ಅರ್ಜುನನ ಮೃತ ದೇಹದ ಪತ್ತೆಗೆ ಇಡೀ ಜಿಲ್ಲಾಡಳಿತ ಸ್ಪಂದಿಸಿತ್ತು. ಎಲ್ಲಿಂದಲೋ ಸಲಕರಣೆಗಳನ್ನು ತರಿಸಿ ಮೃತದೇಹ ಪತ್ತೆ ಮಾಡಿದೆ. ಆದರೆ ಯಾವ ವ್ಯಕ್ತಿ ಸ್ಥಳೀಯ ಶಾಸಕನಿಗೆ ಮತವನ್ನು ನೀಡಿದ್ದಾನೋ, ಆ ಮತದಾರನ ಜೀವಕ್ಕೆ ಯಾವುದೇ ರೀತಿ ಬೆಲೆ ಇಲ್ಲ. ಇದೇ ರೀತಿ ಮುಂದುವರೆದರೆ ಈ ಜಿಲ್ಲೆಯ ಎಲ್ಲ ನಾಮಧಾರಿಗಳು ಒಟ್ಟಾಗಿ ಪ್ರತಿಭಟನೆಗೆ ಇಳಿಯುತ್ತೇವೆ. ಇದು ನಮ್ಮ ವೀಕ್ನೆಸ್ ಅಲ್ಲ. ಮುಂದಿನ ದಿನದಲ್ಲಿ ಇಡೀ ನಮ್ಮ ಭಟ್ಕಳವನ್ನು ಬಂದ್ ಮಾಡಿ ನಾವು ಈ ಹೋರಾಟದಲ್ಲಿ ಭಾಗವಹಿಸುತ್ತೇವೆ. ಎಲ್ಲಿ ತನಕ ಅವರಿಬ್ಬರ ಮೃತ ದೇಹ ಪತ್ತೆ ಹಚ್ಚುವುದಿಲ್ಲವೋ ಅಲ್ಲಿ ತನಕ ನಮ್ಮ ಹೋರಾಟ ನಡೆಯುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ : ಮತ್ತೊಂದು ಗೋ ಸಾಗಾಟ ಪ್ರಕರಣ; ಕಳ್ಳತನದ್ದೊ.. ಅಕ್ರಮವೊ?

ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ತಹಸೀಲ್ದಾರ ಅಶೋಕ ಭಟ್ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ನಾಮಧಾರಿ ಸಮಾಜ ಅಧ್ಯಕ್ಷ ಅರುಣ ನಾಯ್ಕ, ಉಪಾಧ್ಯಕ್ಷ ಎಂ.ಕೆ ನಾಯ್ಕ, ಗೋವಿಂದ ನಾಯ್ಕ, ಸಾರದಹೊಳೆ ಹೋಬಳಿಯ ಪ್ರ. ಕಾರ್ಯದರ್ಶಿ ವಾಸು ನಾಯ್ಕ, ಭಟ್ಕಳ ನಾಮಧಾರಿ ಸಮಾಜದ ಪ್ರಧಾನ ಕಾರ್ಯದರ್ಶಿ ಡಿ.ಎಲ್.ನಾಯ್ಕ, ಎಂ.ಆರ್ ನಾಯ್ಕ, ಭವಾನಿಶಂಕರ, ಗಿರೀಶ ನಾಯ್ಕ, ಸಾರದಹೊಳೆ ಹನುಮಂತ ದೇವಸ್ಥಾನದ ಮೊಕ್ತೇಸರ ಸುಬ್ರಾಯ ನಾಯ್ಕ ಹಾಗೂ ಎರಡೂ ಹೋಬಳಿಯ ನಾಮಧಾರಿ ಮುಖಂಡರು ಉಪಸ್ಥಿತರಿದ್ದರು