ಭಟ್ಕಳ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿರುವುದನ್ನು ಹಿಂಪಡೆಯುವಂತೆ ಭಟ್ಕಳ ಬಿಜೆಪಿ ಮಂಡಲ ವತಿಯಿಂದ ಕಾರಿಗೆ ಹಗ್ಗ ಕಟ್ಟಿ ಎಳೆದು ಪ್ರತಿಭಟನಾ ಮೆರವಣಿಗೆ ನಡೆಸಿ ಸಹಾಯಕ ಆಯುಕ್ತ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಪೆಟ್ರೋಲ್, ಡಿಸೇಲ್ ಬೆಲೆಯನ್ನು ದಿಢೀರ್ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಹೊರೆ ಉಂಟು ಮಾಡಿದೆ. ಬೇರೆ ಯಾವುದೇ ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಜಾಸ್ತಿ ಮಾಡಿಲ್ಲ. ಆದರೆ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸುವ ಏಕೈಕ ಉದ್ದೇಶದಿಂದ ಪೆಟ್ರೋಲ್, ಡಿಸೇಲ್ ಬೆಲೆ ಜಾಸ್ತಿ ಮಾಡಿದೆ. ಇದಕ್ಕೆ ಪುಷ್ಟಿ ಎಂಬಂತೆ ರಾಜ್ಯದ ಕೆಲ ಸಚಿವರು ಗ್ಯಾರಂಟಿ ಯೋಜನೆಯ ಹಣ ಹೊಂದಿಸುವ ಸಲುವಾಗಿಯೇ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚು ಮಾಡಲಾಗಿದೆ ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ತೈಲ ಬೆಲೆ ಏರಿಕೆಯಿಂದ ದ್ವಿಚಕ್ರ ವಾಹನ, ಆಟೋ, ಟ್ಯಾಕ್ಸಿ, ಗೂಡ್ಸ್ ರಿಕ್ಷಾ ಸೇರಿದಂತೆ ವಿವಿಧ ವಾಹನ ಇದ್ದವರಿಗೆ ಹೊರೆಯಾಗಲಿದೆ. ತೈಲ ಬೆಲೆ ಏರಿಕೆಯಿಂದ ಎಲ್ಲಾ ಸಾಮಗ್ರಿಗಳ ಬೆಲೆ ಏರಿಕೆ ಆಗಲಿದೆ. ಜನರು ತೊಂದರೆ ಅನುಭವಿಸಲಿದ್ದಾರೆ. ಲೋಕಸಭೆ ಚುನಾವಣೆವರೆಗೂ ತೈಲ ಬೆಲೆ ಏರಿಕೆ ಮಾಡದ ಸರಕಾರ ಚುನಾವಣೆ ಮುಗಿದು ಫಲಿತಾಂಶ ಪ್ರಕಟ ಆದ ಬಳಿಕ ದಿಢೀರ್ ಎಂದು ತೈಲ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರಿಗೆ ತೊಂದರೆ ಉಂಟಾಗುವಂತೆ ಮಾಡಿದೆ. ರಾಜ್ಯದ ಜನತೆಯ ಹಿತದೃಷ್ಟಿಯಿಂದ ತೈಲ ಬೆಲೆ ಹೆಚ್ಚಿಸಿರುವುದನ್ನು ಕೂಡಲೇ ಹಿಂಪಡೆಯುವಂತೆ ರಾಜ್ಯ ಸರಕಾರಕ್ಕೆ ತಾವು ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಮೇಲೆ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರಿಗೆ ಹೊರೆ ಮಾಡಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಗ್ಯಾರಂಟಿ ಯೋಜನೆಯನ್ನೇ ಕಾಂಗ್ರೆಸ್ ನೇತೃತ್ವದ ಸರಕಾರ ಅಭಿವೃದ್ಧಿ ಎಂದು ಬಿಂಬಿಸುತ್ತಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊಲೆ, ಸುಲಿಗೆ ಹೆಚ್ಚಿದ್ದು, ಕಾನೂನು ಸುವ್ಯವಸ್ತೆ ಸಂಪೂರ್ಣ ಹದಗೆಟ್ಟಿದೆ. ಎಲ್ಲಾ ಕಡೆ ಅಕ್ರಮ ಚಟುವಟಿಕೆ ಹೆಚ್ಚಿದೆ. ಇದಕ್ಕೆ ಸೂಕ್ತ ಕಡಿವಾಣ ಹಾಕುವ ಕೆಲಸ ಮಾಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : ದೇವಿದಾಸ ಜೆ. ಕಾಮತ ಅವರಿಗೆ ಶ್ರದ್ಧಾಂಜಲಿ
ರಸ್ತೆ ತಡೆದು ಆಕ್ರೋಶ : ಪ್ರತಿಭಟನಾ ಮೆರವಣಿಗೆ ವೇಳೆ ಶಂಸುದ್ದಿನ್ ಸರ್ಕಲ್ ಸಮೀಪ ರಸ್ತೆ ತಡೆದು ಕೆಲಕಾಲ ಧರಣಿ ನಡೆಸಿದರು. ಈ ವೇಳೆ ಸ್ಥಳಕ್ಕೆ ಸಹಾಯಕ ಆಯುಕ್ತೆ ಡಾ.ನಯನ ಆಗಮಿಸಿ ಮನವಿ ಸ್ವೀಕರಿಸಿದರು. ತಹಶೀಲ್ದಾರ್ ನಾಗರಾಜ ನಾಯ್ಕಡ ಉಪಸ್ಥಿತರಿದ್ದರು.
ಇತಿಹಾಸದಲ್ಲೇ ಮೊದಲ ಬಾರಿಗೆ ಯಾವ ಸರ್ಕಾರ ಮಾಡದೆ ಇರುವ ತೈಲ ಬೆಲೆ ಏರಿಕೆಯನ್ನು ಕಾಂಗ್ರೆಸ್ ರಾಜ್ಯ ಸರ್ಕಾರ ಮಾಡಿ ಜನ ಸಾಮಾನ್ಯರಿಗೆ ಕಷ್ಟಕ್ಕೆ ನೂಕಿಸಿದೆ. ಇದರ ಜೊತೆಯಲ್ಲಿ ವಾಣಿಜ್ಯ ತೆರಿಗೆ, ೧೦೦ ರೂಪಾಯಿ ಇರುವ ಬಾಂಡ್ ಪೇಪರ್ ಬೆಲೆಯನ್ನು ೫೦೦ ರೂಪಾಯಿಗೆ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ಏರಿಸಿದೆ. ಅಬಕಾರಿ ತೆರಿಗೆ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿಯ ಮಾರ್ಗಸೂಚಿಯಲ್ಲಿ ೧ಕ್ಕೆ ೩ಪಟ್ಟು ಮಾಡಿದ್ದಾರೆ. ಸಾಮಾನ್ಯ ಜನರಿಗೆ ಸಿಗುವ ವಿದ್ಯುತ್ ಟಿಸಿ ಬೆಲೆ ಯಾವುದೇ ಸರ್ಕಾರ ಇದ್ದರೂ ರೈತರಿಗೆ ಕೇವಲ ೧೦ ಸಾವಿರವಿತ್ತು .ಆದರೆ ಈ ಕಾಂಗ್ರೆಸ್ ಸರ್ಕಾರ ಅದಕ್ಕೆ ೩ರಿಂದ ೬ ಲಕ್ಷ ಹಣ ಪಡೆದುಕೊಳ್ಳುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ ಸರ್ಕಾರ ಬಂದಾಗಿನಿಂದ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿ ಸಾರ್ವಜನಿಕ ಹಣ ದೋಚುವ ಕೆಲಸ ಮಾಡುತ್ತಿದೆ. ತೈಲ ಬೆಲೆಯ ಇಳಿಕೆ ಮಾಡುವ ತನಕ ನಾವು ಹೋರಾಟ ಮಾಡುತ್ತೇವೆ ಎಂದು ಮಾಜಿ ಶಾಸಕ ಸುನೀಲ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ೫೦ಕ್ಕೂ ಅಧಿಕ ಅಡಿಕೆ ಸಸಿಗಳು ಹಂದಿ ಕಾಟದಿಂದ ಹಾನಿ
ಬಿಜೆಪಿ ಹಿರಿಯ ಮುಖಂಡ ಗೋವಿಂದ ನಾಯ್ಕ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದಿನ ನಿತ್ಯ ಒಂದಲ್ಲ ಒಂದು ಭ್ರಷ್ಟ ವ್ಯವಹಾರ ಮಾಡಿಕೊಂಡು ಬರುತ್ತಿದೆ. ವಾಲ್ಮೀಕಿ ನಿಗಮದಿಂದ ೧೮೯ ಕೋಟಿ ಹಾಗೂ ಎಸ್.ಸಿ.ಎಸ್.ಟಿ ನಿಗಮದಿಂದ ೧೨ ಸಾವಿರ ಕೋಟಿ ಹಣವನ್ನು ಅವ್ಯವಹಾರ ಮಾಡಿದ್ದಾರೆ. ಇದರಿಂದ ಸಿ.ಬಿ.ಐ. ತನಿಖೆ ಒಳಗಾಗಿದೆ. ಇದರ ನೈತಿಕತೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಇರಲು ಯೋಗ್ಯರಲ್ಲ ಎಂದ ಅವರು, ಒಂದಲ್ಲ ಒಂದು ವಿಷಯದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿದ ಕಾಂಗ್ರೆಸ್ ಸರಕಾರ ಕೆಲ ದಿನಗಳ ಹಿಂದೆ ತೈಲ ಬೆಲೆ ಏರಿಕೆ ಮಾಡಿದ್ದರಿಂದ ದಿನಸಿ ಸಾಮಗ್ರಿಗಳ ಬೆಲೆ ಏರಿಕೆಯಾಗುತ್ತಿದೆ. ರಾಜ್ಯ ಸರ್ಕಾರದ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರಕ್ಕೆ ಅಧಿಕಾರ ನಡೆಸಲು ನೈತಿಕತೆ ಇಲ್ಲ . ತಕ್ಷಣ ರಾಜೀನಾಮೆ ಕೊಟ್ಟು ಅಧಿಕಾರದಿಂದ ಇಳಿಯಬೇಕು. ಮುಂದಿನ ದಿನದಲ್ಲಿ ಪಂಚ ರಾಜ್ಯ ಚುನಾವಣೆ ನಡೆಯಲಿದ್ದು, ಕರ್ನಾಟಕವನ್ನು ಎಟಿಎಂ ಆಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪ ಮಾಡಿದರು.
ಇದನ್ನೂ ಓದಿ :ಜೂನ್ ೧೯ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ
ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಮಾತನಾಡಿ, ಕಾಂಗ್ರೆಸ್ ಸರ್ಕಾರ ಭಿಕ್ಷುಕರಿಗೆ ೫೦ ಪೈಸೆ ಹಾಕಿ ಅವರಿಂದ ೫೦ ರೂ ಪಡೆಯುವ ಕೆಲಸ ಮಾಡುತ್ತಿದೆ. ಬಿಜೆಪಿ ಸರ್ಕಾರ ಕೃಷಿ ಸಮ್ಮಾನ್ ಯೋಜನೆಯಲ್ಲಿ ೪ ಸಾವಿರ ಹಣ ನೀಡುತ್ತಿತ್ತು. ಅದನ್ನು ಕಿತ್ತುಕೊಂಡು ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳುತ್ತಿದೆ. ಇದರಿಂದ ಜನ ಸಾಮಾನ್ಯರು ತಿಳಿದುಕೊಳ್ಳಬೇಕು, ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತಂದು ನಾವು ಎಷ್ಟು ದೊಡ್ಡ ತಪ್ಪು ಮಾಡಿದ್ದೇವೆ ಎಂದು. ಮುಂದಿನ ದಿನಗಳಲ್ಲಿ ನಾವೆಲ್ಲ ಎಚ್ಚೆತ್ತುಕೊಂಡು ಇಂತಹ ನೀಚ ಕಾಂಗ್ರೆಸ್ ಸರ್ಕಾರವನ್ನು ಇಂದಿಗೂ ಅಧಿಕಾರಕ್ಕೆ ಬರದಂತೆ ಮಾಡಬೇಕು ಎಂದರು.
ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತಾರಾಮ ಮಾತನಾಡಿ, ಕಾಂಗ್ರೆಸ್ ಸರ್ಕಾರ ಎಲ್ಲಾ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿ ಉದ್ಧಟತನ ತೋರಿಸುತ್ತಾ ಭ್ರಷ್ಟಾಚಾರ ಮಾಡುತ್ತಿದೆ. ಎಟಿಎಂ ಸರಕಾರವನ್ನಾಗಿ ಮಾಡಿಕೊಂಡು ಪ್ರತಿ ಹಂತದಲ್ಲಿಯೂ ಲೂಟಿ ಮಾಡುತ್ತಿದೆ. ಜನಸಾಮಾನ್ಯರಿಗೆ ಹಾಗೂ ಅಧಿಕಾರಿಗಳಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಈ ಭ್ರಷ್ಟ ಸರ್ಕಾರವನ್ನು ತೊಲಗಿಸುವಂತಹ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಕರೆ ನೀಡಿರುವುದರಿಂದ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಮುಖಂಡರಾದ ದಿನೇಶ ನಾಯ್ಕ, ಶೇಷಗಿರಿ ನಾಯ್ಕ, ಪಾಂಡುರಂಗ ನಾಯ್ಕ ಆಸರಕೇರಿ, ವೆಂಕಟೇಶ ನಾಯ್ಕ, ಶ್ರೀನಿವಾಸ ನಾಯ್ಕ ಹನುಮಾನ ನಗರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.