ಭಟ್ಕಳ (Bhatkal): ಪಟ್ಟಣದ ಸಾಗರ ರಸ್ತೆಯ ಪೊಲೀಸ್ ವಸತಿಗೃಹಕ್ಕೆ ತೆರಳುವ ರಸ್ತೆಯನ್ನು ಸಾರ್ವಜನಿಕರು ತಿರುಗಾಡದಂತೆ ಪೊಲೀಸರು ಬ್ಯಾರಿಕೇಡ್ ಹಾಕಿ ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ (Mankal Vaidya) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಂದಾಯ ಇಲಾಖೆ ನಡೆಸಿದ ಸರ್ವೆ ಪ್ರಕಾರ ಈ ರಸ್ತೆಯು ಪೊಲೀಸ್ ಇಲಾಖೆಗೆ ಸಂಬಂಧಿಸಿದ್ದು ಎಂದು ಉಪವಿಬಾಗಾಧಿಗಾರಿ ಡಾ. ನಯನಾ ಸಚಿವರಿಗೆ ಮಾಹಿತಿ ನೀಡಿದ್ದರು. ಸಾರ್ವಜನಿಕರ ಮನವಿಗೆ ಸ್ಪಂದಿಸಿ ಸ್ಥಳ ಪರಿಶೀಲನೆ ನಡೆಸಿದ ಸಚಿವ ಮಂಕಾಳ ವೈದ್ಯ (Mankal Vaidya) ಹೊಸದಾಗಿ ನಿರ್ಮಿಸಿದ ವಸತಿ ಗೃಹದ ಹಿಂಭಾಗದಲ್ಲಿ ವಾಸಿಸುವ ಸಾರ್ವಜನಿಕರಿಗೆ ತಿರುಗಾಡಲು ಪ್ರತ್ಯೇಕ ರಸ್ತೆಯ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದರು. ಇದರ ಜೊತೆಗೆ ಶ್ರೀ ಗುರು ಸುಧೀಂದ್ರ ಕಾಲೇಜಿನ ಪಕ್ಕದಲ್ಲಿರುವ ಕಿರಿದಾದ ರಸ್ತೆಯನ್ನು ಕೂಡ ಅಗಲಪಡಿಸಿ ಅಭಿವೃದ್ಧಿ ಪಡಿಸಿಕೊಡುತ್ತೇನೆ ಎಂದರು.

ಇದನ್ನೂ ಓದಿ : ಮತ್ತೊಂದು ಬೈಕ್‌ಗೆ ಹಿಂಬದಿಯಿಂದ ಗುದ್ದಿದ ಬಸ್‌

ಪೊಲೀಸ್ ವಸತಿ ಗೃಹದ ಸುತ್ತಮುತ್ತ ಬೆಳೆದು ನಿಂತ ಗಿಡಗಳನ್ನು ಕತ್ತರಿಸುವಂತೆ ಪುರಸಭೆಯ ಆರೋಗ್ಯಾಧಿಕಾರಿ ಸೋಜಿಯಾ ಅವರಿಗೆ ಸೂಚಿಸಿದರು. ಪೊಲೀಸ್ ವಸತಿ ಗೃಹದಿಂದ ಹೊರಸೂಸುವ ಒಳಚರಂಡಿ ನೀರು ಮನೆಗೆ ನುಗ್ಗಿ ಹಾನಿಯಾಗುತ್ತಿದೆ ಎಂದು ಸ್ಥಳೀಯ ಮಹಿಳೆಯೋರ್ವಳು ಸಚಿವರ ಬಳಿ ಅವಲತ್ತುಕೊಂಡರು. ಅವರ ಮನೆಗೆ ಹೋಗಿ ಪರಿಶೀಲನೆ ನಡೆಸಿದ ಸಚಿವರು ಒಳಚರಂಡಿ ಹಾಗೂ ನೀರು ಸರಬರಾಜು ಮಂಡಳಿಯ ಇಂಜಿನಿಯರನ್ನು ಸ್ಥಳಕ್ಕೆ ಕರೆಯಿಸಿದರು. ಪೊಲೀಸ್ ವಸತಿ ಗೃಹದ ತನಕ ಹೊಸದಾಗಿ ಒಳಚರಂಡಿ ಚೇಂಬರ್ ನಿರ್ಮಿಸಿ ವಸತಿಗೃಹದ ಪ್ರತಿ ಮನೆಯ ಒಳಚರಂಡಿ ಸಂಪರ್ಕವನ್ನು ಚೇಂಬರ್ ನೀಡುವಂತೆ ಸೂಚಿಸಿದರು. ಪೊಲೀಸ್ ವಸತಿ ಗೃಹ ಸುತ್ತ ಕಂಪೌಂಡ ನಿರ್ಮಿಸಿ ಮೈದಾನವನ್ನು ಅಭಿವೃದ್ಧಿಪಡಿಸಲು ಕ್ರಿಯಾ ಯೋಜನೆ ರೂಪಿಸಲು ಡಿವೈಎಸ್ಪಿ ಮಹೇಶ ಅವರಿಗೆ ಸಚಿವರು ಸೂಚಿಸಿದರು.

ಇದನ್ನೂ ಓದಿ : ಉ.ಕ.ದಲ್ಲಿ ಬಹು ಅಂಗಾಂಗ ದಾನಕ್ಕೆ ಕಾಣದ ಉತ್ಸಾಹ

ಭಟ್ಕಳ ಉಪವಿಭಾಗಾಧಿಕಾರಿ ಡಾ. ನಯನಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ, ಜಾಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ರಮೇಶ ನಾಯ್ಕ, ಶಾಹೀನ್, ಸ್ಥಳೀಯರಾದ ಸಚಿನ್ ನಾಯ್ಕ, ಮಂಜಪ್ಪ ನಾಯ್ಕ, ಇತರರು ಇದ್ದರು.

ಇದನ್ನೂ ಓದಿ : ಎದೆಯುರಿ ಕಾಣಿಸಿಕೊಂಡು ಮೃತಪಟ್ಟ ಕೂಲಿ ಕಾರ್ಮಿಕ