ಕಾರವಾರ : ರಾಜ್ಯದಲ್ಲಿ ಮಾರ್ಚ್–ಏಪ್ರಿಲ್‌ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಉತ್ತರಕನ್ನಡ ಜಿಲ್ಲೆಯು ರಾಜ್ಯಮಟ್ಟದಲ್ಲಿ ಗಣನೀಯ ಸಾಧನೆ ತೋರಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯು ರಾಜ್ಯದಲ್ಲಿ ೫ನೇ ಸ್ಥಾನ (ಕಳೆದ ಬಾರಿ ೧೨ನೇ ಸ್ಥಾನ) ಪಡೆದಿದ್ದು, ಶೇ.೮೬.೫೪ ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ ೯೮೪೨ ವಿದ್ಯಾರ್ಥಿಗಳಲ್ಲಿ ೮೫೧೭ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದೇ ರೀತಿ ಶಿರಸಿ ಶೈಕ್ಷಣಿಕ ಜಿಲ್ಲೆಯು ರಾಜ್ಯದಲ್ಲಿ ೮ನೇ ಸ್ಥಾನ (ಕಳೆದ ಬಾರಿ ೨೩ನೇ ಸ್ಥಾನ) ಪಡೆದಿದ್ದು, ಶೇ.೮೪.೬೪ ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ ೧೦೦೪೬ ವಿದ್ಯಾರ್ಥಿಗಳಲ್ಲಿ ೮೫೦೩ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ರಾಜ್ಯಮಟ್ಟದ ರ‌್ಯಾಂಕ್:
ಶಿರಸಿಯ ೩ ವಿದ್ಯಾರ್ಥಿಗಳು ೬೨೫ ಕ್ಕೆ ೬೨೪ ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಮತ್ತು ಒಬ್ಬ ವಿದ್ಯಾರ್ಥಿ ೬೨೩ ಅಂಕ ಗಳಿಸಿ ರಾಜ್ಯಕ್ಕೆ ತೃತೀಯರಾಗಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳ ಪಟ್ಟಿಯಲ್ಲಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಶಿರಸಿ ಶೈಕ್ಷಣಿಕ ಜಿಲ್ಲೆಯ ವಿದ್ಯಾರ್ಥಿಗಳಾದ ನಗರದ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ದರ್ಶನ್ ಭಟ್, ಗೋಳಿ ಪ್ರೌಢ ಶಾಲೆಯ ಚಿನ್ಮಯ ಹೆಗಡೆ, ಹಾಗೂ ಭೈರುಂಬೆ ಶ್ರೀರಾಮ ಕೆ,ಎಂ ರಾಜ್ಯಕ್ಕೆ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ, ಅದೆ ರೀತಿ ಶಿರಸಿಯ ಗೋಳಿ ಪ್ರೌಢ ಶಾಲೆಯ ತೃಪ್ತಿ ಗೌಡ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಶಾರದಾಂಬಾ ಆಂಗ್ಲ ಮಾಧ್ಯಮ ಭೈರುಂಬೆ ಪ್ರೌಢ ಶಾಲೆಯಲ್ಲಿ ಓದಿದ ಶ್ರೀರಾಮ್ ಕೆ ಎಂ ೬೨೬ಕ್ಕೆ ೬೨೪ ಅಂಕ ಪಡೆದುಕೊಂಡಿದ್ದಾರೆ, ಗೋಳಿ ಪ್ರೌಢಶಾಲೆಯ ವಿದ್ಯಾರ್ಥಿನಿ ಚಿನ್ಮಯ ಶ್ರೀಪಾದ ಹೆಗಡೆ ೬೨೫ಕ್ಕೆ ೬೨೪ ಅಂಕ ಪಡೆದುಕೊಂಡಿದ್ದಾಳೆ ಇನ್ನೂ ಮಾರಿಕಾಂಬಾ ಪ್ರೌಢ ಶಾಲೆಯ ದರ್ಶನ್ ಭಟ್ ಕೂಡ ೬೨೫ಕ್ಕೆ ೬೨೪ ಅಂಕಗಳನ್ನ ಪಡೆಯುವ ಮೂಲಕ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ಇನ್ನೂ ಶಿರಸಿಯ ಸಿದ್ದಿವಿನಾಯಕ ಪ್ರೌಢಶಾಲೆಯ ತೃಪ್ತಿ ಗೌಡ ೬೨೫ಕ್ಕೆ ೬೨೩ ಅಂಕವನ್ನ ಗಳಿಸುವ ಮೂಲಕ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : ಎಸ್ಸೆಸ್ಸೆಲ್ಸಿ ಪರೀಕ್ಷೆ; ಭಟ್ಕಳ ತಾಲೂಕಿನಲ್ಲಿ ಶೇ.96 ಫಲಿತಾಂಶ
ಜಿಲ್ಲೆಯಲ್ಲಿ ಈ ಬಾರಿಯ ಫಲಿತಾಂಶ ವೃದ್ಧಿಗಾಗಿ ಶಿಕ್ಷಣ ಇಲಾಖೆ ವತಿಯಿಂದ ಹಲವು ಶೈಕ್ಷಣಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಎಲ್ಲಾ ಶಾಲೆಗಳ ಮುಖ್ಯ ಗುರುಗಳು ಮತ್ತು ಶಿಕ್ಷಕರೊಂದಿಗೆ ನಿರಂತರ ಸಭೆಗಳನ್ನು ನಡೆಸಿ ಸೂಕ್ತ ಮಾರ್ಗದರ್ಶನ ನೀಡಿದ್ದರು. ಡಿಸೆಂಬರ್ ವೇಳೆಗೆ ಎಲ್ಲಾ ವಿಷಯವಾರು ಭೋದನೆಯನ್ನು ಮುಕ್ತಾಯಗೊಳಿಸಿ, ಮಾರ್ಚ್ ವರೆಗೆ ಪುನರ್ಮನನ ಕಾರ್ಯಕ್ರಮ ನಡೆಸಲಾಯಿತು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ತರಬೇತಿ ನೀಡಿ ಸಜ್ಜುಗೊಳಿಸಲಾಯಿತು. ಶಾಲಾ ಮತ್ತು ತಾಲೂಕು ಹಂತದಲ್ಲಿ ನುರಿತ ಶಿಕ್ಷಕರು ಮತ್ತು ಸಂಪನ್ಮೂಲ ವ್ಯಕ್ತಿಗಳಿಂದ ಕೋಚಿಂಗ್ ವ್ಯವಸ್ಥೆ ಮಾಡಲಾಗಿತ್ತು. ಗುಣಮಟ್ಟದ ಫಲಿತಾಂಶಕ್ಕಾಗಿ ಶಾಲಾ ಹಂತದ ವಿವಿಧ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಉಚಿತ ಊಟ ವಸತಿಯೊಂದಿಗೆ ಒಂದು ವಾರದ ವಿಶೇಷ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಲ್ಲದೇ ಶಾಲೆಯ ಮುಖ್ಯ ಗುರುಗಳು ಮತ್ತು ಶಿಕ್ಷಕರಿಗೂ ತಾಲೂಕು ಮಟ್ಟದಲ್ಲಿ ತರಬೇತಿಗಳನ್ನು ಆಯೋಜಿಸುವುದರ ಜೊತೆಗೆ, ಮಕ್ಕಳ ಕಲಿಕೆಯ ಕುರಿತಂತೆ ನಿರಂತರವಾಗಿ ಶಿಕ್ಷಕರು ಮತ್ತು ಪೋಷಕರೊಂದಿಗೆ ಅನುಪಾಲನೆ ಮಾಡಲಾಗಿತ್ತು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.
ಇದನ್ನೂ ಓದಿ : ಏಳು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ರ‍್ಯಾಂಕ್, ಶೇ.೧೦೦ ಫಲಿತಾಂಶ
ಜಿಲ್ಲೆಯಲ್ಲಿ ಗರಿಷ್ಠ ಫಲಿತಾಂಶ ಪಡೆಯುವ ತಾಲೂಕುಗಳಿಗೆ ತಮ್ಮ ಒಂದು ತಿಂಗಳ ವೇತನದ ಮೊತ್ತವನ್ನು ಬಹುಮಾನವನ್ನಾಗಿ ನೀಡುವ ಘೋಷಣೆಯನ್ನು ಜಿಲ್ಲಾಧಿಕಾರಿ ಮಾಡಿದ್ದರು. ಇದು ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ಇನ್ನಷ್ಟು ಉತ್ಸಾಹದಿಂದ ಫಲಿತಾಂಶ ವೃದ್ಧಿಗೆ ಆರೋಗ್ಯಕರ ಪೈಪೋಟಿಯಿಂದ ಕರ್ತವ್ಯ ನಿರ್ವಹಿಸಲು ಪ್ರೇರಣೆಯಾಯಿತು ಎನ್ನುತ್ತಾರೆ ಉತ್ತರ ಕನ್ನಡ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿದೇಶಕರುಗಳು.
ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ದೃತಿಗೆಡುವ ಅವಶ್ಯಕತೆಯಿಲ್ಲ. ನಿಮಗೆ ಉತ್ತೀಣರಾಗಲು ಮತ್ತೊಂದು ಅವಕಾಶವಿದೆ. ಜೂನ್ ೭ರಿಂದ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆ-೨ ರಲ್ಲಿ ತಮಗೆ ಪುನಃ ಪರೀಕ್ಷೆ ಬರೆಯಲು ಅವಕಾಶವಿದೆ. ಜಿಲ್ಲೆಯ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಶಿಕ್ಷಕರು ಪ್ರಸ್ತುತ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳಿಗೆ ಸಾಂತ್ವನ ಹೇಳಬೇಕು. ಪರೀಕ್ಷೆ-೨ಕ್ಕಾಗಿ ಅವರಿಗೆ ಅಗತ್ಯ ತರಬೇತಿ ನೀಡುವುದರ ಮೂಲಕ ಅವರೂ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಜಿಲ್ಲೆಯು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ.೧೦೦ ಸಾಧನೆ ಮಾಡಲು ತಮ್ಮ ಶಕ್ತಿ ಮೀರಿ ಶ್ರಮಿಸಬೇಕು.
– ಗಂಗೂಬಾಯಿ ಮಾನಕರ, ಜಿಲ್ಲಾಧಿಕಾರಿ