ಭಟ್ಕಳ: ತಾಲೂಕಿನಲ್ಲಿ ಆಧಾರ್ ಕಾರ್ಡ್ (Aadhaar card) ಪಡೆಯಲು ಹಾಗೂ ಈಗಾಗಲೇ ಹೊಂದಿರುವ ಆಧಾರ್‌ನಲ್ಲಿನ ಹೆಸರು, ಜನ್ಮ ದಿನಾಂಕ, ವಿಳಾಸದಂತಹ ಪ್ರಮುಖ ವಿವರಗಳನ್ನು ತಿದ್ದುಪಡಿ ಮಾಡಿಸಲು ಸಾರ್ವಜನಿಕರು ತೀವ್ರ ಅಸೌಕರ್ಯ ಅನುಭವಿಸುವಂತಾಗಿದೆ. ಹೊಸ ವರ್ಷದ ಆರಂಭದಿಂದಲೇ ಪೋಸ್ಟ್ ಆಫೀಸ್ ಮುಂದೆ ಬೆಳಗಿನ ಜಾವದಿಂದ ಜನರು ಸಾಲುಗಟ್ಟಿ ನಿಲ್ಲುವ ದೃಶ್ಯ ಕಂಡುಬರುತ್ತಿದ್ದು, ದಿನನಿತ್ಯದ ಕಿರಿಕಿರಿ ಹೆಚ್ಚಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ಹಿಂದೆ ತಾಲೂಕು ಆಡಳಿತ ಸೌಧದಲ್ಲಿ ಆಧಾರ ನೋಂದಣಿ ಹಾಗೂ ತಿದ್ದುಪಡಿ ಸೇವೆ ಲಭ್ಯವಿದ್ದರೂ, ಅದು ಬಂದಾಗಿ ಸುಮಾರು ಒಂದು ತಿಂಗಳು ಕಳೆದಿದೆ. ಪ್ರಸ್ತುತ ಪೋಸ್ಟ್ ಆಫೀಸ್ ಮಾತ್ರವೇ ಏಕೈಕ ಕೇಂದ್ರವಾಗಿದ್ದು, ರಜಾ ದಿನಗಳನ್ನು ಹೊರತುಪಡಿಸಿ ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಮುಂಗಡವಾಗಿ 30-40 ಟೋಕನ್‌ಗಳನ್ನು ಮಾತ್ರ ವಿತರಿಸಲಾಗುತ್ತಿದೆ. ಪಟ್ಟಣದವರಷ್ಟೇ ಅಲ್ಲದೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸುವವರು ಟೋಕನ್ ಪಡೆಯಲು ಮುಗಿ ಬೀಳುವ ಸ್ಥಿತಿ ನಿರ್ಮಾಣವಾಗಿದೆ.
ಇದನ್ನು ಓದಿ: University blue/ ಸಾಕ್ಷಿ ನಾಯ್ಕ – ಶಟಲ್ ಬ್ಯಾಡ್ಮಿಂಟನ್ ಯುನಿವರ್ಸಿಟಿ ಬ್ಲೂ
ವಾರದ ನಿಗದಿತ ಸಂಖ್ಯೆಯ ಟೋಕನ್‌ಗಳು ಮುಗಿದ ಬಳಿಕ ಅರ್ಜಿ ಸಲ್ಲಿಸಲು ಬಾರದವರು ಮತ್ತೆ ಇನ್ನೊಂದು ವಾರ ಕಾಯಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಇದರಿಂದ ದಿನನಿತ್ಯ ದುಡಿದು ಜೀವನ ಸಾಗಿಸುವ ಕಾರ್ಮಿಕರು ಕೆಲಸಕ್ಕೆ ಹೋಗಲಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಪೋಸ್ಟ್ ಆಫೀಸ್‌ನಲ್ಲಿಯೇ ಈ ಕಾರ್ಯವ್ಯವಸ್ಥೆಯನ್ನು ಸಿಬ್ಬಂದಿಯೇ ನಿರ್ವಹಿಸಬೇಕಾಗಿದ್ದು, ಪ್ರತಿದಿನ ಗರಿಷ್ಠ 30ರಿಂದ 40 ನೋಂದಣಿಯಷ್ಟೇ ಸಾಧ್ಯವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: mobile hacked/ ಸರ್ಕಾರಿ ನೌಕರನ ಮೊಬೈಲ್ ಹ್ಯಾಕ್ – ೮ ಲಕ್ಷ ರೂ ಸಾಲ ಮಂಜೂರು
ಈ ಹಿಂದೆ ಆಧಾರ್ ಹೊಂದಿರುವವರು ಸ್ವತಃ ಅಥವಾ ಸೈಬರ್ ಕೇಂದ್ರಗಳ ಮೂಲಕ ಆನ್‌ಲೈನ್‌ನಲ್ಲಿ ತಿದ್ದುಪಡಿ ಮಾಡಿಕೊಳ್ಳಬಹುದಾಗಿತ್ತು. ಆದರೆ ದುರುಪಯೋಗದ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಆಧಾರ ಕಾರ್ಡ್ (Aadhaar card) ವ್ಯವಸ್ಥೆಯನ್ನು ರದ್ದುಪಡಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ ಎನ್ನಲಾಗಿದೆ.
ಇದನ್ನು ಓದಿ: Pratibha Karanji/ ಪ್ರತಿಭಾ ಕಾರಂಜಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಧಾರ್ ಸೇವೆ ಆರಂಭಿಸಲು ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದರೂ, ಇದುವರೆಗೂ ಕಾರ್ಯಾರಂಭವಾಗಿಲ್ಲ. ನೂತನ ನೋಂದಣಿ ಹಾಗೂ ತಿದ್ದುಪಡಿಗೆ ಹಿಂದಿನಂತೆ ಗ್ರಾಮ ಪಂಚಾಯಿತಿ ಕಚೇರಿಗಳಲ್ಲೇ ವ್ಯವಸ್ಥೆ ಕಲ್ಪಿಸಿದರೆ ಗ್ರಾಮೀಣ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಪರಿಹಾರ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇದನ್ನು ಓದಿ: Sodigadde jatra/ ಜನವರಿ 23ರಿಂದ ಸೋಡಿಗದ್ದೆ ಜಾತ್ರೆ



